ಗಾಂಧಿನಗರ : 61ರ ಹರೆಯದ ಭಾರತೀಯ ಜನತಾ ಪಕ್ಷದ ನಾಯಕ ವಿಜಯ್ ರೂಪಾನಿ ಅವರಿಂದು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ, ಸಚಿವಾಲಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ, ಪ್ರಮಾಣ ವಚನ ಸ್ವೀಕರಿಸಿದರು. ಅಂತೆಯೇ ನಿತಿನ್ ಪಟೇಲ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು.
ಬಿಜೆಪಿ ನಾಯಕತ್ವದ ಶಕ್ತಿ ಪ್ರದರ್ಶನವೆಂಬಂತೆ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಹಿರಿಯ ರಾಜಕಾರಣಿಗಳು ಉಪಸ್ಥಿತರಿದ್ದರು.
ರಾಜ್ಯಪಾಲ ಓ ಪಿ ಕೊಹ್ಲಿ ಅವರು ಸಚಿವ ದ್ವಯರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ರೂಪಾನಿ ಮತ್ತು ಅವರ ಪತ್ನಿ ಪ್ರಸಿದ್ಧ ಪಂಚದೇವ ಮಹಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಗೆ 99 ಸ್ಥಾನಗಳು ಲಭಿಸಿವೆ; 2012ರಲ್ಲಿ ಇದು 115 ಆಗಿತ್ತು. ಎಂದರೆ ಈ ಬಾರಿ ದು 16 ಕಡಿಮೆ !
ವಿರೋಧ ಪಕ್ಷ ಕಾಂಗ್ರೆಸ್ 2012ರಲ್ಲಿ 61 ಸ್ಥಾನಗಳನ್ನು ಗೆದ್ದಿತ್ತಾದರೆ ಈ ಬಾರಿ ತನ್ನ ಬಲವನ್ನು ಸುಧಾರಿಸಿಕೊಂಡು 77ಕ್ಕೆ ಏರಿಸಿಕೊಂಡಿತು.