ಬೆಂಗಳೂರು: ವಿಜಯಾ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ 79.56 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ. 65.45ರಷ್ಟು ಇಳಿಕೆ ಕಂಡಿದೆ.
ವಿಜಯಾ ಬ್ಯಾಂಕ್‌ನ ಮೂರನೇ ತ್ತೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ ಹಾಗೂ ಒಟ್ಟು ಆದಾಯ ಪ್ರಮಾಣವು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಇಳಿಕೆ ಕಂಡಿದೆ. 2016-17ನೇ ಸಾಲಿನ ಮೂರನೇ ತ್ತೈಮಾಸಿಕದಲ್ಲಿ 230.28 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ ಇಳಿಕೆ ಕಂಡಿದೆ.
ಮೂರನೇ ತ್ತೈಮಾಸಿಕದಲ್ಲಿ ಬ್ಯಾಂಕ್ 3,450.81 ಕೋಟಿ ರೂ. ಒಟ್ಟು ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 3,714.37 ಕೋಟಿ ರೂ. ಗಳಿಸಿದ್ದು, ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ ಶೇ.7.09ರಷ್ಟು ಇಳಿಕೆ ಕಂಡಿದೆ. ಬ್ಯಾಂಕ್ ಒಟ್ಟು ವಹಿವಾಟು ಪ್ರಮಾಣ ಶೇ.13.85ರಷ್ಟು ಏರಿಕೆ ದಾಖಲಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.6.98ರಷ್ಟಿದ್ದ ಒಟ್ಟು ಅನುತ್ಪಾದಕ ಸಾಲ ಮೊತ್ತವು ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ ಶೇ.6.17ಕ್ಕೆ ಇಳಿಕೆಯಾಗಿದೆ. ಜತೆಗೆ ನಿವ್ವಳ ಅನುತ್ಪಾದಕ ಸಾಲ ಮೊತ್ತವು ಶೇ.4.74ರಿಂದ ಶೇ. 3.99ಕ್ಕೆ ಇಳಿಕೆ ಕಂಡಿದೆ.
ನಗರದ ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಬುಧವಾರ ಮೂರನೇ ತ್ತೈಮಾಸಿಕ ವರದಿ ಕುರಿತು ಮಾಹಿತಿ ನೀಡಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ಆರ್.ಎ.ಶಂಕರನಾರಾಯಣ, ಪ್ರಸಕ್ತ ವರ್ಷದ ಮೂರನೇ ತ್ತೈಮಾಸಿಕದಲ್ಲಿ 79.56 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಇಳಿಕೆಯಾಗಿದೆ. ಆದರೆ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 519.71 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಮಾರ್ಚ್ ಅಂತ್ಯಕ್ಕೆ 800 ಕೋಟಿ ರೂ. ಮೀರುವ ವಿಶ್ವಾಸವಿದೆ. ಕಳೆದ ವರ್ಷ ಬ್ಯಾಂಕ್ ಒಟ್ಟು 750.48 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕ್‌ನ ಕಾರ್ಯ ನಿರ್ವಹಣೆ ಉತ್ತಮವಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಬ್ಯಾಂಕ್ ಉತ್ತಮ ಶ್ರೇಯಾಂಕ ಪಡೆದಿದೆ ಎಂದು ಹೇಳಿದರು. ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕರಾದ ವೈ.ನಾಗೇಶ್ವರ ರಾವ್, ಬಿ.ಎಸ್.ರಾಮರಾವ್ ಉಪಸ್ಥಿತರಿದ್ದರು.