Advertisement
ಇಲ್ಲಿನ “ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ಗುರುವಾರ ಮೊದಲ್ಗೊಂಡ ಸರಣಿಯ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗನ್ನೇ ಆಯ್ದುಕೊಂಡಿತು. ಆದರೆ ಪಂದ್ಯದ ಮೊದಲ ಓವರಿನ 4ನೇ ಎಸೆತದಲ್ಲೇ ಆರಂಭಕಾರ ಕೆ.ಎಲ್. ರಾಹುಲ್ (2) ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ತಸ್ಕಿನ್ ಅಹ್ಮದ್ ಭಾರತಕ್ಕೆ ಭೀತಿಯೊಡ್ಡಿದರು. ಆಗ ಬಾಂಗ್ಲಾ ಪಾಳೆಯದಲ್ಲಿನ ಸಂಭ್ರಮ ಹೇಳತೀರದು. ಆದರೆ ಹೊತ್ತೇರಿದಂತೆ ಈ ಭೀತಿ ಮಂಜಿನಂತೆ ಕರಗುತ್ತ ಹೋಯಿತು. ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಸೇರಿಕೊಂಡು ಹೈದರಾಬಾದ್ ಟ್ರ್ಯಾಕ್‌ನಲ್ಲಿ ಹೆದರಲಿಕ್ಕೇನೂ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತ ಹೋದರು. ಟೀಮ್ ಇಂಡಿಯಾದ ಮೊತ್ತ ಬೆಳೆಯುತ್ತ ಹೋಯಿತು.
ರಾಹುಲ್ ತ್ವರಿತ ನಿರ್ಗಮನದ ಬಳಿಕ ಜತೆಗೂಡಿದ ವಿಜಯ್-ಪೂಜಾರ ಭರ್ತಿ 50 ಓವರ್‌ಗಳ ಬ್ಯಾಟಿಂಗ್ ನಿಭಾಯಿಸಿದರು; 2ನೇ ವಿಕೆಟಿಗೆ 178 ರನ್ ಸೂರೆಗೈದು ರಹೀಂ ಪಡೆಯ ಲೆಕ್ಕಾಚಾರವನ್ನೆಲ್ಲ ಬುಡಮೇಲುಗೊಳಿಸಿದರು. ಟೀ ವಿರಾಮಕ್ಕೆ 8 ಓವರ್ ಉಳಿದಿರುವಾಗ ಈ ಜತೆಯಾಟ ಬೇರ್ಪಟ್ಟಿತು. ಪೂಜಾರ ಅವರ ಶತಕಕ್ಕೆ ಅಡ್ಡಿಯಾದವರು ಆಫ್ಸ್ಪಿನ್ನರ್ ಮಿರಾಜ್. ಬ್ಯಾಟಿಗೆ ಸವರಿದ ಚೆಂಡನ್ನು ಕೀಪರ್ ರಹೀಂ 2ನೇ ಪ್ರಯತ್ನದಲ್ಲಿ ಕ್ಯಾಚಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. 177 ಎಸೆತ ನಿಭಾಯಿಸಿದ ಪೂಜಾರ 9 ಬೌಂಡರಿ ನೆರವಿನಿಂದ 83 ರನ್ ಕೊಡುಗೆ ಸಲ್ಲಿಸಿದರು.
Related Articles
Advertisement
ಮುರಳಿ ವಿಜಯ್ 9ನೇ ಶತಕ
ಮೊದಲ ದಿನದಾಟದ ಮೊದಲ ಶತಕಕ್ಕೆ ಸಾಕ್ಷಿಯಾದವರು ಆರಂಭಕಾರ ಮುರಳಿ ವಿಜಯ್. 149 ಎಸೆತಗಳಲ್ಲಿ ಅವರ ಸೆಂಚುರಿ ಪೂರ್ತಿಗೊಂಡಿತು. 160 ಎಸೆತ ಎದುರಿಸಿ 108 ರನ್ ಮಾಡಿದ ವಿಜಯ್, 12 ಬೌಂಡರಿ ಹಾಗೂ ದಿನದ ಏಕೈಕ ಸಿಕ್ಸರ್ ಸಿಡಿಸಿದರು. ಇದು ವಿಜಯ್ ಅವರ 9ನೇ ಶತಕ. ಬಾಂಗ್ಲಾ ವಿರುದ್ಧ ಎರಡನೆಯದು. 2015ರ ಫಾತುಲ್ಲ ಟೆಸ್ಟ್‌ನಲ್ಲಿ ಅವರು 150 ರನ್ ಹೊಡೆದಿದ್ದರು.
ಮುರಳಿ ವಿಜಯ್ ಕಳೆದ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ 2 ಶತಕ ಬಾರಿಸಿ ಮೆರೆದಿದ್ದರು. ಇದರಲ್ಲೊಂದು ಶತಕ ರಾಜ್‌ಕೋಟ್‌ನ ಮೊದಲ ಟೆಸ್ಟ್‌ನಲ್ಲೇ ಬಂದಿತ್ತು (126).
ಕೊಹ್ಲಿಗೆ ಕೊಹ್ಲಿಯೇ ಸಾಟಿ!ತನಗೆ ತಾನೇ ಸಾಟಿ ಎಂಬ ರೀತಿಯಲ್ಲಿ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾ ಬೌಲಿಂಗನ್ನು ಕಣ್ಮುಚ್ಚಿಕೊಂಡು ಪುಡಿಗಟ್ಟುತ್ತ ಹೋದರು. ಭಾರತದ ರನ್‌ಗತಿ ರಾಕೆಟ್ ವೇಗ ಪಡೆದುಕೊಂಡಿತು. 130 ಎಸೆತಗಳಲ್ಲಿ ಅವರ 16ನೇ ಶತಕ ಪೂರ್ತಿಗೊಂಡಿತು. ಇದು ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ಹೊಡೆದ ಮೊದಲ ಸೆಂಚುರಿ. 141 ಎಸೆತ ಎದುರಿಸಿರುವ ಕೊಹ್ಲಿ 12 ಬೌಂಡರಿ ನೆರವಿನಿಂದ 111 ರನ್ ಗಳಿಸಿದ್ದಾರೆ. ದ್ವಿತೀಯ ದಿನದಾಟದಲ್ಲಿ ಅವರು ಮತ್ತಷ್ಟು ಅಪಾಯಕಾರಿಯಾಗಿ ಬೆಳೆಯುವ ಎಲ್ಲ ಸಾಧ್ಯತೆ ಇದೆ. ಮರಳಿ ಬಂದಿರುವ ಅಜಿಂಕ್ಯ ರಹಾನೆ 60 ಎಸೆತಗಳಿಂದ 45 ರನ್ ಮಾಡಿ ಕೊಹ್ಲಿಗೆ ಬೆಂಬಲ ನೀಡುತ್ತಿದ್ದಾರೆ. ಕೊಹ್ಲಿ-ರಹಾನೆ ಜೋಡಿಯ ಮುರಿಯದ 4ನೇ ವಿಕೆಟ್ ಜತೆಯಾಟದಲ್ಲಿ 122 ರನ್ ಹರಿದು ಬಂದಿದೆ. ತ್ರಿಶತಕವೀರ ಕರುಣ್‌ಗೆ ಸ್ಥಾನವಿಲ್ಲ !
ಭಾರತ ಆಡಿದ ಕಳೆದ ಟೆಸ್ಟ್ ಪಂದ್ಯದಲ್ಲಿ ಅಮೋಘ ತ್ರಿಶತಕ ಬಾರಿಸಿ ವಿಶ್ವದ ಗಮನ ಸೆಳೆದ ಕರ್ನಾಟಕದ ಕರುಣ್ ನಾಯರ್ ಅವರನ್ನು ಹೈದರಾಬಾದ್ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ಕೈಬಿಡಲಾಗಿದೆ. ತ್ರಿಬಲ್ ಸೆಂಚುರಿ ಹೊಡೆದೂ ಮುಂದಿನ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಕಳೆದುಕೊಂಡ ವಿಶ್ವದ ಕೇವಲ 2ನೇ ಆಟಗಾರನಾಗಿ ನಾಯರ್ ಗುರುತಿಸಲ್ಪಟ್ಟಿದ್ದಾರೆ. ಮೊದಲಿಗನೆಂದರೆ ಇಂಗ್ಲೆಂಡಿನ ಆ್ಯಂಡಿ ಸ್ಯಾಂಡ್‌ಹ್ಯಾಮ್. ಇದು 1930ರಷ್ಟು ಹಿಂದಿನ ವಿದ್ಯಮಾನ. ಅಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ಆಡಲಾದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಸ್ಯಾಂಡ್‌ಹ್ಯಾಮ್ 325 ರನ್ ಬಾರಿಸಿ ದೊಡ್ಡ ಹೀರೋ ಆಗಿದ್ದರು. ಕಾರಣ, ಇದು ಟೆಸ್ಟ್ ಇತಿಹಾಸದ ಪ್ರಪ್ರಥಮ ತ್ರಿಶತಕವಾಗಿತ್ತು. ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ 50 ರನ್ ಹೊಡೆದರು. ದುರಂತವೆಂದರೆ, ಇಂಗ್ಲೆಂಡಿನ ಮುಂದಿನ ಟೆಸ್ಟ್ ಪಂದ್ಯದಲ್ಲಿ ಸ್ಯಾಂಡ್‌ಹ್ಯಾಮ್ ಸುಳಿವೇ ಇರಲಿಲ್ಲ. ಇದಕ್ಕೂ ಮಿಗಿಲಾದ ದುರಂತವೆಂದರೆ, ಈ ತ್ರಿಶತಕ ಸಾಹಸದ ಬಳಿಕ ಸ್ಯಾಂಡ್‌ಹ್ಯಾಮ್ ಮತ್ತೆಂದೂ ಟೆಸ್ಟ್ ಆಡಲಿಲ್ಲ. ಆಗಲೇ ಅವರಿಗೆ 40 ವರ್ಷವಾದುದೂ ಒಂದು ಕಾರಣವೆನಿಸಿತು. ಭಾರತ ತನ್ನ ಕೊನೆಯ ಟೆಸ್ಟ್ ಪಂದ್ಯವಾಡಿದ್ದು ಪ್ರವಾಸಿ ಇಂಗ್ಲೆಂಡ್ ವಿರುದ್ಧ, ಚೆನ್ನೈಯಲ್ಲಿ. ಈ ಪಂದ್ಯದಲ್ಲಿ ಕರುಣ್ ನಾಯರ್ ಅದ್ಭುತ ಬ್ಯಾಟಿಂಗ್ ನಡೆಸಿ ಅಜೇಯ 303 ರನ್ ಬಾರಿಸಿದ್ದರು. ಆದರೆ ಕ್ಯಾಪ್ಟನ್ ಕೊಹ್ಲಿ ನೀಡಿದ ಸುಳಿವಿನಂತೆ ಹೈದರಾಬಾದ್ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಪ್ರವೇಶವಾಯಿತು. ಚೆನ್ನೈ ಟೆಸ್ಟ್‌ನಲ್ಲಿ ಆಡಿದ ಕೀಪರ್ ಪಾರ್ಥಿವ್ ಪಟೇಲ್ ಅವರನ್ನು ಮೊದಲೇ ತಂಡದಿಂದ ಕೈಬಿಡಲಾಗಿತ್ತು. ಈ ಸ್ಥಾನಕ್ಕೆ “ಮೊದಲ ಆಯ್ಕೆಯ ಕೀಪರ್’ ವೃದ್ಧಿಮಾನ್ ಸಾಹಾ ಮರಳಿದರು. ಗಾಯಾಳು ಅಮಿತ್ ಮಿಶ್ರಾ ಸ್ಥಾನ ಭುವನೇಶ್ವರ್ ಕುಮಾರ್ ಪಾಲಾಯಿತು. ಎಕ್ಸ್‌ಟ್ರಾ ಇನ್ನಿಂಗ್ಸ್
ಚೇತೇಶ್ವರ್ ಪೂಜಾರ ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಋತುವೊಂದರಲ್ಲಿ ಸರ್ವಾಧಿಕ 1,605 ರನ್ ಪೇರಿಸಿ ನೂತನ ದಾಖಲೆ ಸ್ಥಾಪಿಸಿದರು (2016-17ನೇ ಋತು). 1964-65ರ ಋತುವಿನಲ್ಲಿ ಚಂದು ಬೋರ್ಡೆ ಗಳಿಸಿದ 1,604 ರನ್ನುಗಳ ದಾಖಲೆ ಪತನಗೊಂಡಿತು. ಈ ಯಾದಿಯ 3ನೇ ಸ್ಥಾನ ಕೂಡ ಪೂಜಾರ ಪಾಲಾಗಿದೆ. ಅವರು 2012-13ನೇ ಋತುವಿನಲ್ಲಿ 1,585 ರನ್ ಮಾಡಿದ್ದರು. ತವರಿನ ಪ್ರಸಕ್ತ ಟೆಸ್ಟ್ ಋತುವಿನಲ್ಲಿ (2016-17) ವಿಜಯ್-ಪೂಜಾರ 5ನೇ ಶತಕದ ಜತೆಯಾಟ ನಡೆಸಿದರು. ಇದು ಭಾರತೀಯ ದಾಖಲೆ. 1948-49ರಲ್ಲಿ ವಿಜಯ್ ಹಜಾರೆ-ರೂಸಿ ಮೋದಿ 4 ಶತಕದ ಜತೆಯಾಟ ನಡೆಸಿದ ದಾಖಲೆ ಪತನಗೊಂಡಿತು. 2005-06ರಲ್ಲಿ ಮ್ಯಾಥ್ಯೂ ಹೇಡನ್-ರಿಕಿ ಪಾಂಟಿಂಗ್ 7 ಶತಕದ ಜತೆಯಾಟ ನಡೆಸಿದ್ದು ವಿಶ್ವದಾಖಲೆ. ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಶತಕ ಹೊಡೆದರು. ಇದರೊಂದಿಗೆ ಅವರು ತಾನಾ ಡಿದ ಎಲ್ಲ 7 ರಾಷ್ಟ್ರಗಳ ವಿರುದ್ಧವೂ ಶತಕ ಬಾರಿಸಿ ದಂತಾಯಿತು. ಕೊಹ್ಲಿ ಈವರೆಗೆ ಪಾಕಿಸ್ಥಾನ ಹಾಗೂ ಜಿಂಬಾಬ್ವೆ ವಿರುದ್ಧ ಟೆಸ್ಟ್ ಆಡಿಲ್ಲ. ಕೊಹ್ಲಿ ನಾಯಕನಾಗಿ 9ನೇ ಶತಕ ಬಾರಿಸಿದರು. ಇದರೊಂದಿಗೆ ಅಜರುದ್ದೀನ್ ಅವರೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡರು. ಅಗ್ರಸ್ಥಾನ ದಲ್ಲಿರುವ ಸುನೀಲ್ ಗಾವಸ್ಕರ್ 11 ಶತಕ ಬಾರಿಸಿದ್ದು ಭಾರತೀಯ ನಾಯಕನ ದಾಖಲೆಯಾಗಿದೆ. ಕೊಹ್ಲಿ 4ನೇ ಕ್ರಮಾಂಕದಲ್ಲಿ 12 ಶತಕ ಬಾರಿಸಿದರು. ಇದು ಈ ಕ್ರಮಾಂಕದಲ್ಲಿ ಭಾರತೀಯನ ಜಂಟಿ ಅತ್ಯುತ್ತಮ ಸಾಧನೆ. ಜಿ.ಆರ್. ವಿಶ್ವನಾಥ್ ಕೂಡ 12 ಶತಕ ಹೊಡೆದಿದ್ದಾರೆ. 4ನೇ ಕ್ರಮಾಂಕದಲ್ಲಿ 44 ಶತಕ ಬಾರಿಸಿದ ತೆಂಡುಲ್ಕರ್ ಭಾರತೀಯ ದಾಖಲೆಯನ್ನಷ್ಟೇ ಅಲ್ಲ, ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ತಸ್ಕಿನ್ ಅಹ್ಮದ್ ಟೆಸ್ಟ್ ಪಂದ್ಯದ ಮೊದಲ ಓವರಿ ನಲ್ಲೇ ವಿಕೆಟ್ ಕಿತ್ತ ಬಾಂಗ್ಲಾದೇಶದ ಬೌಲರ್ ಎನಿಸಿದರು. ಮುರಳಿ ವಿಜಯ್ 9ನೇ ಶತಕ ಹೊಡೆದರು. ಇದು ಭಾರತೀಯ ಆರಂಭಿಕನ 3ನೇ ಶ್ರೇಷ್ಠ ಸಾಧನೆ. ಗಾವಸ್ಕರ್ (33) ಮತ್ತು ಸೆಹವಾಗ್ (22) ಮೊದಲೆರಡು ಸ್ಥಾನದಲ್ಲಿದ್ದಾರೆ. ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
ಕೆ.ಎಲ್. ರಾಹುಲ್ ಬಿ ತಸ್ಕಿನ್ 2
ಮುರಳಿ ವಿಜಯ್ ಬಿ ತೈಜುಲ್ 108
ಚೇತೇಶ್ವರ್ ಪೂಜಾರ ಸಿ ರಹೀಂ ಬಿ ಮಿರಾಜ್ 83
ವಿರಾಟ್ ಕೊಹ್ಲಿ ಬ್ಯಾಟಿಂಗ್ 111
ಅಜಿಂಕ್ಯ ರಹಾನೆ ಬ್ಯಾಟಿಂಗ್ 45 ಇತರ 7
ಒಟ್ಟು (3 ವಿಕೆಟಿಗೆ) 356
ವಿಕೆಟ್ ಪತನ: 1-2, 2-180, 3-234. ಬೌಲಿಂಗ್: ತಸ್ಕಿನ್ ಅಹ್ಮದ್ 16-2-58-1
ಕಮ್ರುಲ್ ಇಸ್ಲಾಂ ರಬ್ಬಿ 17-1-91-0
ಸೌಮ್ಯ ಸರ್ಕಾರ್ 1-0-4-0
ಮೆಹೆದಿ ಹೊಸೇನ್ ಮಿರಾಜ್ 20-0-93-1
ಶಕಿಬ್ ಅಲ್ ಹಸನ್ 13-3-45-0
ತೈಜುಲ್ ಇಸ್ಲಾಮ್ 20-4-50-1
ಶಬ್ಬೀರ್ ರೆಹಮಾನ್ 3-0-10-0