Advertisement

ವಿಜಯಾ ರೆಡ್ಡಿ ಚಿತ್ರಗಳಲ್ಲಿ ಜೀವನ ಮೌಲ್ಯವಿದೆ

09:41 AM Jul 29, 2019 | Sriram |

ಬೆಂಗಳೂರು: ಡಾ.ರಾಜಕುಮಾರ್‌ ಮತ್ತು ಹಿರಿಯ ನಿರ್ದೇಶಕ ವಿಜಯಾ ರೆಡ್ಡಿ ಅವರ ಜೋಡಿ ಕನ್ನಡ ನೆಲದ ಅದ್ಭುತ ಕೊಡುಗೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ ಮೂಲಕ ಶನಿವಾರ ಆಯೋಜಿಸಿದ್ದ 72ನೇ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ಐತಿಹಾಸಿಕ ಹಾಗೂ ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡುವ ಮೂಲಕ ಹಿರಿಯ ನಿರ್ದೇಶಕ ವಿಜಯಾ ರೆಡ್ಡಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾಗಿದ್ದಾರೆ. ವಿಜಯಾ ರೆಡ್ಡಿ ಅವರು ಆ ದಿನಗಳ ಯೌವ್ವನವನ್ನೆಲ್ಲ ಸಿನಿಮಾಗೆ ಧಾರೆ ಎರೆದಿದ್ದಾರೆ’ ಎಂದು ತಿಳಿಸಿದರು.

ವಿಜಯಾರೆಡ್ಡಿ ಅವರ ಸಿನಿಮಾಗಳನ್ನು ಅತಿ ಹೆಚ್ಚು ನೋಡಿದ್ದೇನೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಯಾಕೆಂದರೆ, ನಾನು ಚಿತ್ರಮಂದಿರದಲ್ಲಿ ಆಗ ಎಪ್ಪತ್ತು ಪೈಸೆ ದರ ಇದ್ದಾಗ ಗೇಟ್‌ನಲ್ಲಿದ್ದು ಕೆಲಸ ಮಾಡುತ್ತಿದ್ದೆ. ಆಗ ಅವರ ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಅತಿ ಹೆಚ್ಚು ವೀಕ್ಷಿಸಿದ್ದೇನೆ. ನಾನ ದೈವ ಭಕ್ತನಲ್ಲ. ಆದರೆ, ಅವರ ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ನೋಡುವಾಗ ಕಣ್ತುಂಬಿಕೊಂಡಿ ದ್ದೇನೆ. ನಾಲ್ಕು ಪ್ರದರ್ಶನಗಳನ್ನು ಉಚಿತವಾಗಿ ನೋಡುವಂತಹ ಸಂದರ್ಭ ನನ್ನದಾಗಿತ್ತು. ಇನ್ನು ಅವರ ಭಕ್ತಕುಂಬಾರ, ನಾ ನಿನ್ನ ಮರೆಯಲಾರೆ, ಮಯೂರ, ಹುಲಿಯ ಹಾಲಿನಮೇವು ಚಿತ್ರಗಳನ್ನು ನೋಡುತ್ತಲೇ ನಿರ್ದೇಶನದ ಆಸೆ ಹುಟ್ಟಿಸಿಕೊಂಡವನು. ಒಂದು ರೀತಿ ನನ್ನಂತಹ ಅನೇಕ ಚಿತ್ರಮಂದಿರದ ಹುಡುಗರನ್ನು ನಿರ್ದೇಶಕರಾಗಿಸಿದವರು ಅವರು. ಹಾಗಾಗಿ ನನಗೆ ಅವರು ಮಾನಸಿಕ ಗುರು ಎಂದೇ ಹೇಳುತ್ತೇನೆ. ನಮ್ಮ ಅಕಾಡೆಮಿ ಮೂಲಕ ಅವರನ್ನು ಗೌರವಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು.

ಬೆಳ್ಳಿಹೆಜ್ಜೆಯಲ್ಲಿ ನಡೆದ ಸಂವಾದಕ್ಕೂ ಮುನ್ನ, ವಿಜಯಾ ರೆಡ್ಡಿ ಕುರಿತು ರವೀಂದ್ರನಾಥ ಸಿರಿ ನಿರ್ದೇ ಶಿಸಿದ 28 ನಿಮಿಷದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಹಿರಿಯ ನಿರ್ದೇಶಕ ವಿಜಯಾ ರೆಡ್ಡಿ, ‘ರಂಗ ಮಹಲ್ ರಹಸ್ಯ’ ಚಿತ್ರ ನಿರ್ದೇಶನದ ನಂತರ ಬಹು ಬೇಡಿಕೆಯ ನಿರ್ದೇಶಕರಾಗಿ ಗುರುತಿಸಿಕೊಂಡರು. ಅಲ್ಲಿಂದ ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಅನಂತ್‌ನಾಗ್‌, ಶಂಕರ್‌ ನಾಗ್‌, ಶ್ರೀನಾಥ್‌, ದ್ವಾರಕೀಶ್‌, ಶಿವರಾಜಕುಮಾರ್‌ ಚಿತ್ರ ನಿರ್ದೇಶಿಸಿದ್ದಾರೆ.

Advertisement

ಹುಲಿಯ ಹಾಲಿನ ಮೇವು, ಮಯೂರ, ಶ್ರೀನಿವಾಸ ಕಲ್ಯಾಣ, ಗಂಧದ ಗುಡಿ, ನಾ ನಿನ್ನ ಮರೆಯಲಾರೆ, ಕೌಬಾಯ್‌ ಕುಳ್ಳ, ಸನಾದಿ ಅಪ್ಪಣ್ಣ, ಮೋಜುಗಾರ ಸೊಗಸುಗಾರ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅಧಿಕ ಸಂಖ್ಯೆಯ ಬಹುಭಾಷಾ ಸಿನಿಮಾ ನಿರ್ದೇಶಿದ ಕೀರ್ತಿ ಅವರದು. ಐತಿಹಾಸಿಕ, ಪೌರಾಣಿಕ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಅವರದು. ದಾಖಲೆ ಸಿನಿಮಾ ಕೊಡುವ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಬಗ್ಗೆ ಗುಣಗಾನ ಮಾಡಲಾಯಿತು.

ಸಂವಾದ ನಡೆಸಿಕೊಟ್ಟ ಪತ್ರಕರ್ತ ರಘುನಾಥ ಚ.ಹ, ವಿಜಯಾ ರೆಡ್ಡಿ ಅವರ ಸಿನಿಮಾ ಕಥೆಗಳಲ್ಲಿ ಸಸ್ಪೆನ್ಸ್‌ , ಥ್ರಿಲ್ಲರ್‌, ಹಾಸ್ಯ, ಹಾರರ್‌, ಪೌರಾಣಿಕ, ಐತಿಹಾಸಿಕ ಎಲ್ಲವೂ ಇದೆ. ಕನ್ನಡ, ಹಿಂದಿ, ತೆಲುಗು ಭಾಷೆ ಸೇರಿ 75 ಚಿತ್ರ ಮಾಡಿದ್ದಾರೆ. ಕನ್ನಡದಲ್ಲಿ 48 ಸಿನಿಮಾ ನಿರ್ದೇಶಿಸಿದ್ದಾರೆ. ಅವರ ಮೂವತ್ತು ವರ್ಷಗಳ ಅವಧಿಯಲ್ಲಿ ದಾಖಲೆ ಚಿತ್ರ ಮಾಡಿದ್ದಾರೆ. ಡಾ.ರಾಜಕುಮಾರ್‌ ಅವರಿಗೆ ಒಂಬತ್ತು ಚಿತ್ರಗಳನ್ನು ನಿರ್ದೇಶಿದ ಕೀರ್ತಿ ಇವರದು. ಅದರಲ್ಲೂ ಸತತ ಏಳು ಚಿತ್ರಗಳನ್ನು ಕೊಟ್ಟಿದ್ದಾರೆ. ರಾಜಕುಮಾರ್‌ ಎಂಬ ಅಪೂರ್ವ ಹೊಳಪಿಗೆ ಕಾರಣರಾದ ಶಿಲ್ಪಿಗಳಲ್ಲಿ ವಿಜಯಾ ರೆಡ್ಡಿ ಕೂಡ ಒಬ್ಬರು. ಅವರ ಚಿತ್ರಗಳಲ್ಲಿ ಮೌಲ್ಯಗಳಿದ್ದವು. ಕನ್ನಡ ನಾಡು, ನುಡಿಯ ಕಾಳಜಿ ಇತ್ತು. ದಲಿತರ, ದುರ್ಬಲರ, ಅಸಹಾಯಕರ ಕುರಿತಂತೆ ಕಾಳಜಿ ಇಟ್ಟುಕೊಂಡು ಚಿತ್ರ ಮಾಡಿದವರು. ನನ್ನ ಪ್ರಕಾರ ಸನಾದಿ ಅಪ್ಪಣ್ಣ, ಭಾರತ ಚಿತ್ರರಂಗದ ದೃಶ್ಯ ಮಾಧ್ಯಮದಲ್ಲಿ ಅದ್ಬುತ ಚಿತ್ರ ಎಂದರು.

ಕೆಸಿಎನ್‌ ಚಂದ್ರಶೇಖರ್‌ ಮಾತನಾಡಿ, ಅವರು ತೆಲುಗು ಭಾಷಿಗರಾಗಿದ್ದರೂ, ಕಾದಂಬರಿ ಚಿತ್ರಗಳನ್ನು ಮಾಡಿದ್ದಾರೆ. ಅವರ ಚಿತ್ರಗಳು ಇಂದಿಗೂ ಬದುಕಿನ ಮೌಲ್ಯ ಕಟ್ಟಿಕೊಟ್ಟಿವೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್‌, ರಾಘವೇಂದ್ರ ರಾಜಕುಮಾರ್‌, ಚಿನ್ನೇಗೌಡ, ಜಯಂತಿ, ಸಾ.ರಾ.ಗೋವಿಂದು, ಕೆಸಿಎನ್‌ ಚಂದ್ರು, ಸಾಯಿ ಪ್ರಕಾಶ್‌, ಉಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next