Advertisement
ನವರಾತ್ರಿಯ ವಿಜಯದಶಮಿಯಂದು ಶಮೀವೃಕ್ಷ ಪೂಜೆ ಮಾಡಿದರೆ “ಅತಿಶಯವಾದ’ ಪುಣ್ಯ ಪ್ರಾಪ್ತವಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವಾಗ ಈ ಶಮೀ ವೃಕ್ಷದ ಬುಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಇರಿಸಿದ್ದರಂತೆ. ಅನಂತರ ವಿಜಯದಶಮಿಯಂದು ಈ ಬನ್ನಿವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ದುರ್ಗಾ ಅನುಗ್ರಹ ಪಡೆದು ಶಸ್ತ್ರಾಸ್ತ್ರಗಳನ್ನು ಹೊರ ತೆಗೆದು ಕೌರವರ ಮೇಲೆ ವಿಜಯ ಸಾಧಿಸಿ “ವಿಜಯೋತ್ಸವ’ ಸಾಧಿಸಿದ ಈ ದಿನ ವಿಜಯದಶಮಿ. ಅಗ್ನಿ ಎನ್ನುವುದು ಪರಿಶುದ್ಧತೆಯ ಸಂಕೇತ. ಅಗ್ನಿ ಎಲ್ಲ ಪಾಪಗಳನ್ನು ಕಳೆಯುವಂಥದ್ದು. ಇಂತಹ ಅಗ್ನಿಯ ಸನ್ನಿಧಾನವಿರುವ ಶಮೀ ವೃಕ್ಷ ಪೂಜೆಯಿಂದ ಮಾನವನ ಪಾಪಗಳು ನಾಶವಾಗಿ ಪುಣ್ಯ ಲಭಿಸುತ್ತವೆ. ಹಾಗಾಗಿ ನವರಾತ್ರಿಯ ಈ ವಿಜಯ ದಶಮಿಯಂದು ಶಮೀಪೂಜೆ ಮಾಡುವುದಾಗಿದೆ.
ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ದೇವರು ಲೋಕ ಕಂಟಕನಾದ ದಶಕಂಠ ರಾವಣನನ್ನು ವಧಿಸಿದ ದಿನ ವಿಜಯದಶಮಿ. ಈ ವಿಜಯಕ್ಕಾಗಿ ಒಂಬತ್ತು ದಿನಗಳ ಕಾಲ ದುಷ್ಟ ಸಂಹಾರಿಣಿ ಶ್ರೀ ದುರ್ಗಾಮಾತೆಯನ್ನು ಪೂಜಿಸಿ ಹತ್ತನೆಯ ದಿನ ಅಂದರೆ, ದಶಮಿಯಂದು ದೈತ್ಯ ರಾವಣನನ್ನು ವಧಿಸಿ ವಿಜಯೋತ್ಸವ ಆಚರಿಸಿದ ದಿನವೇ ವಿಜಯದಶಮಿ. ಲೋಕಮಾತೆ ಜಗಜ್ಜನನಿ ಶ್ರೀ ಚಾಮುಂಡೇಶ್ವರೀ ದೈತ್ಯ ಭಯಂಕರ ಮಹಿಷಾಸುರನನ್ನು ಕೊಂದು ಮಹಿಷಾಸುರ ಮರ್ದಿನಿಯಾದ ದಿನವೂ ಈ ವಿಜಯ ದಶಮಿ. ಮನು ಕುಲದ ಉದ್ಧಾರಕ್ಕಾಗಿ ಉಡುಪಿಯ ಪುಣ್ಯಭೂಮಿ “ಪಾಜಕ ಕ್ಷೇತ್ರ’ದಲ್ಲಿ ಜಗದ್ಗುರುಗಳಾದ ಶ್ರೀ ಮಧ್ವಾ ಚಾರ್ಯರು ಅವತರಿಸಿದ (ಜನಿಸಿದ) ದಿನವೂ ಈ ವಿಜಯದಶಮಿಯಾಗಿರುವುದು ವಿಶೇಷ.
Related Articles
Advertisement
– ವೈ. ಎನ್. ವೆಂಕಟೇಶ ಮೂರ್ತಿ ಭಟ್ಪ್ರಧಾನ ಅರ್ಚಕರು, ಶ್ರೀ ಮುಖ್ಯಪ್ರಾಣ ದೇವಸ್ಥಾನ ದೊಡ್ಮನೆಬೆಟ್ಟು , ಕೋಟೇಶ್ವರ