ಈ ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ ಬೆಕ್ಕಿಗಿಂತ ಹೆಚ್ಚಾಗಿ ಜನರು ಅಡ್ಡ ಬರುತ್ತಾರೆ. ಈ ಜಗತ್ತು ಧರ್ಮ ಮತ್ತು ಕರ್ಮದ ಆಧಾರದ ಮೇಲೆ ನಡೆಯುತ್ತದೆ. ಒಬ್ಬ ಮನುಷ್ಯ ತನ್ನ ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೊಬ್ಬ ಗುರಿ ತಲುಪುತ್ತಾನೆ. ಆದರೆ ಹಾಗೆ ಗುರಿ ತಲುಪುವವನು ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಕರೆದುಕೊಂಡು ಹೋಗುವುದೇ ಧರ್ಮ.
ಇದೇ ಅಂಶವನ್ನು ಇಟ್ಟುಕೊಂಡು ಇಲ್ಲೊಂದು ಹೊಸಬರ ತಂಡ “ವಿಜಯರಥ’ ಎನ್ನುವ ಹೆಸರಿನಲ್ಲಿ ಚಿತ್ರವನ್ನು ತೆರೆಗೆ ತರುತ್ತಿದೆ. ಧರ್ಮ ಮತ್ತು ಕರ್ಮಗಳ ನಡುವೆ ನಡೆಯುವ ಈ ಚಿತ್ರವನ್ನು ನವ ನಿರ್ದೇಶಕ ಅಜಯ್ ಸೂರ್ಯ.ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಪ್ರೀತಿ ಕಿತಾಬು’ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಅಜಯ್ ಸೂರ್ಯ. ಕೆ ಮೊದಲ ಬಾರಿಗೆ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಸದ್ಯ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಮೊದಲ ಪ್ರತಿಯೊಂದಿಗೆ ಹೊರಬಂದಿರುವ “ವಿಜಯರಥ’ ಚಿತ್ರ ಇದೇ ಜುಲೈ 26ರಂದು ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿತು.
“ಗುರಿಯನ್ನು ಮುಟ್ಟಿಸಲು ಪ್ರಯತ್ನ ಮಾಡುವ ಕಥಾ ನಾಯಕನಿಗೆ ಮೂರನೇ ರೂಪ ಕಾಣಿಸುತ್ತದೆ. ಯಾರಿಗೂ ಕಾಣಲಾರದ ತೃತೀಯ ಶಕ್ತಿ ಏನು? ಅನ್ನೋದೆ ಚಿತ್ರದ ಸಸ್ಪೆನ್ಸ್. ಚಿತ್ರದ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಟ್ವಿಸ್ಟ್ ಪಡೆದುಕೊಳ್ಳಲಿದೆ. ಚಿತ್ರದ ಕಥೆಯಲ್ಲಿ ಕೆಲ ಉಪಕಥೆಗಳು ಕೂಡ ಇರಲಿದ್ದು, ಇದರಲ್ಲಿ ಪೌರಾಣಿಕ, ಜಾನಪದ ಸನ್ನಿವೇಶಗಳು ಮತ್ತು ಯಾರೂ ಹೇಳಿರದ ಅನೇಕ ಸಂಗತಿಗಳನ್ನು ಹೇಳಲಾಗಿದೆ.ಅದು ಏನು ಅನ್ನೋದು ಚಿತ್ರ ನೋಡಿಯೇ ತಿಳಿಯಬೇಕು’ ಎನ್ನುತ್ತದೆ ಚಿತ್ರತಂಡ.
“ವಿಜಯರಥ’ ಚಿತ್ರದಲ್ಲಿ ವಸಂತ್ ಕಲ್ಯಾಣ್ ನಾಯಕನಾಗಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ವಸಂತ್, “ಹಳ್ಳಿ ಹುಡುಗನಾಗಿ ರಕ್ತದಾನ ಶಿಬಿರ ನಡೆಸುತ್ತಾ, ಯಾವುದೇ ತೊಂದರೆ ಬಂದರೂ ಮುಂದೆ ನಿಲ್ಲುವ ಪಾತ್ರ ನನ್ನದು. ಒಂದು ಹಂತದಲ್ಲಿ ತನಗೆ ಸಮಸ್ಯೆ ಎದುರಾದಾಗ ಆ ಹುಡುಗ ಏನು ಮಾಡುತ್ತಾನೆ. ಅವನ ಬದುಕಿನಲ್ಲಿ ಏನಾಗುತ್ತದೆ ಎನ್ನುವುದೇ ಚಿತ್ರ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. “ವಿಜಯರಥ’ ಚಿತ್ರದಲ್ಲಿ ಜಾಹ್ನವಿ ಮತ್ತು ಅರ್ಚನಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ರಾಜೇಶ್ ನಟರಂಗ ಎಸಿಪಿಯಾಗಿ, ಹನುಮಂತೇ ಗೌಡ ನಾಯಕಿಯ ತಂದೆಯಾಗಿ, ಕಾಕೋಳು ರಾಮಯ್ಯ ತಾತನಾಗಿ ಚಮ್ಮಾರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರು ಎಸ್.ಎಲ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. “ವಿಜಯರಥ’ ಚಿತ್ರದ ದೃಶ್ಯಗಳಿಗೆ ಯೋಗಿ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಚಿತ್ರಕ್ಕೆ ಗೋಪಿ ಸಂಭಾಷಣೆ, ಕುಂಗುಫೂ ಚಂದ್ರು ಸಾಹಸವಿದೆ. ರಮೇಶ್.ಆರ್ ಮಧುಗಿರಿ “ವಿಜಯರಥ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. “ವಿಜಯರಥ’ ಚಿತ್ರವನ್ನು ಬೆಂಗಳೂರು, ಮಧುಗಿರಿ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಥಿಯೇಟರ್‌ನತ್ತ ಹೊರಟಿರುವ “ವಿಜಯರಥ’ದ ಸವಾರಿ ಚಿತ್ರತಂಡಕ್ಕೆ ಎಷ್ಟರ ಮಟ್ಟಿಗೆ ವಿಜಯ ತಂದುಕೊಡಲಿದೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.