Advertisement
ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆ ನೂತನವಾಗಿ ರಚನೆಯಾದದ್ದು ತಾಲೂಕಿನ ಜನತೆಗೊಂದು ಹೆಮ್ಮೆ. ಈ ಮೊದಲು ಬಳ್ಳಾರಿ ಜಿಲ್ಲೆಗೆ ಹೋಗಿ ಬರಬೇಕಾದರೆ ಸಾಕಷ್ಟು ಸಮಯ ವ್ಯಯವಾಗುವುದರ ಜೊತೆಗೆ ಜನಸಾಮಾನ್ಯರು ಸಾರಿಗೆ ಸಮಸ್ಯೆ ಅನುಭವಿಸುತ್ತಿದ್ದರು. ಹೊಸ ಜಿಲ್ಲೆಯಿಂದ ತಾಲೂಕಿನ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಜಿ.ಪಂ. ಮಾಜಿ ಸದಸ್ಯ ಅಕ್ಕಿ ತೋಟೇಶ್ ಅಭಿಪ್ರಾಯಪಟ್ಟಿದ್ದಾರೆ.
Related Articles
Advertisement
ಪ್ರವಾಸೋದ್ಯಮ ತಾಣವಾಗಿಸಿ
ತಾಲೂಕಿನ ಐತಿಹಾಸಿಕ ಸ್ಥಳಗಳಿಗೆ ಅಭಿವೃದ್ಧಿಯ ಸ್ಪರ್ಶ ನೀಡಬೇಕಿದೆ. ತಾಲೂಕಿನ ಪ್ರಸಿದ್ಧ ತಾಣವಾದ ಬಂಡೇ ರಂಗನಾಥೇಶ್ವರ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ತಾಲೂಕಿನ ತಂಬ್ರಹಳ್ಳಿ ಹಿನ್ನೀರು ಪ್ರದೇಶದ ಸುಂದರ ಬೆಟ್ಟದಲ್ಲಿ ಇರುವ ಬಂಡೇ ರಂಗನಾಥನ ಸ್ವಾಮಿಯ ಬೆಟ್ಟದ ಮೇಲೆ ನಿಂತು ಹಿನ್ನೀರಿನ ವಾತಾವರಣವನ್ನು ಸವಿದರೆ ಮುದ ಅನಿಸುತ್ತದೆ. ಇಲ್ಲಿ ಪ್ರಮುಖವಾಗಿ ಯಾತ್ರಿ ನಿವಾಸ, ಬೆಟ್ಟದ ಮೇಲಕ್ಕೆ ಹೋಗಲು ಇನ್ನೊಂದು ರಸ್ತೆ, ಓಬಳನಾಯಕನ ಬಾವಿಗೆ ಆಧುನಿಕ ಸ್ಪರ್ಶ, ಬೆಟ್ಟದ ಮೇಲಿನ ಪುಷ್ಕರಣಿ ಸುಂದರಗೊಳಿಸಿದರೆ ಉತ್ತಮ ಪ್ರವಾಸಿ ತಾಣವಾಗಲಿದೆ. ಅದರಂತೆ ತಾಲೂಕಿನ ನಂದಿಪುರದ ದೊಡ್ಡಬಸವೇಶ್ವರ ಮಠ, ಪಟ್ಟಣದ ಹಾಲಶಂಕರಮಠ, ಹಂಪಸಾಗರದ ಮಠ ಸೇರಿ ತಾಲೂಕಿನ ಇನ್ನಿತರ ಸುಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕಿದೆ. ತಾಲೂಕಿನ ಪಟ್ಟಣದಲ್ಲಿ ಇರುವ ಕಂದಾಯ ಕಚೇರಿ ಇದರ ಜೊತೆಗೆ ಇರುವ ಸರಕಾರಿ ಕಚೇರಿಗಳು ಅತ್ಯಂತ ಇಕ್ಕಟ್ಟು ಪ್ರದೇಶದಲ್ಲಿ ಇರುವುದರಿಂದ ಪಟ್ಟಣದ ಹೊರವಲಯದ ಹರಪನಹಳ್ಳಿ ರಸ್ತೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿರುವುದು ತಾಲೂಕಿನ ಹೆಮ್ಮೆಯಾಗಿದೆ. ರೈಲ್ವೆ ಮೇಲ್ಸೆತುವೆ ನಿರ್ಮಾಣದ ಅವಶ್ಯಕತೆ ಇದೆ. ಜೊತೆಗೆ ಬೈಪಾಸ್ ರಸ್ತೆ ನಿರ್ಮಾಣವಾಗಬೇಕಿದೆ. ರಾಜ್ಯದಲ್ಲಿಯೇ ಪ್ರಸಿದ್ಧ ಪಕ್ಷಿಧಾಮ ತಾಲೂಕಿನ ಅಂಕಸಮುದ್ರ ಗ್ರಾಮದಲ್ಲಿ ಇದು,ª ಇದರ ಸಮಗ್ರ ಅಭಿವೃದ್ಧಿಗೆ ಕಾಳಜಿ ವಹಿಸುವ ಅಗತ್ಯವಿದೆ. ತಾಲೂಕಿನ ಬೆಣಕಲ್ ಅರಣ್ಯ ಪ್ರದೇಶ ಬೃಹತ್ ವ್ಯಾಪ್ತಿ ಹೊಂದಿದ್ದು, ಅರಣ್ಯ ಪ್ರದೇಶದ ಅಭಿವೃದ್ಧಿ ಜೊತೆಗೆ ಕಾಡುಪ್ರಾಣಿಗಳ ರಕ್ಷಣೆಗೆ ಆದ್ಯತೆ ಸಿಗಬೇಕಿದೆ. ತಾಲೂಕಿನ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ವಿವಿಧ ವಿನೂತನ ಯೋಜನೆಗಳನ್ನು ಜಾರಿಗೊಳಿಸಬೇಕು. ತಾಲೂಕಿನ ಹಿನ್ನೀರು ಭಾಗದಲ್ಲಿ ಮೀನುಗಾರಿಕೆ ಮಾಡುತ್ತಿರುವ ಮೀನುಗಾರರಿಗೆ ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ತಾಲೂಕಿನ ಕೃಷಿ ಅಭಿವೃದ್ಧಿಗೆ ಮನ್ನಣೆ ನೀಡಿದರೆ, ತಾಲೂಕು ರಾಜ್ಯದಲ್ಲಿಯೇ ಮಾದರಿ ತಾಲೂಕಾಗಲಿದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ಹೂವಿನಹಡಗಲಿ ಚಿತ್ರಣ ಬದಲಾಗಲಿ
ಹೂವಿನಹಡಗಲಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಟಾಗ ಮಾಡಿ ಆಡಳಿತಾತ್ಮಕ ದೃಷ್ಟಿಯಲ್ಲಿ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವಾಗಿರಿಸಿಕೊಂಡು ನೂತನ ವಿಜಯನಗರ ಜಿಲ್ಲೆ ರಚನೆಯಾಗಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಮುಖಂಡ ಓದೋ ಗಂಗಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ನೂತನ ಜಿಲ್ಲೆಯಿಂದ ತಾಲೂಕಿನ ಅಭಿವೃದ್ಧಿಗೆ ಆಗಬೇಕಾದ ಕಾರ್ಯಗಳ ಬಗ್ಗೆ ಮಾತನಾಡಿರುವ ಅವರು, ಮೊದಲು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಸರಿ ಸುಮಾರು 140 ಕಿ.ಮೀ ನಷ್ಟು ದೂರವಿದ್ದ ಹಡಗಲಿ ತಾಲೂಕಿನ ಕೊನೆ ಗ್ರಾಮಗಳಿಗೆ ಜಿಲ್ಲಾ ಕೇಂದ್ರ ಮತ್ತಷ್ಟು ದೂರವಾಗುತ್ತಿತ್ತು. ಸುಮಾರು 180 ಕಿ.ಮೀ ದೂರ ಕ್ರಮಿಸಿ ತಾಲೂಕಿನ ಹರವಿ ಗ್ರಾಮೀಣ ಭಾಗದ ಜನ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಹರ ಸಾಹಸ ಪಡಬೇಕಾಗಿತ್ತು. ಹೀಗಾಗಿ ಹಡಗಲಿ, ಹ.ಬೋಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಒಳಗೊಂಡಂತೆ ಹೊಸಪೇಟೆಯನ್ನು ನೂತನ ಜಿಲ್ಲಾ ಕೇಂದ್ರವಾಗಿಟ್ಟುಕೊಂಡು ಸರ್ಕಾರ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದಿದ್ದಾರೆ. ನೂತನ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಇನ್ನೂ ಹೆಚ್ಚಿನ ಪ್ರಗತಿ ಕಾಣಬೇಕಾಗಿದೆ. ಜನ ಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ 100 ಹಾಸಿಗಳ ಸರ್ಕಾರಿ ಆಸ್ಪತ್ರೆ, ತಾಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಒಳಗೊಂಡಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ಸಿಗಬೇಕಿದೆ. ಔಷಧಿ ಸಾಮಗ್ರಿಗಳು, ವೈದ್ಯಕೀಯ ಇತರೆ ಸೌಲಭ್ಯಗಳಿಗೆ ಜಿಲ್ಲಾ ಕೇಂದ್ರವನ್ನೇ ಅವಲಂಬಿಸಬೇಕಿದ್ದು ಇದು ತಪ್ಪಬೇಕಿದೆ. ತಾಲೂಕಿನಲ್ಲಿ ಒಂದು ಔಷಧಿ ಸಂಗ್ರಹ ಕೇಂದ್ರ ತೆರೆಯಬೇಕಾಗಿದೆ. ಶೈಕ್ಷಣಿಕವಾಗಿ, ತಾಲೂಕಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಡಿಪ್ಲೊಮಾ ಕಾಲೇಜ್ ಸರ್ಕಾರಿ ಪದವಿ ಕಾಲೇಜ್ ಇದ್ದರೂ ಸಹ ಅವುಗಳಿಗೆ ಕೆಲ ಮೂಲಭೂತ ಸೌಕರ್ಯಗಳು ಒದಗಿಸಬೇಕಾಗಿದೆ.
ಪೂರ್ಣ ಪ್ರಮಾಣದ ಉಪನ್ಯಾಸಕರು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿನ ಲ್ಯಾಬ್ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಇದ್ದು ಇವೆಲ್ಲವುಗಳು ಬಗೆಹರಿಯಬೇಕಿದೆ. ಮೊದಲು ಜಿಲ್ಲಾ ಕೇಂದ್ರ ಬಳ್ಳಾರಿಗೆ ಜನಸಾಮಾನ್ಯರು ಸರ್ಕಾರದ ಯಾವುದೇ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಹೋಗಿ ಬರುವುದು ತುಂಬಾ ಸಾಹಸದ ಕೆಲಸವಾಗಿತ್ತು. ಇನ್ನು ಅಲ್ಲಿಗೆ ಹೋದ ಮೇಲೆ ಕೆಲವೊಮ್ಮೆ ಅಧಿಕಾರಿಗಳು ಸಿಗದಿದ್ದರೆ ಮತ್ತೂಂದು ದಿನ ಆಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗುತ್ತಿತ್ತು. ಇದರಿಂದಾಗಿ ಬಡವರು ಆರ್ಥಿಕವಾಗಿ ತುಂಬಾ ಕಷ್ಟ ಅನುಭವಿಸಬೇಕಾಗಿತ್ತು. ನೂತನ ವಿಜಯ ನಗರ ಜಿಲ್ಲೆ ರಚನೆಯಾಗುವುದರಿಂದ ಈ ಸಮಸ್ಯೆ ನೀಗಬಹುದು ಎನ್ನುವ ಭರವಸೆ ಇದೆ. ಯಾವುದೇ ಇಲಾಖೆ ಅಧಿಕಾರಿಗಳು ಸ್ವತಃ ಕಾಳಜಿಯಿಂದ ಕೆಲಸ ಮಾಡಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಮೊದಲು ಜಿಲ್ಲಾ ಕೇಂದ್ರವೂ ದೂರವಾಗಿದ್ದರಿಂದ ಕೆಲಸ ಮಾಡಿಸುವುದೂ ಕಷ್ಟವಾಗಿತ್ತು. ಇನ್ನು ತಾಲೂಕು ಮಟ್ಟದ ಅಧಿಕಾರಿಗಳು ಮಾಡಿದ ಆಭಿವೃದ್ಧಿ ಕೆಲಸ ಕಾರ್ಯಗಳ ಪರಿಶೀಲನೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬರುತ್ತಿರಲಿಲ್ಲ. ನೂತನ ಜಿಲ್ಲೆಯಲ್ಲಿ ಈ ಸಮಸ್ಯೆ ಆಗದು ಎನ್ನುವ ವಿಶ್ವಾಸವಿದೆ. ಇಲಾಖೆಯ ವಿಳಂಬ ನೀತಿಯಿಂದಾಗಿ ಜನ ಸಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿತ್ತು. ಜಿಲ್ಲಾ ಮಟ್ಟದ ಜನಪ್ರತಿನಿಧಿಗಳ, ಆಧಿಕಾರಿಗಳ ನಿಷ್ಕಾಳಜಿ ಎದ್ದು ಕಾಣುತ್ತಿತ್ತು. ಆದರೆ ನೂತನ ಜಿಲ್ಲೆಯಲ್ಲಿ ಆಡಳಿತ ಹೊರೆ ಕಡಿಮೆಯಾಗುವುದರಿಂದಾಗಿ ಇಂತಹ ಆಚಾತುರ್ಯಗಳು ಸಂಭವಿಸುವುದಿಲ್ಲ ಎನ್ನುವ ಭರವಸೆ ಇದೆ. ಇನ್ನೂ ತಾಲೂಕಿನಲ್ಲಿ ಸಾಕಷ್ಟು ಆಭಿವೃದ್ಧಿ ಕಾರ್ಯ ಆಗಬೇಕಾಗಿದೆ. ರಸ್ತೆ, ಕುಡಿಯುವ ನೀರು, ಸ್ವತ್ಛತೆ ಮುಂತಾದ ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ಹೆಚ್ಚು ಗಮನ ಹರಿಸಬೇಕಿದೆ. ಜನಸಾಮಾನ್ಯರ ಹತ್ತಿರಕ್ಕೆ ಹೊಸ ಜಿಲ್ಲೆ ತನ್ನ ಆಡಳಿತವನ್ನು ಕೊಂಡೊಯ್ಯುವ ಕಾರ್ಯ ಆಗಬೇಕಿದೆ. ತಾಲೂಕಿನ ಜನರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರುಣಿಸುವ ಕೆಲಸ ಕಾರ್ಯ ಮುಗಿದಿದೆ. ಇನ್ನು ಯೋಜನೆಯ ಕೆಲವು ತಾಂತ್ರಿಕ ಕಾರಣದಿಂದಾಗಿ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗಬೇಕಿದೆ. ತಾಲೂಕಿನ ಸುಕ್ಷೇತ್ರ ಶ್ರೀ ಮೈಲಾರ ಕ್ಷೇತ್ರ ಉತ್ತರ ಕರ್ನಾಟಕದ ದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.
ಇಲ್ಲಿ ಜರುಗುವ ವಾರ್ಷಿಕ ಕಾರ್ಣಿಕೋತ್ಸವಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಇನ್ನು ತುಂಗಾಭದ್ರ ನದಿ ತಟದಲ್ಲಿರುವ ಶ್ರೀ ಕ್ಷೇತ್ರ ಕುರುವತ್ತಿ ಕ್ಷೇತ್ರಕ್ಕೆ ದೊಡ್ಡ ಧಾರ್ಮಿಕ ಪರಂಪರೆ ಇದೆ. ಈ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಗಮನಹರಿಸಬೇಕಿದೆ. ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಕೊನೆ ತಾಲೂಕಾಗಿದ್ದ ಹೂವಿನಹಡಗಲಿ ಜಿಲ್ಲಾ ಕೇಂದ್ರದ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿತ್ತು. ನೂತನ ಜಿಲ್ಲಾ ಕೇಂದ್ರದಲ್ಲೂ ಕೊನೆಯ ತಾಲೂಕಾಗಿದ್ದರೂ ಜಿಲ್ಲಾ ಕೇಂದ್ರದ ನಾಯಕರುಗಳ ನಿರ್ಲಕ್ಷé ಕೊನೆಗಾಣಬೇಕಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಗತಿ ವಿಷಯದಲ್ಲಿ ಹೆಚ್ಚಿನ ಗಮಹರಿಸಬೇಕಾಗಿದೆ. ಹಾಗಾದಾಗ ಮಾತ್ರ ನೂತನ ವಿಜಯನಗರ ಜಿಲ್ಲೆ ರಚನೆಯಾಗಿದ್ದು ಸಾರ್ಥಕವಾಗಲಿದೆ ಎಂದು ಓದೋ ಗಂಗಪ್ಪ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ