ರಾಜ್‌ಕೋಟ್: ಲೀಗ್ ಹಂತದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಕರ್ನಾಟಕ ತಂಡವು ಗುರುವಾರ ನಡೆದ ವಿಜಯ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡಕ್ಕೆ ಶರಣಾಗಿ ಆಘಾತ ಅನುಭವಿಸಿದೆ.
ದೀಪಕ್ ಹೂಡ ಮತ್ತು ಕರಣ್ ಲಾಂಬ ಅವರ ಅಮೋಘ ಆಟದಿಂದಾಗಿ ರಾಜಸ್ಥಾನ ತಂಡವು 43.4 ಓವರ್‌ಗಳಲ್ಲಿ 4 ವಿಕೆಟಿಗೆ 283 ರನ್ ಪೇರಿಸಿ 6 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಹಂತಕ್ಕೇರಿತು. ಈ ಮೊದಲು ಕರ್ನಾಟಕ ತಂಡವು 8 ವಿಕೆಟಿಗೆ 282 ರನ್ ಗಳಿಸಿತ್ತು. ರಾಜ್‌ಕೋಟ್‌ನಲ್ಲಿ ಡಿ. 16ರಿಂದ ಆರಂಭವಾಗುವ ಫೈನಲ್ ಹೋರಾಟ ದಲ್ಲಿ ರಾಜಸ್ಥಾನ ತಂಡವು ಹರಿ ಯಾಣವನ್ನು ಎದುರಿಸಲಿದೆ. ಹರಿ ಯಾಣ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 63 ರನ್ನುಗಳಿಂದ ಸೋಲಿಸಿತ್ತು.
ಗೆಲ್ಲಲು 283 ರನ್ ಗಳಿಸುವ ಗುರಿ ಪಡೆದ ರಾಜಸ್ಥಾನ ತಂಡವು 23 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ಹಂತದಲ್ಲಿ ದೀಪಕ್ ಹೂಡ ಅವರನ್ನು ಸೇರಿಕೊಂಡ ಕರಣ್ ಲಾಂಬ ಅವರು ಅಮೋಘವಾಗಿ ಆಡಿ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡು ನಾಲ್ಕನೇ ವಿಕೆಟಿಗೆ 255 ರನ್ ಪೇರಿಸಿ ತಂಡದ ಗೆಲುವು ಖಚಿತಪಡಿಸಿದರು. ಗೆಲ್ಲಲು 5 ರನ್‌ಗಳಿರುವಾಗ 180 ರನ್ ಗಳಿಸಿದ್ದ ದೀಪಕ್ ಹೂಡ ಔಟಾದರು. ಅವರು 128 ಎಸೆತ ಎದುರಿಸಿ 19 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು. ಕರಣ್ ಅವರು 73 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ರಾಜಸ್ಥಾನದ ಬಿಗು ದಾಳಿಗೆ ಎದುರಿಸಲು ವಿಫಲವಾಗಿ ವಿಕೆಟ್ ಕಳೆದುಕೊಳ್ಳುತ್ತ ಹೋಯಿತು. ಅಭಿನವ್ ಮನೋಹರ್ ಮತ್ತು ಮನೋಜ್ ಭಾಂಡಗೆ ಅವರು ಆರನೇ ವಿಕೆಟಿಗೆ 95 ರನ್ನುಗಳ ಜತೆಯಾಟ ನಡೆಸಿದ್ದರಿಂದ ಕರ್ನಾಟಕ 8 ವಿಕೆಟಿಗೆ 282 ರನ್ನುಗಳ ಸಾಧಾರಣ ಮೊತ್ತ ಪೇರಿಸುವಂತಾಯಿತು. ಅಭಿನವ್ 91 ರನ್ ಗಳಿಸಿದ್ದರೆ ಮನೋಜ್ 63 ರನ್ ಹೊಡೆದಿದ್ದರು.
ಹರಿಯಾಣಕ್ಕೆ ಜಯ
ಈ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವು ತಮಿಳುನಾಡು ತಂಡವನ್ನು 63 ರನ್ನುಗಳಿಂದ ಸೋಲಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಹರಿ ಯಾಣ ತಂಡವು 7 ವಿಕೆಟಿಗೆ 293 ರನ್ನು ಗಳ ಉತ್ತಮ ಮೊತ್ತ ಪೇರಿ ಸಿತು. ಇದ ಕ್ಕುತ್ತರವಾಗಿ ತಮಿಳು ನಾಡು ತಂಡವು ಬ್ಯಾಟಿಂಗ್ ಕುಸಿತ ಕಂಡು 47.1 ಓವರ್ ಗಳಲ್ಲಿ 230 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.