Advertisement

ವಿಜಯದಶಮಿ ಸಂಭ್ರಮಾಚರಣೆ

11:12 AM Oct 06, 2022 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಹಿರಿಯರು-ಕಿರಿಯರೆನ್ನದೇ ಬನ್ನಿ ಪತ್ರಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿ ಹಬ್ಬವನ್ನು ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

Advertisement

ನವರಾತ್ರಿ ಆರಂಭದಿಂದ ನಸುಕಿನ ಜಾವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ ಮಹಿಳೆಯರು, ವಿಜಯದಶಮಿ ಹಬ್ಬದಂದು ಬೆಳಗ್ಗೆ ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಹರಸಿದರು. ನವರಾತ್ರಿ ಉತ್ಸವದ ಅಂಗವಾಗಿ ಒಂಭತ್ತು ದಿನಗಳ ಕಾಲ ನಿರಂತರವಾಗಿ ಸಾಗಿಬಂದ ಆದಿಶಕ್ತಿ ಕುರಿತಾದ ಪುರಾಣ ಪ್ರವಚನಗಳು ಮಂಗಳವಾರ ಮಂಗಲಗೊಂಡವು.

ತೋಂಟದಾರ್ಯ ಮಠದ ಆವರಣ, ಶಂಕ ರಲಿಂಗ ದೇವಸ್ಥಾನ, ರಾಜೀವಗಾಂ ನಗರದ ಬನ್ನಿಮ ಹಾಂಕಾಳಿ ದೇವಸ್ಥಾನ, ಬೆಟಗೇರಿ ಟರ್ನಲ್‌ ಪೇಟೆ, ರಂಗಪ್ಪಜ್ಜನಮಠದ ಮುಂಭಾಗ, ನರಸಾಪೂರ ಬಸ್‌ ನಿಲ್ದಾಣ ಹತ್ತಿರ ಸೇರಿದಂತೆ ವಿವಿಧ ಭಾಗಗಳಲ್ಲಿನ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಮುಡಿದ ನಂತರ ನಾವು-ನೀವೂ ಬಂಗಾರದಂತಹ ಜೀವನ ಸಾಗಿಸೋಣ ಎಂಬ ವಾಕ್ಯದೊಂದಿಗೆ ಸಾರ್ವಜನಿಕರು ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡರು.

ಕಿರಿಯರು ಹಿರಿಯರಿಗೆ ಬನ್ನಿ ಪತ್ರಿ ನೀಡಿ ಆಶೀರ್ವಾದ ಪಡೆದರು. ನಗರದ ಪ್ರಮುಖ ದೇವಸ್ಥಾನಗಳಾದ ಹಳೇ ಸರಾಫ್‌ ಬಜಾರ್‌ನ ಜಗದಂಬಾ ದೇವಸ್ಥಾನ, ಗಂಗಾಪೂರಪೇಟೆಯ ದುರ್ಗಾದೇವಿ ದೇವಸ್ಥಾನ, ಹುಡ್ಕೊà ಕಾಲನಿಯ ತುಳಜಾಭವಾನಿ ದೇವಸ್ಥಾನ, ಬೆಟಗೇರಿಯ ಅಂಬಾಭವಾನಿ ದೇವಸ್ಥಾನ, ಹಳೇ ಬನಶಂಕರಿ ದೇವಸ್ಥಾನ, ಶಿವಶರಣೆ ನೀಲಮ್ಮತಾಯಿ ಅಸುಂಡಿ ಆಧ್ಯಾತ್ಮ ವಿದ್ಯಾಶ್ರಮ, ರಾಜೀವಗಾಂ ನಗರದ ಶ್ರೀದೇವಿ ದೇವಸ್ಥಾನ, ಹರ್ಲಾಪೂರದ ದಾನಮ್ಮದೇವಿ ದೇವಸ್ಥಾನ, ಡೋಹರ ಗಲ್ಲಿಯ ಶ್ರೀದೇವಿ ದೇವಸ್ಥಾನ, ಅಮರೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರ, ನರಸಾಪೂರ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನ ಹಾಗೂ ಅಕ್ಕನ ಬಳಗದಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ಜರುಗಿತು.

ಆಯುಧ ಪೂಜೆ: ಜಿಲ್ಲಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸಲಾಯಿತು. ನೇಕಾರರು ಮಗ್ಗಗಳಿಗೆ, ಮುದ್ರಣಕಾರರು ಮದ್ರಣ ಮಷಿನ್‌ಗಳಿಗೆ, ಪೀಠೊಪಕರಣ ತಯಾರಕರು ವೆಲ್ಡಿಂಗ್‌ ಮಷಿನ್‌ ಸೇರಿ ವಿವಿಧ ಉದ್ದಿಮೆದಾರರು ತಾವು ಉಪಯೋಗಿಸುವ ವಾಹನ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.

Advertisement

ರೋಬೋಟ್‌ ಆನೆ ಮೇಲೆ ದಸರಾ ಮೆರವಣಿಗೆ: ನಗರದ ಹಳೇಯ ಸರಾಫ್‌ ಬಜಾರನಲ್ಲಿರುವ ಜಗದಂಬಾ ದೇವಸ್ಥಾನ ಹಾಗೂ ತುಳಜಾ ಭವಾನಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ರೋಬೋಟ್‌ ಆನೆ ಮೇಲೆ ಬೆಳ್ಳಿ ಅಂಬಾರಿಯ ದಸರಾ ಮೆರವಣಿಗೆ ನಡೆಯಿತು.

ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಗಳು ಸಂಜೆ ನಗರದ ಭೀಷ್ಮ ಕೆರೆ ಆವರಣದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನ ಬಯಲಿಗೆ ಆಗಮಿಸಿದವು. ಅಲ್ಲಿನ ಬನ್ನಿ ಗಿಡಕ್ಕೆ ವೀರ ನಾರಾಯಣ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದರು. ಬನ್ನಿ ಮುಡಿದ ನಂತರ ಹಲವು ಗಣ್ಯರು ಕೆರೆ ಆವರಣದಲ್ಲಿಯೇ ಬನ್ನಿ ವಿನಿಮಯ ಮಾಡಿಕೊಂಡು, ಪರಸ್ಪರ ಶುಭಾಶಯ ಕೋರಿದರು. ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ತೋಂಟದ ಡಾ| ಸಿದ್ಧರಾಮ ಸ್ವಾಮೀಜಿ ಸಂಜೆ ಭಕ್ತರಿಗೆ ಬನ್ನಿ ನೀಡಿ ಆಶೀರ್ವದಿಸಿದರು. ನೂರಾರು ಭಕ್ತರು ಮಠದ ಆವರಣದಲ್ಲಿ ನೆರೆದು, ಶ್ರೀಗಳ ಆಶೀರ್ವಚನ ಆಲಿಸಿದರು. ಸ್ವಾಮೀಜಿಗೆ ಬನ್ನಿ ಕೊಟ್ಟು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next