Advertisement
13ನೇ ವಯಸ್ಸಿನಲ್ಲಿಯೇ ರಂಗಭೂಮಿ ಮೋಹಕ್ಕೆ ಸಿಲುಕಿ ಈವರೆಗೂ ನೂರಾರು ನಾಟಕಗಳಲ್ಲಿ ನಟಿಸಿರುವ ವಿಜಯಾನಂದ, ಉತ್ತರ ಕರ್ನಾಟಕದ ರಂಗಪ್ರಿಯರ ಬಾಯಲ್ಲಿ “ಕಲ್ಯಾಣಿ’ ಎಂದೇ ಹೆಸರು ಪಡೆದಿದ್ದಾರೆ. ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರಡಿಗುಡ್ಡದವರಾದ ವಿಜಯಾನಂದ ಕಲಾವಿದರ ಪಾಲಿಗೆ “ತಾಯಿಯಂತಿದ್ದ’ ಮಾತೃಹೃದಯಿಯಾಗಿದ್ದ ಶ್ರೀ ಪಂಡಿತ ಪುಟ್ಟರಾಜ ಗವಾಯಿ ಅವರ ಗರಡಿಯಲ್ಲಿ ಬೆಳೆದ ಕಲಾವಿದ.
Related Articles
Advertisement
ಪುಣ್ಯಾಶ್ರಮದ ಪುಣ್ಯಫಲ
ಎರಡು ವರ್ಷಗಳ ಕಾಲ ಮಠದಲ್ಲಿಯೇ ತಂಗಿ ರಂಗಕಲೆಯಲ್ಲಿ ಇನ್ನಷ್ಟು ನೈಪುಣ್ಯತೆ ಪಡೆದುಕೊಂಡ ವಿಜಯಾನಂದ, 1995ರಿಂದ 2017ರವರೆಗೆ ಡಾ| ಪುಟ್ಟರಾಜ ಗವಾಯಿ ಅವರ ನಾಟಕ ಕಂಪೆನಿಯಲ್ಲಿಯೇ ಪೌರಾಣಿಕ ನಾಟಕಗಳ ವಿವಿಧ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡರು.
ನಾಟಕಕಾರ ಪಿ.ಬಿ.ಧುತ್ತರಗಿ “ಮಲ ಮಗಳು’ ನಾಟಕದ “ಕಲ್ಯಾಣಿ’ ಪಾತ್ರ ವಿಜಯಾನಂದ ಕರಡಿಗುಡ್ಡ ಅವರನ್ನು ರಂಗಪ್ರೇಮಿಗಳ ಮನೆ ಮಗಳಾಗಿಸಿತು. ಈ ನಾಟಕ ಸುಮಾರು 10 ಸಾವಿರ ಪ್ರದರ್ಶನ ಕಂಡಿತ್ತು. ಇಂದಿಗೂ ವಿಜಯಾನಂದ ಕರಡಿಗುಡ್ಡ ಅವರನ್ನು ಅನೇಕರು “ಕಲ್ಯಾಣಿ’ ಎಂದೇ ಕರೆಯುತ್ತಾರೆ, ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಜನರ ಮೇಲೆ ಪ್ರಭಾವ ಬೀರಿದೆ. ಜತೆಗೆ ಕಲ್ಯಾಣಿ ಪಾತ್ರ ರಂಗಭೂಮಿ ರಾಣಿ ಎಂಬ ಪ್ರಶಸ್ತಿ ಇವರ ಪಾಲಾಗಿದೆ. 50ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಅಕ್ಕಮಹಾದೇವಿ, ಆದೋನಿ ಲಕ್ಷ್ಮಮ್ಮ, ಗತ್ತರಗಿ ಭಾಗ್ಯವತಿ, ಕಡ್ಲಿಮಟ್ಟಿ ಕಾಶಿಬಾಯಿ, ದೇವಿ ಮಹಾತೆ¾, ರಕ್ತರಾತ್ರಿ, ಮಗ ಹೋದರೂ ಮಾಂಗಲ್ಯ ಬೇಕು, ಬಂಜೆ ತೊಟ್ಟಿಲು, ಸಾವಿತ್ರಿ, ರತ್ನ ಮಾಂಗಲ್ಯ ಹೀಗೆ ಅನೇಕ ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ನಟಿಸಿದ್ದಾರೆ.
ಪೌರಾಣಿಕ ಪುನರುತ್ಥಾನ ಯತ್ನ
ರಂಗಕಲೆಗೆ ಪ್ರಾಮುಖ್ಯತೆಗೆ ಕಡಿಮೆಯಾಗುತ್ತಿದೆ. ಪೌರಾಣಿಕ ನಾಟಕ ಪ್ರದರ್ಶನಗಳು ಅಪರೂಪ ಎನ್ನುವಂತಾಗಿದೆ. ವಾಸ್ತವ ಹೀಗಿರುವಾಗಲೇ ಪೌರಾಣಿಕ ರಂಗಕಲೆಯನ್ನು ಪುನರುತ್ಥಾನಗೊಳಿಸಲು ವಿಜಯಾನಂದ ಮುಂದಾಗಿದ್ದಾರೆ.
ಶ್ರೀ ಮಾರುತೇಶ್ವರ ನಾಟ್ಯ ಸಂಘ ಹುಟ್ಟು ಹಾಕಿ ಅದರ ಮೂಲಕ ಯುವಕರಿಗೆ ಪೌರಾಣಿಕ ನಾಟಕ ಅಭಿನಯ ಕುರಿತಾಗಿ ಉಚಿತವಾಗಿ ರಂಗತರಬೇತಿ ನೀಡಲು ನಿರ್ಧರಿಸಿದ್ದಾರೆ. ಪೌರಾಣಿಕ ನಾಟಕದಲ್ಲೂ ಇಂದಿನ ಜನರ ಮನೋಸ್ಥಿತಿಗೆ ಪೂರಕವಾಗಿ ಒಂದಿಷ್ಟು ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಿ, ಜನರು ಮತ್ತೆ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳತ್ತ ಮುಖ ಮಾಡಬೇಕೆಂಬ ಮಾಡುವ ಯೋಜನೆ ಇವರದ್ದಾಗಿದೆ.
ಅಮರೇಗೌಡ ಗೋನವಾರ