Advertisement

ಮಲ್ಯ ಪ್ರಕರಣ; ತೀರ್ಪು ಎಚ್ಚರಿಕೆಯಾಗಲಿ

06:34 PM May 11, 2018 | Team Udayavani |

ಭಾರತದ ಬ್ಯಾಂಕುಗಳಿಗೆ ಸುಮಾರು 9,000 ಕೋ. ರೂ. ವಂಚಿಸಿ ಪಲಾಯನ ಮಾಡಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಲಂಡನ್‌ ಹೈಕೋರ್ಟ್‌ ಕಾನೂನಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ದೇಶಭ್ರಷ್ಟನಾಗಿರುವ ಆರೋಪಿ ಎಂದು ಘೋಷಿಸಿರುವುದು ಮಲ್ಯ ವಿರುದ್ಧ ಬ್ಯಾಂಕ್‌ಗಳು ನಡೆಸಿದ ನ್ಯಾಯಾಂಗ ಹೋರಾಟಕ್ಕೆ ಸಿಕ್ಕಿರುವ ದೊಡ್ಡ ಗೆಲುವು. ಈ ತೀರ್ಪಿನಿಂದಾಗಿ ಮಲ್ಯರನ್ನು ವಾಪಸು ಕರೆತರಲು ಸರಕಾರ ನಡೆಸುತ್ತಿರುವ ಪ್ರಯತ್ನ ಫ‌ಲ ನೀಡುವುದು ಖಾತ್ರಿಯಾಗಿದೆ. ಕೋಟಿಗಟ್ಟಲೆ ಹಣ ವಂಚಿಸಿ ರಾತೋರಾತ್ರಿ ದೇಶಬಿಟ್ಟು ಹೋಗಿದ್ದ ಮಲ್ಯ ಅನಂತರ ಭಾರತದ ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವ ದಾಷ್ಟ್ಯ ತೋರಿಸಿದ್ದರು. ಲಂಡನ್‌ನಲ್ಲಿರುವ ಸಂಪತ್ತಿನಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಅವರು ಎಂದೆಂದಿಗೂ ತಾನು ಕಾನೂನಿನ ಬಲೆಯೊಳಗೆ ಬೀಳುವುದಿಲ್ಲ ಎಂದು ಭಾವಿಸಿರಬಹುದು. ಆದರೆ ಕಾನೂನಿನ ಕೈಗಳು ದೀರ್ಘ‌ವೂ ಬಲಿಷ್ಠವೂ ಆಗಿದೆ ಎನ್ನುವುದು ಈ ತೀರ್ಪಿನಿಂದ ಸ್ಪಷ್ಟವಾಗಿದೆ.

Advertisement

ಬೆಂಗಳೂರಿನ ಸಾಲ ವಸೂಲಿ ನ್ಯಾಯಮಂಡಳಿ ಕಳೆದ ವರ್ಷ ಮಲ್ಯ ಬ್ಯಾಂಕುಗಳಿಗೆ ವಂಚಿಸಿರುವ ಸುಮಾರು 6000 ಕೋ. ರೂ. ಮತ್ತು ಅದರ ಬಡ್ಡಿ ಸೇರಿ ಸುಮಾರು 9,000 ಕೋ. ರೂ.ವಸೂಲು ಮಾಡಬೇಕೆಂದು ಹೇಳಿತ್ತು. ಆದರೆ ಈ ತೀರ್ಪಿಗೆ ಯಾವುದೇ ಬೆಲೆ ನೀಡದ ಮಲ್ಯ ತಾಂತ್ರಿಕ ಕಾರಣಗಳ ನೆಪ ನೀಡುತ್ತಾ ಲಂಡನ್‌ನ ನಿವಾಸಿಯಾಗಿರುವ ತನಗೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ವಾದಿಸಿದ್ದರು. ಗಡೀಪಾರು ವಿಚಾರಣೆಯಲ್ಲೂ ಮಲ್ಯ ಇದೇ ರೀತಿ ಮೊಂಡಾಟಗಳನ್ನು ಮಾಡುತ್ತಿದ್ದಾರೆ.

ಆದರೆ ಈಗಿನ ತೀರ್ಪು ಮಲ್ಯರ ಆಟಗಳಿಗೆ ಕೊನೆ ಹಾಡಿದೆ. ಉದ್ಯಮ ಅಭಿವೃದ್ಧಿಪಡಿಸುವ ನೆಪದಲ್ಲಿ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಎತ್ತಿ ಮೋಜಿನ ಜೀವನ ನಡೆಸುವುದು ಕೆಲವು ಉದ್ಯಮಿಗಳ ಖಯಾಲಿ. ಮಲ್ಯ ಪ್ರಕರಣದ ಬಳಿಕ, ನೀರವ್‌ ಮೋದಿ ಪ್ರಕರಣ ಭಾರೀ ಸುದ್ದಿ ಮಾಡಿತ್ತು. ಮಲ್ಯರಂತೆ ಮೋದಿ ಕೂಡಾ ರಾತೋರಾತ್ರಿ ಪಲಾಯನ ಮಾಡಿದ್ದಾರೆ. ಐಪಿಎಲ್‌ ಕ್ರಿಕೆಟ್‌ನ ರೂವಾರಿ ಲಲಿತ್‌ ಮೋದಿ ಕೂಡಾ ಕೋಟಿಗಟ್ಟಲೆ ವಂಚಿಸಿ ಪಲಾಯನ ಮಾಡಿದ್ದಾರೆ. ಅವರನ್ನು ವಾಪಸು ಕರೆತಂದು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಇನ್ನೂ ಸಫ‌ಲವಾಗಿಲ್ಲ. ಇಂತಹ ಆರೋಪಿಗಳನ್ನು ಗಡೀಪಾರು ಮಾಡಿಸಿಕೊಳ್ಳುವುದು ಬಹಳ ಕಷ್ಟದ ಮತ್ತು ದೀರ್ಘ‌ ಪ್ರಕ್ರಿಯೆ. ಇದಕ್ಕಾಗಿ ಆರೋಪಿಗಳ ಪ್ರಯಾಣ ದಾಖಲೆಗಳು ನಕಲಿ ಎಂದು ಆಯಾಯ ದೇಶಗಳ ಕೋರ್ಟಿನಲ್ಲಿ ಸಾಬೀತುಪಡಿಸಬೇಕಾಗುತ್ತದೆ. ಆದರೆ ಆರೋಪಿಗಳನ್ನು ಹಸ್ತಾಂತರ ಮಾಡಿಕೊಳ್ಳುವುದು ಇದಕ್ಕಿಂತ ತುಸು ಸುಲಭದ ಪ್ರಕ್ರಿಯೆ.

ಇದೀಗ ಸರಕಾರ ಇಂಗ್ಲಂಡ್‌ ಜತೆಗಿರುವ ಹಸ್ತಾಂತರ ಒಪ್ಪಂದವನ್ನು ಬಳಸಿಕೊಂಡು ಮಲ್ಯರನ್ನು ಕರೆತಂದು ಕಟೆಕಟೆಯಲ್ಲಿ ನಿಲ್ಲಿಸುವ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಬೇಕು. ಕಾನೂನಿನ ಉರುಳಿನಿಂದ ಪಾರಾಗುವ ಸಲುವಾಗಿ ಮಲ್ಯ ತಾನು ಭಾರತೀಯ ಪ್ರಜೆಯೇ ಅಲ್ಲ ಎಂದು ವಾದಿಸಿದ್ದರು. 1992ರಿಂದಲೇ ಇಂಗ್ಲಂಡ್‌ನ‌ಲ್ಲಿ ವಾಸವಾಗಿದ್ದೇನೆ. ಹೀಗಾಗಿ ತನ್ನನ್ನು ಭಾರತಕ್ಕೆ ಗಡೀಪಾರುಗೊಳಿಸುವಂತಿಲ್ಲ ಎನ್ನುವುದು ಅವರ ವಾದ. 

ತನ್ನ ವಂಚನೆಯನ್ನು ಸಮರ್ಥಿಸಿಕೊಳ್ಳಲು ತಾಯ್ನಾಡನ್ನೇ ಅಲ್ಲ ಎನ್ನುವ ಅವರ ವಾದವನ್ನು ಲಂಡನ್‌ ನ್ಯಾಯಾಲಯ ತಿರಸ್ಕರಿಸಿದೆ. ಪಾಸ್‌ಪೋರ್ಟ್‌ ಪ್ರಕಾರ ಮಲ್ಯ ಇಂಗ್ಲಂಡ್‌ ನಿವಾಸಿಯಾಗಿದ್ದರೂ ಅವರ ಔದ್ಯೋಗಿಕ ಸಂಸ್ಥಾಪನೆಗಳು, ವ್ಯವಹಾರಗಳು ಇದ್ದದ್ದು ಭಾರತದಲ್ಲಿ. ಉದ್ಯಮ ಮತ್ತು ರಾಜಕೀಯ ಕಾರಣಗಳಿಗಾಗಿ ಇಂಗ್ಲಂಡ್‌ ಮತ್ತು ಭಾರತದ ನಡುವೆ ಅವರು ಪದೇ ಪದೇ ಓಡಾಡುತ್ತಿದ್ದರು ಎನ್ನುವ ಅಂಶವನ್ನು ಪರಿಗಣಿಸಿರುವ ನ್ಯಾಯಾಲಯ ಭಾರತದಲ್ಲಿ ವಿಚಾರಣೆಗೊಳಪಡಲು ಅಡ್ಡಿ ಇಲ್ಲ ಎಂದಿರುವುದು ತೀರ್ಪಿನ ಪ್ರಮುಖ ಅಂಶ. ಇದರಿಂದಾಗಿ ಲಂಡನ್‌ ನಲ್ಲಿರುವ ಮಲ್ಯರ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿ ಸಾಲದ ಮೊತ್ತವನ್ನು ವಸೂಲು ಮಾಡುವ ಅವಕಾಶ ಬ್ಯಾಂಕುಗಳಿಗೆ ಇದೆ. ಒಂದು ವೇಳೆ ನ್ಯಾಯಾಲಯ ಮಲ್ಯ ವಾದವನ್ನು ಮನ್ನಿಸಿದ್ದರೆ ಉಳಿದ ಆರೋಪಿಗಳೂ ಇದೇ ತಂತ್ರವನ್ನು ಅನುಸರಿಸುವ ಸಾಧ್ಯತೆಯಿತ್ತು.
ಇದೀಗ ನೀರವ್‌ ಮೋದಿ, ಲಲಿತ್‌ ಮೋದಿಯಂತಹ ಇತರ ವಂಚಕರ ವಿರುದ್ಧವೂ ಇದೇ ಮಾದರಿಯ ಕಠಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಸಕಾಲ.ಈ ತೀರ್ಪು ಬ್ಯಾಂಕುಗಳಿಗೆ ವಂಚಿಸಿ ವಿದೇಶದಲ್ಲಿ ಐಷಾರಾಮದ ಜೀವನ ನಡೆಸಬಹುದು ಎಂದು ಭಾವಿಸಿರುವ ದೊಡ್ಡ ಕುಳಗಳಿಗೆ ತಕ್ಕ
ಪಾಠವಾಗಿದೆ. ತೀರ್ಪು ಅವರ ಪಾಲಿಗೆ ಒಂದು ಎಚ್ಚರಿಕೆಯಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next