ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಕೂಟದಲ್ಲಿ ಕರ್ನಾಟಕ ತಂಡವು ತನ್ನ ಅಜೇಯ ಓಟ ಮುಂದುವರಿಸಿದೆ. ಅರುಣಾಚಲ ಪ್ರದೇಶ ವಿರುದ್ದ ಶನಿವಾರ (ಡಿ.28) ನಡೆದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆ 10 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅರುಣಾಚಲ ತಂಡವು 43.2 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟಾಯಿತು. ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಕೇವಲ 14.2 ಓವರ್ ಗಳಲ್ಲಿ 171 ರನ್ ಗಳಿಸಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಅರುಣಾಚಲ ಪ್ರದೇಶ ತಂಡವು ಸತತ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಅಭಿನವ್ ಸಿಂಗ್ ಅವರು ಅರ್ಧಶತಕ ಬಾರಿಸಿದರು. ಅಭಿನವ್ ಅವರು 71 ರನ್ ಮಾಡಿದರು. ಉಳಿದಂತೆ ಹಾರ್ದಿಕ್ ವರ್ಮಾ 38 ರನ್, ರಾಜೆಂದರ್ ಸಿಂಗ್ 30 ರನ್ ಗಳಿಸಿದರು. ಕರ್ನಾಟಕ ಪರ ವಿ ಕೌಶಿಕ್ ಮತ್ತು ಹಾರ್ದಿಕ್ ರಾಜ್ ನಾಲ್ಕು ವಿಕೆಟ್ ಪಡೆದರು. ಶ್ರೇಯಸ್ ಗೋಪಾಲ್ ಮತ್ತು ಮಯಾಂಕ್ ಅಗರ್ವಾಲ್ ತಲಾ ಒಂದು ವಿಕೆಟ್ ಪಡೆದರು.
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ಮಯಾಂಕ್ ಅಗರ್ವಾಲ್ ಮತ್ತೊಂದು ಶತಕ ಸಿಡಿಸಿದರು. 45 ಎಸೆತಗಳಲ್ಲಿ ತಲಾ ಏಳು ಸಿಕ್ಸರ್ ಮತ್ತು ಬೌಂಡರಿಯೊಂದಿಗೆ ಅಜೇಯ 100 ರನ್ ಬಾರಿಸಿದರು. ಅಭಿನವ್ ಮನೋಹರ್ ಅವರು 41 ಎಸೆತದಲ್ಲಿ 66 ರನ್ ಮಾಡಿದರು.
ಕರ್ನಾಟಕ ತಂಡವು ಮುಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಡಿ.31ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ.