Advertisement

ಮಲ್ಯ ರೀತಿ ನೀವೂ ಚಾಲಾಕಿ ಉದ್ಯಮಿಯಾಗಿ: ಬುಡಕಟ್ಟು ಜನರಿಗೆ ಸಚಿವ ಓರಂ

11:36 AM Jul 14, 2018 | Team Udayavani |

ಹೈದರಾಬಾದ್‌ : “ಉದ್ಯಮಿ ವಿಜಯ್‌ ಮಲ್ಯ ತುಂಬಾ ಚಾಲಾಕಿ ಮನುಷ್ಯ; ನೀವು ಕೂಡ ಆತನಂತೆ ಯಶಸ್ವಿ ಉದ್ಯಮಿಗಳಾಗಲು ಸಾಕಷ್ಟು ಬ್ಯಾಂಕ್‌ ಸಾಲ ತೆಗೆದುಕೊಳ್ಳಬೇಕು’ ಎಂದು ಕೇಂದ್ರ ಸಚಿವ ಜುವಾಲ್‌ ಓರಂ ಅವರು ಎಸ್‌ಸಿ/ಎಸ್‌ಟಿ ವರ್ಗದವರಿಗೆ ಸಲಹೆ ನೀಡಿದ್ದಾರೆ. 

Advertisement

2018ರ ರಾಷ್ಟ್ರೀಯ ಬುಡಕಟ್ಟು ಉದ್ಯಮಶೀಲರ ಚೊಚ್ಚಲ ಶೃಂಗದಲ್ಲಿ ಮಾತನಾಡುತ್ತಿದ್ದ ಸಚಿವ ಓರಂ ಅವರು, ಬುಡಕಟ್ಟು ಜನರ ಕಲ್ಯಾಣಕ್ಕೆ ಬದ್ಧವಾಗಿರುವ ಸರಕಾರ ಬುಡಕಟ್ಟು ಉದ್ಯಮಶೀಲರನ್ನು ಪ್ರೋತ್ಸಾಹಿಸಲು ಅನೇಕಾನೇಕ ಹಣಕಾಸು ನೆರವು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು. 

ಯಶಸ್ವೀ ಉದ್ಯಮಿಗಳಾಗಲು ಬುಡಕಟ್ಟು ಸಮುದಾಯದ ಉದ್ಯಮಶೀಲರು ವಿಜಯ್‌ ಮಲ್ಯ ಅವರಂತೆ ಚುರುಕಿನ, ಚಾಲಾಕಿಯ ಉದ್ಯಮಿಯಾಗಬೇಕು ಎಂದು ಸಚಿವ ಓರಂ ಕರೆ ನೀಡಿದರು. 

ಅಂದಹಾಗೆ ಮದ್ಯ ದೊರೆ ವಿಜಯ್‌ ಮಲ್ಯ ಅವರು ಭಾರತೀಯ ಬ್ಯಾಂಕುಗಳ ಸಮೂಹಕ್ಕೆ 9,000 ಕೋಟಿ ರೂ. ಸಾಲವನ್ನು ಸುಸ್ತಿ ಇರಿಸಿ ಲಂಡನ್‌ಗೆ ಪಲಾಯನಮಾಡಿದ್ದು ಅವರ ವಿದೇಶಿ ಆಸ್ತಿಪಾಸ್ತಿಗಳ ಮುಟ್ಟುಗೋಲು ಮತ್ತು ಗಡೀಪಾರು ಪ್ರಕ್ರಿಯೆಯು ಈಗ ನಡೆಯುತ್ತಿದೆ. 

ವೇದಿಕೆಯಲ್ಲಿ ಪುಂಖಾನುಪುಂಖವಾಗಿ ತನ್ನ ಆಲೋಚನೆಗಳನ್ನು ಹರಿಯಬಿಟ್ಟ ಸಚಿವ ಓರಂ ಅವರು, “ನಾವು ಉದ್ಯಮಿಗಳಾಗಬೇಕಾದರೆ ಬುದ್ದಿವಂತರೂ, ಚುರುಕಿನವರೂ ಚಾಲಾಕಿಗಳೂ ಆಗಬೇಕು; ಉದ್ಯಮ ಸಂಬಂಧಿ ಮಾಹಿತಿಗಳನ್ನು, ಜ್ಞಾನವನ್ನು ಸಂಪಾದಿಸಬೇಕು; ಏಕೆಂದರೆ ಜ್ಞಾನವೇ ನಮ್ಮ ಶಕ್ತಿ; ಯಾರಲ್ಲಿ ಮಾಹಿತಿ, ಜ್ಞಾನ ಇರುತ್ತದೆಯೋ ಅವರೇ ಅಧಿಕಾರವನ್ನು ಪ್ರಯೋಗಿಸುತ್ತಾರೆ’ ಎಂದು ಹೇಳಿದರು. 

Advertisement

“ನೀವೆಲ್ಲ ವಿಜಯ್‌ ಮಲ್ಯ ಅವರನ್ನು ಟೀಕಿಸುತ್ತೀರಿ; ಆದರೆ ವಿಜಯ್‌ ಮಲ್ಯ ಯಾರು ? ಒಬ್ಬ ಚಾಲಾಕಿ ಮನುಷ್ಯ. ಅವರು ಕೆಲವು ಬುದ್ಧಿವಂತ ಜನರನ್ನು ತನ್ನ ಕೈಕೆಳಗೆ ಕೆಲಸಕ್ಕಿಟ್ಟುಕೊಂಡ ಮಹಾ ಚಾಲಕಿ, ಚುರುಕಿನ ಮನುಷ್ಯ. ಆತ ಅಲ್ಲಿ, ಇಲ್ಲಿ ಎಂಬಂತೆ ಬ್ಯಾಂಕರ್‌ಗಳೊಂದಿಗೆ, ರಾಜಕಾರಣಿಗಳೊಂದಿಗೆ, ಸರಕಾರದೊಂದಿಗೆ ಚಾಣಾಕ್ಷತೆಯಿಂದ ವ್ಯವಹರಿಸಿ ಅವರನ್ನು ಖರೀದಿಸಿದರು. ವಿಜಯ್‌ ಮಲ್ಯ ಅವರಂತೆ ಚಾಣಾಕ್ಷ, ಚಾಲಾಕಿ ಉದ್ಯಮಿಯಾಗುವುದಕ್ಕೆ ನಿಮ್ಮನ್ನು ಯಾರು ತಡೆದಿದ್ದಾರೆ? ಆದಿವಾಸಿಗಳು ವ್ಯವಸ್ಥೆಯ ಮೇಲೆ, ಬ್ಯಾಂಕರ್‌ಗಳ ಮೇಲೆ  ಪ್ರಭಾವ ಬೀರಬಾರದು ಎಂದು ಯಾರು ಹೇಳಿದ್ದಾರೆ?’ ಎಂದು ಸಚಿವ ಓರಂ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next