ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆ ಮೂರನೇ ಹಂತ ಮಸೂತಿ ಜಾಕ್‌ವೆಲ್ನಿಂದ ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ನಿರೀಕ್ಷಿತ ಸಮಯಕ್ಕಿಂತ ಎರಡು ದಿನ ವಿಳಂಬವಾಗಿ ಆರಂಭಗೊಂಡಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬುಧವಾರವೇ ಆರಂಭಗೊಳ್ಳಬೇಕಿದ್ದ ನೀರು ಹರಿಸುವ ಕಾರ್ಯ ತಾಂತ್ರಿಕ ಕಾರಣಗಳಿಂದಾಗಿ ಶುಕ್ರವಾರ ಬೆಳಗ್ಗೆ 11ರಿಂದ ನಾಲೆಗೆ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಮತ್ತೂಂದೆಡೆ ಇದೀಗ ಬೇಸಿಗೆ ಪರಿಸ್ಥಿತಿಯೂ ಎದುರಾಗಿದೆ. ಹೀಗಾಗಿ ತೀವ್ರ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಾಗಿ ಪರಿಸ್ಥಿತಿ ಎದುರಿಸಲು ಮುಳವಾಡ ಏತ ನೀರಾವರಿ ಯೋಜನೆಯಿಂದ ವಿಜಯಪುರ ಮುಖ್ಯ ಕಾಲುವೆ, ಹೂವಿನ ಹಿಪ್ಪರಗಿ ಹಾಗೂ ಬಸವನಬಾಗೇವಾಡಿ ಶಾಖಾ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.
ಸದ್ಯ ನಾಲೆಗೆ ಹರಿಸುತ್ತಿರುವ ನೀರನ್ನು ಜಿಲ್ಲೆಯ ಜನ-ಜಾನುವಾರುಗಳಿಗಾಗಿ ಕುಡಿಯಲು ನೀರಿಗಾಗಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಮುಖ್ಯ ಕಾಲುವೆ ಆರಂಭಿಕ ಹಂತದಲ್ಲಿಯೇ ವಿಜಯಪುರ-ಗದಗ ಸಂಪರ್ಕಿಸುವ ರೈಲ್ವೇ ಲೈನ್ ಕಾಮಗಾರಿ ಕೆಳಭಾಗದಿಂದ ಪಾಸಿಂಗ್ ಆಗುವ ಕಾಲುವೆ ಕಾಮಗಾರಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಈ ವಿಳಂಬದಿಂದಾಗಿ ನಾಲೆಗೆ ನಿಗದಿತ ಸಮಯದಲ್ಲಿ ನೀರು ಹರಿಸಲು ಸಾಧ್ಯವಾಗಿರಲಿಲ್ಲ.
ಆದರೆ ಕಳೆದ ಬಾರಿಯಂತೆ ಈ ವರ್ಷವೂ ತುರ್ತಾಗಿ ಪರ್ಯಾಯವಾಗಿ ಬಂಡ್ ನಿರ್ಮಿಸಿ ಪೈಪ್‌ಲೈನ್ ಅಳವಡಿಸಿ ನೀರು ಹರಿಸಲು ಮುಂದಾಗಿದ್ದರೂ, ರೈಲ್ವೆ ಇಲಾಖೆ ಅನುಮತಿ ಇಂದಿನವರೆಗೂ ದೊರೆಯದ ಕಾರಣ ಮತ್ತೇ ವಿಳಂಬವಾಗಿತ್ತು. ಕಳೆದ ಒಂದು ವಾರದಿಂದ ನೀರಾವರಿ ಇಲಾಖೆ ಅಧಿಕಾರಿಗಳು ಹಗಲು-ರಾತ್ರಿ ಕಾರ್ಯ ಮಾಡಿ ರೈಲ್ವೆ ಇಲಾಖೆಯವರು ಸೂಚಿಸಿದ ಎಲ್ಲ ಮುಂಜಾಗೃತಾ ಕ್ರಮಗಳನ್ನು ಜರುಗಿಸಿ ನೀರು ಹರಿಸಲು ಆರಂಭಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಮಸೂತಿ ಜಾಕ್‌ವೆಲ್ನಿಂದ ಸದ್ಯ 5400 ಎಚ್.ಪಿ.ಯ 1 ಮೊಟಾರ್‌ನಿಂದ 7.5 ಕ್ಯೂಮೆಕ್ಸ್ ನೀರು ಹರಿಸಲಾಗುತ್ತಿದೆ. ಯಾವುದೇ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳದಿದ್ದರೆ ಇನ್ನೊಂದು ಮೊಟಾರ್‌ನ್ನು ಶನಿವಾರದಿಂದ ಆರಂಭಿಸಲಾಗುವುದು. ಮುಂದಿನ 15 ದಿನಗಳವರೆಗೆ ಸತತವಾಗಿ ನೀರು ಹರಿಸಿ ಕಾಲುವೆ ವ್ಯಾಪ್ತಿಯ ಎಲ್ಲ ಕೆರೆ ಹಾಗೂ ಬಾಂದಾರ್‌ಗಳನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಂಬಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಕಳೆದ ಬಾರಿ 2.35 ವ್ಯಾಸದ ಎರಡು ಪೈಪ್ ಅಳವಡಿಸಿ 25 ಕ್ಯೂಮೆಕ್ಸ್ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ 2.35 ವ್ಯಾಸದ ಒಂದೇ ಪೈಪ್ ಅಳವಡಿಸಿದ್ದರಿಂದ 15 ಕ್ಯೂಮೆಕ್ಸ್ ನೀರು ಹರಿಸಲಾಗುತ್ತಿದೆ. ಆದ್ದರಿಂದ ಪ್ರಥಮ 7 ದಿನ ವಿಜಯಪುರ ಮುಖ್ಯ ಕಾಲುವೆಯಲ್ಲಿ ಹಾಗೂ ನಂತರದ 7 ದಿನ ಬಸವನಬಾಗೇವಾಡಿ ಹಾಗೂ ಹೂವಿನಹಿಪ್ಪರಗಿ ಶಾಖಾ ಕಾಲುವೆಯಲ್ಲಿ ವಾರಾಬಂದಿ ಪದ್ಧತಿ ಅನುಸಾರ ನೀರು ಹರಿಸಲಾಗುತ್ತಿದ್ದು ರೈತರು ಸಹಕರಿಸಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ವಿನಂತಿಸಿದ್ದಾರೆ.
ರವಿವಾರ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ತಂಡ ಬರ ಅಧ್ಯಯನಕ್ಕಾಗಿ ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಅರಂಭಿಸಿರುವ ಈ ಕಾಮಗಾರಿ ವೀಕ್ಷಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ