ಕೂಡ್ಲಿಗಿ (ವಿಜಯನಗರ); ಜಿಲ್ಲೆಯ ಕೂಡ್ಲಿಗಿ ತಾಲೂಕು ಸಂಕ್ಲಾಪುರದ ಕೊರಚರಹಟ್ಟಿ ಕ್ರಾಸ್ ಬಳಿ ಎಗ್‌ರೈಸ್ ಬಂಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಪರಿಣಾಮ ಅಲ್ಲಿದ್ದ ಗ್ಯಾಸ್ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ೪.೩೦ರ ಸುಮಾರಿಗೆ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಗ್ ರೈಸ್ ಅಂಗಡಿಗೆ ತಗುಲಿದ ಬೆಂಕಿ ಅನಾಹುತದಲ್ಲಿ ಅಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹತ್ತಿದ್ದನ್ನು ನೋಡಲು ಹೋದ ಇಬ್ಬರಿಗೆ ಗ್ಯಾಸ್ ತುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ತಾಲೂಕಿನ ಸಂಕ್ಲಾಪುರ ಕೊರಚರಹಟ್ಟಿ ಕ್ರಾಸ್ ಬಳಿ ನಡೆದಿದೆ.
ಬೋಸಲರಹಟ್ಟಿಯ ಶ್ರೀಕಾಂತ್ (23), ಶಿವಣ್ಣ (31) ಮೃತಪಟ್ಟ ದುರ್ದೈವಿಗಳು. ಸಂಕ್ಲಾಪುರ ಕೊರಚರಹಟ್ಟಿ ಕ್ರಾಸ್ ಬಳಿಯ ಬೋರಯ್ಯ ಎಂಬುವರ ಎಗ್‌ರೈಸ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಹೊತ್ತಿ ಉರಿದ ಬೆಂಕಿ ಗಾಡಿಯಲ್ಲಿದ್ದ ಗ್ಯಾಸ್ ಸಿಲಿಂಡರಿಗೂ ತಗುಲಿದ್ದು, ಗ್ಯಾಸ್ ಸ್ಪೋಟಗೊಂಡಿದೆ. ಈ ವೇಳೆ ಬೆಂಕಿ ಹತ್ತಿದ್ದನ್ನು ನೋಡಲು ಬಂದಿದ್ದ ಜನರಲ್ಲಿ ಶಿವಣ್ಣನಿಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಛಿದ್ರಗೊಂಡ ಕಬ್ಬಿಣದ ತುಂಡುಗಳು ಎಡಗೈ ಕತ್ತರಿಸಿ, ಎಡ ಪಕ್ಕೆಯನ್ನು ಹೊಕ್ಕಿದೆ. ಇನ್ನು ಶ್ರೀಕಾಂತ್‌ಗೆ ಭುಜ, ದೇಹಕ್ಕೆ ಬಲವಾದ ಪೆಟ್ಟುಬಿದ್ದು, ಗಾಯವಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಅಮೆರಿಕಾ ಶಾಲಾ ಬಸ್ ಸ್ಫೋಟ ಬೆದರಿಕೆ: ಖಾಂಡ್ವಾದಲ್ಲಿ ಇಂಜಿನಿಯರ್ ಬಂಧನ
ಬೆಂಕಿ ಅನಾಹುತದಿಂದ ಎಗ್ ರೈಸ್ ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಆಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ತಹಸೀಲ್ದಾರ್ ಜಗದೀಶ್, ಕೂಡ್ಲಿಗಿ ಡಿವೈಎಸ್‌ಪಿ ಹರೀಶರೆಡ್ಡಿ, ಗುಡೇಕೋಟೆ ಪಿಎಸ್‌ಐ ಶಾಂತಮೂರ್ತಿ, ಗುಡೇಕೋಟೆ ಕಂದಾಯ ನಿರೀಕ್ಷಕ ಯಜಮಾನಪ್ಪ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.