ಬಳ್ಳಾರಿ: ಹೊಸಪೇಟೆ ಕೇಂದ್ರವಾಗಿಸಿಕೊಂಡು ನೂತನ ವಿಜಯನಗರ ಜಿಲ್ಲೆಗೆ ರಾಜ್ಯ ಸರ್ಕಾರದಿಂದ ಅಂತಿಮ ಮುದ್ರೆ ಒತ್ತಿಸುವಲ್ಲಿ ಸಚಿವ ಆನಂದ್‌ಸಿಂಗ್ ಯಶಸ್ವಿಯಾಗಿದ್ದಾರೆ. ವಾರದಲ್ಲಿ ಎರಡು ಮೂರು ಬಾರಿ ಖಾತೆ ಬದಲಾವಣೆಯಾದರೂ, ಬೇಡವಾದ ಖಾತೆಗಳನ್ನು ನೀಡಿದರೂ ಮೌನ ವಹಿಸಿರುವ ಸಿಂಗ್, ವಿಜಯನಗರ ಜಿಲ್ಲೆ ರಚನೆಯಲ್ಲಿ ತನ್ನ ಚಾಣಕ್ಯ ಶಪಥವನ್ನು ಈಡೇರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೊದಲ ಸಚಿವ ಸಂಪುಟದಲ್ಲಿ ಆನಂದ್‌ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖಾತೆ ನೀಡಲಾಗಿತ್ತು. ಈ ಖಾತೆಯನ್ನು ತಿರಸ್ಕರಿಸಿದ್ದ ಸಿಂಗ್, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕೇವಲ ಎರಡನೇ ದಿನಗಳಲ್ಲಿ ಖಾತೆ ಬದಲಾಯಿಸಿ ಅರಣ್ಯ ಮತ್ತು ಜೀವಿಶಾಸ್ತ್ರಿ ಇಲಾಖೆ ಖಾತೆ ಪಡೆಯುವಲ್ಲಿ ಯಶಸ್ವಿಯಾದರು.
ಈ ಖಾತೆಯನ್ನು ನಿರ್ವಹಿಸುವಲ್ಲಿ ವರ್ಷ ಕಳೆಯುವುದರೊಳಗೆ ಜ.21ರಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಆನಂದ್ ಸಿಂಗ್ ಅವರ ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆಯನ್ನು ವಾಪಸ್ ಪಡೆದು ಸಿಂಗ್ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಯಿತು. ಈ ಹಿಂದೆಯೇ ಒಮ್ಮೆ ಪ್ರವಾಸೋದ್ಯಮ ಖಾತೆಯನ್ನು ನಿಭಾಯಿಸಿದ್ದ ಅನುಭವ ಅವರಿಗೆ ಇದೆ. ಮೇಲಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿ ಸಹ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವುದರಿಂದ ಹಂಪಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕುರಿತು ಚಿಂತನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಖಾತೆ ದೊರೆತ ದಿನವೇ ತರಾತುರಿಯಲ್ಲಿ ಅಧಿ ಕಾರ ವಹಿಸಿಕೊಂಡಿದ್ದರು.
ಆದರೆ ಈ ಖಾತೆ ದೊರೆತ ಕೇವಲ ನಾಲ್ಕು ದಿನದಲ್ಲಿ ಆನಂದ್‌ಸಿಂಗ್ ಅವರ ಖಾತೆ ಮತ್ತೂಮ್ಮೆ ಬದಲಾವಣೆಯಾಯಿತು. ನಂತರ ಸಣ್ಣ ಖಾತೆಗಳಾದ ಮೂಲಸೌಕರ್ಯ ಮತ್ತು ಹಜ್, ವಕ್ಫ್ ಖಾತೆಯನ್ನು ನೀಡಲಾಗಿದೆ. ಬೇಡವಾದ ಖಾತೆ ನೀಡಿದರೂ ಎಲ್ಲೂ ಅಸಮಾಧಾನ ವ್ಯಕ್ತಪಡಿಸಿದೆ ಮೌನ ವಹಿಸಿದ್ದ ಆನಂದ್‌ಸಿಂಗ್ ವಿಜಯನಗರ ಜಿಲ್ಲೆಯನ್ನು ಅಧಿಕೃತಗೊಳಿಸುವ ಬಹುದಿನಗಳ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವೆಂಕೋಬಿ ಸಂಗನಕಲ್ಲು