Advertisement

Editorial: ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

11:54 AM May 04, 2024 | Team Udayavani |

ದೇಶದ ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ಮಣಿಪುರದಲ್ಲಿ ಮೀಸಲಾತಿ ವಿಷಯವಾಗಿ ಎರಡು ಸಮುದಾಯಗಳ ನಡುವೆ ಭುಗಿಲೆದ್ದ ವಿವಾದ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಪಾಲಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದುದು ಈಗ ಹಳೆಯ ಸಂಗತಿ. ಸಂಘರ್ಷ ಆರಂಭವಾಗಿ ಶುಕ್ರವಾರಕ್ಕೆ ಒಂದು ವರ್ಷ ಸಂದಿದೆ. ಇಂದಿಗೂ ಮಣಿಪುರದಲ್ಲಿ ಸಂಪೂರ್ಣವಾಗಿ ಶಾಂತಿ ಮರುಕಳಿಸಿಲ್ಲ. ಆರಂಭದ ತಿಂಗಳುಗಳಿಗೆ ಹೋಲಿಸಿದಲ್ಲಿ ಹಿಂಸಾಚಾರ, ಘರ್ಷಣೆ ಬಹುತೇಕ ಕಡಿಮೆಯಾಗಿದೆ ಯಾದರೂ ರಾಜ್ಯದ ಒಂದಲ್ಲ ಒಂದು ಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಹಿಂಸೆ
ಭುಗಿಲೇಳುತ್ತಿರುವುದರಿಂದಾಗಿ ಜನರು ಭಯದಿಂದಲೇ ದಿನದೂಡು ತ್ತಿದ್ದಾರೆ.

Advertisement

ಮಣಿಪುರದಲ್ಲಿ ಶೇ. 54ರಷ್ಟಿರುವ ಮೈತೇಯಿ ಜನಾಂಗದವರು ಜನವಸತಿ ಪ್ರದೇಶ ವಾದ ಇಂಫಾಲ ಕಣಿವೆಯಲ್ಲಿ ವಾಸವಾಗಿದ್ದಾರೆ. ಇನ್ನು ಬುಡಕಟ್ಟು ಸಮು ದಾಯಗಳಾದ ನಾಗಾ ಮತ್ತು ಕುಕಿ ಸಮುದಾಯದವರು ಇಂದಿಗೂ ಪರ್ವತ ಪ್ರದೇಶದಲ್ಲಿ ವಾಸವಾಗಿದ್ದಾರೆ. ಆದರೆ ಮಣಿಪುರದಲ್ಲಿ ವಲಸಿಗರ ಸಂಖ್ಯೆ ಹೆಚ್ಚು ತ್ತಲೇ ಇದ್ದು ಇವರೆಲ್ಲ ಪರ್ವತ ಪ್ರದೇಶದಲ್ಲಿ ಠಿಕಾಣಿ ಹೂಡಿ ಮೀಸಲಾತಿ ಸೌಲಭ್ಯ ವನ್ನು ಪಡೆಯುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ ಎಂಬುದು ಮೈತೇಯಿ ಸಮುದಾಯದವರ ಅಳಲು.

ತಮ್ಮ ಸಮುದಾಯಕ್ಕೆ ಎಸ್‌ಟಿ ಮೀಸ ಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ನಾಗಾ ಮತ್ತು ಕುಕಿ ಸಮುದಾಯದವರು ಕಳೆದ ವರ್ಷದ ಮೇ ಆರಂಭದಲ್ಲಿ ಪ್ರತಿಭಟನೆ ಆರಂಭಿಸಿ ವ್ಯಾಪಕ ಹಿಂಸಾಚಾರದಲ್ಲಿ ತೊಡಗಿಕೊಂಡರು. ಎರಡು ಸಮುದಾಯಗಳ ನಡುವಣ ಸಂಘರ್ಷದ ಲಾಭ ಪಡೆಯಲು ಮುಂದಾದ ನಿಷೇಧಿತ ಬುಡಕಟ್ಟು ಉಗ್ರ ಸಂಘಟನೆಗಳು ಹೊತ್ತಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಲೇ ಬಂದವು.

ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರ, ರಾಜ್ಯ ಸರಕಾರ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ಹಿಂಸಾ ಗ್ರಸ್ತ ಪ್ರದೇಶಗಳಲ್ಲಿ ನಿಯೋಜಿಸಿ, ಹಿಂಸೆಕೋರರನ್ನು ಸದೆಬಡಿಯುತ್ತಲೇ ಬಂದಿವೆ. ಕಳೆದೊಂದು ವರ್ಷದ ಅವಧಿಯಲ್ಲಿ ಈ ಜನಾಂಗೀಯ ಸಂಘರ್ಷದಲ್ಲಿ 200 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದರೆ, ಸಹಸ್ರಾರು ಮಂದಿ ನಿರ್ವಸಿತರಾಗಿ ಪರಿಹಾರ ಕೇಂದ್ರಗಳಲ್ಲಿ ದಿನದೂಡುವಂತಾಗಿದೆ.

ಕೋಟ್ಯಂತರ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. ಇನ್ನು ಇಲ್ಲಿನ ಜನರ ಗೋಳಂತೂ ಹೇಳತೀರದು. ಎರಡು ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸ ಇನ್ನೂ ಮೂಡದಿರುವ ಹಿನ್ನೆಲೆಯಲ್ಲಿ ಅಂತರ್‌ ಜಾತಿ ವಿವಾಹವಾದ ದಂಪತಿಗಳು ಪತಿ-ಪತ್ನಿಯರ ಮುಖ ನೋಡಲು ಹೆದರುತ್ತಿದ್ದಾರೆ. ವರ್ಷದ ಹಿಂದೆ ಅನ್ಯೋನ್ಯವಾಗಿ ಬಾಳುತ್ತಿದ್ದ ಕುಕಿ ಮತ್ತು ಮೈತೇಯಿ ಸಮುದಾಯಗಳ ಜನರು ಈಗ ಪರಸ್ಪರ ದ್ವೇಷದ ಕಿಡಿ ಕಾರುತ್ತಿದ್ದಾರೆ. ಈ ಎರಡೂ ಸಮುದಾಯಗಳಲ್ಲಿ ಶಾಂತಿಪ್ರಿಯ ಜನರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಆದರೆ ರಾಜ್ಯದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಅವರೆಲ್ಲರೂ ತಮ್ಮ ಕಣ್ಣ ಮುಂದೆ ನಡೆಯುತ್ತಿರುವ ಹಿಂಸಾಚಾರಗಳಿಗೆ ಮೂಕಪ್ರೇಕ್ಷಕರಾಗಿದ್ದಾರೆ.

Advertisement

ಸದ್ಯ ರಾಜ್ಯ ದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದರೂ ಈ ಎರಡು ಸಮುದಾಯಗಳ ಜನರಲ್ಲಿ ಮನೆಮಾಡಿರುವ ಭೀತಿ ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ಈ ಕಾರಣ ಕ್ಕಾಗಿಯೇ ಶುಕ್ರವಾರದಂದು ರಾಜ್ಯದ ವಿವಿಧೆಡೆ ಕುಕಿ ಮತ್ತು ಮೈತೇಯಿ ಸಮುದಾಯದ ಜನರನ್ನು ಒಂದೆಡೆ ಸೇರಿಸಿ, ಅವರಲ್ಲಿ ಧೈರ್ಯ ತುಂಬುವ ಕಾರ್ಯಕ್ರಮಗಳನ್ನು ನಾಗರಿಕ ಸಂಘಟನೆಗಳು ಆಯೋಜಿಸಿದ್ದವು. ಎರಡು ಸಮುದಾಯಗಳ ನಡುವೆ ಈಗ ನಿರ್ಮಾಣವಾಗಿರುವ ಆಳವಾದ ಕಂದಕವನ್ನು ಮುಚ್ಚಿ, ಒಡೆದ ಮನಸುಗಳನ್ನು ಬೆಸೆಯುವ ಕಾರ್ಯ ತ್ವರಿತಗತಿ ಯಲ್ಲಿ ನಡೆಯಬೇಕಿದೆ. ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕು. ಜನರು ಶಾಂತಿಯುತ ಜೀವನ ನಡೆಸಲು ಪೂರಕವಾದ ಮತ್ತು ಭಯರಹಿತ ವಾತಾವರಣ ನಿರ್ಮಾಣವಾದಲ್ಲಿ ಮಾತ್ರವೇ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next