ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಫ್ರಾನ್ಸ್‌ನ ದ್ವೀಪ ಇಲ್ಲೆ ಸೈಂಟ್‌ನಲ್ಲಿ ಖರೀದಿಸಿದ್ದ 17 ಬೆಡ್‌ರೂಂಗಳ ಬಂಗಲೆಯನ್ನು ಮಾರಾಟ ಮಾಡಲು ಕತಾರ್ ನ್ಯಾಷನಲ್ ಬ್ಯಾಂಕ್ ನಿರ್ಧರಿಸಿದೆ. ಈ ಬಗ್ಗೆ ಲಂಡನ್‌ನ ಸ್ಥಳೀಯ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಪ್ರಸ್ತಾಪಿಸಲಾಗಿದೆ.
ಮಲ್ಯ ಅವರು ಅನ್ಸಾ$ºಚರ್ ಆ್ಯಂಡ್ ಕೊ ಎಂಬ ಕಂಪನಿಗೆ ಆ ಮನೆಯನ್ನು ಆಧಾರವಾಗಿ ಇರಿಸಿ 30 ಮಿಲಿಯನ್ ಡಾಲರ್ ಸಾಲ ಪಡೆದುಕೊಂಡಿದ್ದರು. ನಂತರ ಅದನ್ನು ಪಾವತಿಸಲು ಅಸಮರ್ಥರಾದ ಕಾರಣ ಅದನ್ನು ಮಾರಾಟ ಮಾಡಲು ಬ್ಯಾಂಕ್ ಮುಂದಾಗಿದೆ.
1.3 ಹೆಕ್ಟೇರ್ ಪ್ರದೇಶದಲ್ಲಿ ಚಾಚಿಕೊಂಡಿರುವ ಈ ಅದ್ಧೂರಿ ಬಂಗಲೆಯಲ್ಲಿ ಸಿನಿಮಾ ಹಾಲ್, ಹೆಲಿಪ್ಯಾಡ್ ಮತ್ತು ನೈಟ್ ಕ್ಲಬ್ ನಿರ್ಮಿಸಲಾಗಿತ್ತು. ಸದ್ಯ ಈ ಅದ್ಧೂರಿ ವ್ಯವಸ್ಥೆಗಳೆಲ್ಲವೂ ಬಳಕೆ ಮಾಡದೆ ಹಾಳು ಬಿದ್ದಿವೆ. ಸಾಲ ಪಾವತಿ ಅವಧಿ ವಿಸ್ತರಿಸಬೇಕೆಂಬ ಮಲ್ಯ ಮನವಿ ಹಿನ್ನೆಲೆಯಲ್ಲಿ ಬ್ಯಾಂಕ್ ವತಿಯಿಂದ ಆಸ್ತಿಯ ಮರು ಮೌಲ್ಯಮಾಪನ ನಡೆಸಿದಾಗ ಅದರ ಮೌಲ್ಯ 10 ಮಿಲಿಯನ್ ಯೂರೋಗಳಷ್ಟು ಕುಸಿತ ಕಂಡಿದೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆಗಳು ದೃಢೀಕರಿಸಿದವು.
ಹೀಗಾಗಿ, ಅದನ್ನು ಮಾರುವುದೇ ಸೂಕ್ತ ಎಂದು ಬ್ಯಾಂಕ್ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ. ಜತೆಗೆ ಇಂಗ್ಲೆಂಡ್‌ನಲ್ಲಿ ಬಳಕೆಯಾಗದೇ ಉಳಿದಿರುವ ಮಲ್ಯರ ವಿಲಾಸಿ ನೌಕೆಯನ್ನೂ ಹರಾಜು ಹಾಕುವ ಪ್ರಯತ್ನ ನಡೆದಿವೆ. ಅದನ್ನು ಆಧಾರವಾಗಿರಿಸಿಕೊಂಡು 5 ಮಿಲಿಯನ್ ಯೂರೋ ಸಾಲ ಪಡೆದುಕೊಂಡಿದ್ದರು. ಈಗ ಮಲ್ಯ ಲಂಡನ್‌ನಿಂದ ಭಾರತಕ್ಕೆ ಗಡಿಪಾರು ಆಗುವ ಭೀತಿಯಲ್ಲಿದ್ದಾರೆ.