Advertisement

ವಿಜಯಪುರ ಕಾಮಗಾರಿ ಮಾದರಿಯಾಗಲಿ: ಯತ್ನಾಳ

03:04 PM Jan 03, 2022 | Shwetha M |

ವಿಜಯಪುರ: ಗುತ್ತಿಗೆದಾರರು ವಿಜಯಪುರ ನಗರದಲ್ಲಿ ಮಾಡುವ ಕಾಮಗಾರಿಗಳನ್ನು ಅತ್ಯಂತ ಸಮರ್ಪಕವಾಗಿ ಮಾಡಬೇಕು. ರಾಜ್ಯಕ್ಕೇ ಮಾದರಿ ಯಾಗುವ ರೀತಿಯಲ್ಲಿ ಕಟ್ಟಡ ಹಾಗೂ ಇತರೆ ಯೋಜನೆಗಳ ಕಾಮಗಾರಿ ಮಾಡುವ ಮೂಲಕ ವಿಶ್ವಾಸಗಳಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿವಿಮಾತು ಹೇಳಿದರು.

Advertisement

ನಗರದ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ 20 ಲಕ್ಷ ರೂ. ವೆಚ್ಚದ ಗುರುಭವನ ಕಟ್ಟಡ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನಲ್ಲಿ ಕೈಗೊಳ್ಳಲಾದ ಹೆಚ್ಚುವರಿ ತರಗತಿ ಕೊಠಡಿಗಳ ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಸದ್ಯ ಕೈಗೆತ್ತಿಕೊಳ್ಳಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬಹಳ ಮುತುವರ್ಜಿ ವಹಿಸಿ ಮಾದರಿ ಆಗುವಂತೆ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್‌ ಸಂಕಷ್ಟದ ಕಾರಣದಿಂದ ಸದರಿ ಕಾಮಗಾರಿಗಳು ಆರಂಭಕ್ಕೆ ವಿಳಂಬವಾಗಿದೆ. ಹೀಗಾಗಿ ಇನ್ನು ವಿಳಂಬ ಮಾಡದೇ ತ್ವರಿತವಾಗಿ ಕಾಮಗಾರಿ ಕೈಗೊಂಡು ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಈಗಾಗಲೇ ಒದಗಿಸಲಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅನುದಾನದ ಕೊರತೆಯಾದಲ್ಲಿ, ಹೆಚ್ಚುವರಿಯಾಗಿ ಅಗತ್ಯದ ಅನುದಾನ ನೀಡುವ ಭರವಸೆ ನೀಡಿದರು.

ನಗರದಲ್ಲಿ ಈಗ ಕೈಗೊಳ್ಳುತ್ತಿರುವ ಶೈಕ್ಷಣಿಕ ಸೌಲಭ್ಯಗಳ ಯೋಜನೆಗಳ ಕಾಮಗಾರಿಗಳು ಭವಿಷ್ಯದಲ್ಲಿ ವಿಜಯಪುರ ನಗರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕಲಿಯಲು ಹಾಗೂ ಶಿಕ್ಷಕರಿಗೆ ಕಲಿಸುವಂತಹ ಚಟುವಟಿಕೆಗಳಿಗೆ ಬಹಳ ಪೂರಕವಾಗಲಿವೆ ಎಂದರು.

Advertisement

ಇಲ್ಲಿನ ಇನ್ನು ಕೆಲ ಕಟ್ಟಡಗಳ ಕಾಮಗಾರಿಗಳನ್ನು ಶಿಕ್ಷಕರ ದಿನವಾದ ಸೆಪ್ಟೆಂಬರ್‌ 5ರೊಳಗಾಗಿ ಪೂರ್ಣಗೊಳಿಸಿದರೆ ಹೆಚ್ಚು ಅರ್ಥಪೂರ್ಣವಾಗಿ ಆ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಬಹುದು. ಅದರಂತೆ ನಗರದ ಕೆಲವು ಶಾಲಾ, ಕಾಲೇಜುಗಳ ಆವರಣದಲ್ಲಿ ಶೌಚಾಲಯಗಳ ನಿರ್ಮಾಣಕ್ಕೂ ಒತ್ತು ನೀಡಬೇಕು ಎಂದು ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ವಿ. ಹೊಸೂರ, ಸಿದ್ಧು ಹಂಚನಾಳ, ಟಿ.ಎಸ್‌.ಗೌಡರ, ಸುರೇಶ ಪಾಟೀಲ ಸೇರಿದಂಥೆ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next