ವಿಜಯ ರಾಘವೇಂದ್ರ ನಾಯಕರಾಗಿರುವ “ಗ್ರೇ ಗೇಮ್ಸ್’ ಚಿತ್ರ ವೆ 10ಕ್ಕೆ ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಶ್ರೀಮುರಳಿ ಸೇರಿ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಆನಂದ್ ಮುಗದ್ ನಿರ್ಮಾಣದ ಈ ಚಿತ್ರವನ್ನು ಗಂಗಾಧರ್ ಸಾಲಿಮಠ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ಸೋದರ ಅಳಿಯ ಜಯ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
“ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ನನ್ನ ಅಣ್ಣ ರಾಘು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದಾನೆ. ನಾವು ಆಡಿ ಬೆಳೆಸಿದ ಅಕ್ಕನ ಮಗ ಜಯ್ ಕೂಡ ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ’ ಎಂದು ಚಿತ್ರಕ್ಕೆ ಶುಭಕೋರಿದರು ಶ್ರೀಮುರಳಿ.
ವಿಜಯ ರಾಘವೇಂದ್ರ ಮಾತನಾಡಿ, “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಟ್ರೇಲರ್ ನಾನು ಈ ಹಿಂದೆ ನೋಡಿರಲಿಲ್ಲ. ಈ ಸಮಯದಲ್ಲಿ ನಾನು ಪುನೀತ್ ರಾಜಕುಮಾರ್ ಹಾಗೂ ನನ್ನ ಪತ್ನಿ ಸ್ಪಂದನಾ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಅಕ್ಕನ ಮಗ ಜಯ್ ಕಂಡರೆ ಸ್ಪಂದನಾಗೆ ಬಹಳ ಪ್ರೀತಿ. ಇಂದು ಸ್ಪಂದನಾ ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಮೇ ಹತ್ತರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೀವೆಲ್ಲಾ ನೋಡಿ’ ಎಂದರು.
“ಇದೊಂದು ಮೈಂಡ್ ಗೇಮ್ ಕುರಿತಾದ ಚಿತ್ರ. ಕನ್ನಡದಲ್ಲಿ ಇದು ಅಪರೂಪ ಕಥೆ ಎನ್ನಬಹುದು. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದು ಕೊಂಡಿರುವ ಈ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ’ ಎಂದರು. ನಿರ್ದೇಶಕ ಗಂಗಾಧರ್.