Advertisement

ಮೇಟಿ ವಿರುದ್ಧ ಬಾಂಬ್‌ ಸಿಡಿಸಿದ ವಿಜಯಲಕ್ಷ್ಮೀ 

07:00 AM Aug 18, 2017 | |

ಬೆಂಗಳೂರು: “ರಾಸಲೀಲೆ’ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ವೈ.ಮೇಟಿ ಅವರಿಗೆ ಸಿಐಡಿ ಪೊಲೀಸರು ಕ್ಲೀನ್‌ಚೀಟ್‌
ನೀಡಿರುವ ಬೆನ್ನಲ್ಲೇ, ಇದೀಗ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮೀ ಸರೂರು, ಮಾಜಿ ಸಚಿವ ಮೇಟಿ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದು ಸತ್ಯ, ನನಗೆ ನ್ಯಾಯ ಕೊಡಿಸಿ ಎಂದು ಡಿಜಿಪಿ ಹಾಗೂ ಗೃಹ ಇಲಾಖೆ ಮೊರೆ ಹೋಗಿದ್ದಾರೆ.

Advertisement

ಗುರುವಾರ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿರುವ ವಿಜಯಲಕ್ಷ್ಮೀ, ಮೇಟಿ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದು, ಮೇಟಿ ಹಾಗೂ ಅವರ ಬೆಂಬಲಿಗರಿಂದ ಜೀವ ಬೆದರಿಕೆಯಿದೆ ಎಂದು ಆರೋಪಿಸಿದ್ದಾರೆ.

ಮೇಟಿಯಿಂದ ಜೀವ ಬೆದರಿಕೆ: ಬಾಗಲಕೋಟೆ ಸರ್ಕಾರಿ ಆಯುರ್ವೇದಿಕ್‌ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ನಾನು, 2015ರಲ್ಲಿ ಕೆಲಸದ ನಿಮಿತ್ತ ನಗರ ಸಭೆ ಆವರಣದಲ್ಲಿರುವ ಮೇಟಿಯವರ ಕಚೇರಿಗೆ ತೆರಳಿದ್ದೆ. ಈ ವೇಳೆ ಒಂದು ದಿನ ಮೇಟಿಯವರು ತಮ್ಮನ್ನು ಎಳೆದುಕೊಂಡು ಮುತ್ತುಕೊಟ್ಟಿದ್ದರು. ಇದಾದ ಬಳಿಕ ಮೇಟಿ ಅವರು ದೂರವಾಣಿ ಕರೆ ಮಾಡಿ ತಮ್ಮ ಮನೆಗೆ ಕರೆಸಿಕೊಂಡು ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಈ ವಿಷಯವನ್ನು ಬಾಯ್ಬಿಡಬಾರದು ಎಂದು ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 11ರಂದು ಮಾಧ್ಯಮಗಳಲ್ಲಿ ನನ್ನ ಹೇಳಿಕೆ ಕುರಿತ ವಿಡಿಯೋ ಪ್ರಸಾರವಾದ ಬಳಿಕ ಮೇಟಿ ಬೆಂಬಲಿಗರು ಪೋನ್‌ ಮಾಡಿ ಜೀವಬೆದರಿಕೆ ಹಾಕಿದ್ದಾರೆ. ಬಳಿಕ ಡಿಸೆಂಬರ್‌ 14ರಂದು ರಾತ್ರಿ ಅಪಹರಿಸಿ ಮೇಟಿ ಸಂಬಂಧಿಕರ ತೋಟದಲ್ಲಿ ಕೂಡಿ ಹಾಕಿದ್ದು, ಡಿ.14 ರಂದು ಮೇಟಿಯವರ ಮಗ ಪ್ರಕರಣದ ದೂರಿನ ವರದಿಯನ್ನು ತಂದು, ಅದರಲ್ಲಿರುವಂತೆ ನನ್ನ ಕೈ ಬರಹದಲ್ಲಿ ಬರೆಸಿಕೊಂಡು ಸಹಿ ಹಾಕಿಸಿಕೊಂಡಿದ್ದರು ಎಂದೂ ದೂರಿದ್ದಾರೆ.

ಸಿಐಡಿ ತನಿಖೆ ಬಗ್ಗೆ ಅಪಸ್ವರ: ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸರು ಸಿದ್ಧಪಡಿಸಿದ್ದ ಪ್ರಶ್ನೆಪತ್ರಿಕೆಯೊಂದನ್ನು
ತಂದಿದ್ದ ಮೇಟಿ ಬೆಂಬಲಿಗರು ಜನವರಿ 29ರ ರಾತ್ರಿ ಡ್ರೈವಿನ್‌ ಲಾಡ್ಜ್ನಲ್ಲಿ ನನ್ನನ್ನ ಭೇಟಿಯಾಗಿ, ಸಿಐಡಿಯವರ ಪ್ರಶ್ನೆಪತ್ರಿಕೆಗೆ ಉತ್ತರ ಬರೆಸಿಕೊಂಡು ಹೋಗಿದ್ದಾರೆ. ಮಾರನೇ ದಿನ ಜ.30ರಂದು ನಾನು ಸಿಐಡಿ ವಿಚಾರಣೆಗೆ ಹಾಜರಾಗಿದ್ದಾಗ, ತನಿಖಾಧಿಕಾರಿಗಳು ಮೇಟಿ ನಡುವಿನ ಸಂಬಂಧ ಕುರಿತ ವಿಚಾರವೇ ಪ್ರಸ್ತಾಪಿಸಿಲ್ಲ.

Advertisement

ಏಳು ತಿಂಗಳು ಬೇರೆ ಕಡೆ ನೆಲೆಸಿದ್ದು, ಜೂನ್‌ನಲ್ಲಿ ಬಾಗಲಕೋಟೆಗೆ ವಾಪಸ್‌ ಬಂದೆ. ಅಲ್ಲದೆ ಜುಲೈ 17ರಿಂದ ಆಸ್ಪತ್ರೆ ಕೆಲಸಕ್ಕೆ ತೆರಳಿದ್ದು, ಈ ವೇಳೆ ನನಗೆ ತೊಂದರೆಯುಂಟಾಗುವ ಸಾಧ್ಯತೆಗಳಿದ್ದ ಕಾರಣ ಆಗಸ್ಟ್‌ 16 ಹಾಗೂ 17ರಂದು ಇಡೀ ಘಟನೆಯ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದೇನೆ. ಹೀಗಾಗಿ ಮೇಟಿ ಹಾಗೂ ಅವರ ಬೆಂಬಲಿಗರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ನನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಏನಾದರೂ ಆದರೆ ಮೇಟಿ, ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರೇ ಕಾರಣ. ಈ ನಿಟ್ಟಿನಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಮೇಟಿ ವಿರುದ್ಧದ ಆರೋಪಗಳಿಗೆ ಅನ್ವಯ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next