Advertisement

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

01:10 PM Apr 24, 2024 | Team Udayavani |

ಗದಗ: ಕಳೆದ ಮೂರು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೆ ಮೀರಿ ಮಾತನಾಡಿತ್ತಿದ್ದಾರೆ. ಸಾರ್ವಜನಿಕರಿಗೆ ಪ್ರಚೋದನೆ ನೀಡುವ ಹಾಗೂ ದ್ವೇಷ ಬಿತ್ತುವ ಅಂಶಗಳನ್ನು ಮಾತನಾಡುವ ಮೂಲಕ ದೇಶದಲ್ಲಿ ಕೋಮುಭಾವನೆ ಹುಟ್ಟುಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೇಂದ್ರ ಚುನಾವಣಾ ಆಯೋಗವು ಸುಮೋಟೋ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಾರೆ, ಹಿಂದುಗಳ ಆಸ್ತಿಯನ್ನು ಕಿತ್ತು ಮುಸಲ್ಮಾನರಿಗೆ ಹಂಚಿಕೆ ಮಾಡುತ್ತಾರೆ, ದಲಿತರ ಮೀಸಲಾತಿ ಕಿತ್ತು ಅಲ್ಪಸಂಖ್ಯಾತರಿಗೆ ನೀಡುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತ ಮಾತೆಯ ಆಭರಣಗಳಾದ ರೈಲ್ವೆ, ಏರ್ಪೋರ್ಟ್, ಗ್ಯಾಸ್ ಲೈನ್ಗಳು, ಸ್ಟೇಡಿಯಂಗಳು, ರಸ್ತೆಗಳನ್ನು ದೋಚಿ ಶ್ರೀಮಂತರ ಪಾಲು ಮಾಡುತ್ತಿದ್ದಾರೆ. ಆಭರಣಗಳನ್ನು ಕಿತ್ತು, ದೋಚಿ ಆದಾನಿ, ಅಂಬಾನಿ‌ ಹಾಗೂ ಗುಜರಾತಿನ ವ್ಯಾಪಾರಿಗಳಿಗೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ಮತದಾನವಾಗಿರುವ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲುವ ಭಯ ಕಾಡುತ್ತಿದ್ದು, ಇದರಿಂದ ಹತಾಶರಾಗಿ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ದುರ್ವ್ಯವವಹಾರಗಳನ್ನು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬರಪೀಡಿತರಿಗೆ ಬರಪರಿಹಾರ ನೀಡಿ ಎಂದು ಕಳೆದ ಆರು ತಿಂಗಳ ಕಾಲ ಹೋರಾಟ ಮಾಡಿದರೂ ಪರಿಹಾರ‌ ನೀಡಲಿಲ್ಲ. ಬರ ಪರಿಹಾರ ಪಡೆದುಕೊಳ್ಳಲು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು, ಪರಿಹಾರ ಸರಿಯಾದ ಸಮಯದಲ್ಲಿ ಬರಪೀಡಿತ ರೈತರ ಕುಟುಂಬಗಳಿಗೆ 13 ಸಾವಿರ ಪರಿಹಾರ ನೀಡಲು ಸಾಧ್ಯವಿತ್ತು. ಆದರೆ, ಜನರು ನರಳುವುದನ್ನು ನೋಡುವ ಕೇಂದ್ರ ಸರಕಾರ, ರಾಜ್ಯ ಸರಕಾರಕ್ಕೆ ಅನಾನುಕೂಲತೆ ಸೃಷ್ಟಿಸಲು ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡಿತು ಎಂದು ಆರೋಪಿಸಿದರು.

Advertisement

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದ ದುರ್ಘಟನೆ, ಬರ್ಬರ ಕೊಲೆ ಪ್ರಕರಣದಲ್ಲಿ ನಮ್ಮ ಸರಕಾರ, ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ತನಿಖೆ ಪೂರ್ಣಗೊಳಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ತೀವ್ರವಾದ ತನಿಖೆ, ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆಗೆ ಮೆಚ್ಚುಗೆ ವ್ಯಕ್ರಪಡಿಸಿದ ಸಚಿವರು ತನಿಖೆ ಪ್ರಕ್ರಿಯೆಯಲ್ಲಿ ಥರ್ಡ್ ಐ ನೀಡಿರುವ ಕ್ಲ್ಯೂಗಳು ತನಿಖೆಗೆ ಸಹಾಯವಾಗಿದೆ ಎಂಬುದು ತಿಳಿದು ಬರುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಗೆಲ್ಲಲು ಪೂರಕ ವಾತಾವರಣವಿದೆ ಎಂದರು.

ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಬಸವರಾಜ ಕಡೇಮಬಿ, ಉಮರ್ ಫಾರೂಖ್ ಹುಬ್ಬಳ್ಳಿ ಸೇರಿ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.

ನಾಳೆ ಗದುಗಿದೆ ಸಿಎಂ ಸಿದ್ದರಾಮಯ್ಯ:

ಏ. 25ರಂದು ಮಧ್ಯಾಹ್ನ 2.45ಕ್ಕೆ ಗಜೇಂದ್ರಗಡದಲ್ಲಿ ಜರುಗುವ ಚುನಾವಣಾ ಪ್ರಚಾರದ ಬೃಹತ್ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next