ವಡೋದರ: ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ 5ನೇ ಬಾರಿ ಫೈನಲ್‌ಗೇರಲು ಎದುರು ನೋಡುತ್ತಿರುವ ಕರ್ನಾಟಕ, ಬುಧವಾರದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರಿಯಾಣದ ಸವಾಲು ಸ್ವೀಕರಿಸಲಿದೆ. ಕರ್ನಾಟಕ ಈಗಾಗಲೇ 4 ಬಾರಿ ಚಾಂಪಿಯನ್ ಆಗಿದ್ದು, ಹರಿಯಾಣ ಕಳೆದ ಬಾರಿ ಮೊದಲ ಪ್ರಶಸ್ತಿ ಗೆಲುವಿನ ಖುಷಿಯನ್ನು ಅನುಭವಿಸಿತ್ತು.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ, ಆತಿಥೇಯ ಬರೋಡಾ ವಿರುದ್ಧ 5 ರನ್‌ಗಳ ರೋಜಕ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಶತಕ (102) ಸಿಡಿಸಿ ಮಿಂಚಿದ್ದರು. ಹರಿಯಾಣ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತನ್ನು 2 ವಿಕೆಟ್‌ಗಳಿಂದ ಮಣಿಸಿತ್ತು.
ಈ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮಾಯಾಂಕ್ ಅಗರ್ವಾಲ್ ಗರಿಷ್ಠ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿದರ್ಭದ ಕರುಣ್ ನಾಯರ್ 664 ರನ್, ಮಾಯಾಂಕ್ 619 ರನ್ ಕಲೆಹಾಕಿದ್ದಾರೆ.
ಕರ್ನಾಟಕ ಸಮತೋಲಿತ ತಂಡ
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ರಾಜ್ಯ ತಂಡ ಸಮತೋಲನ ಹೊಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಅಗರ್ವಾಲ್, ಪಡಿಕ್ಕಲ್, ಸ್ಮರಣ್, ಅನೀಶ್, ಶ್ರೀಜಿತ್; ಬೌಲಿಂಗ್‌ನಲ್ಲಿ ಶ್ರೇಯಸ್ ಗೋಪಾಲ್, ವಿ. ಕೌಶಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣ ಆಗಮನದಿಂದ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಿದೆ.
ಕರ್ನಾಟಕ ಈವರೆಗೆ 4 ಬಾರಿ ಫೈನಲ್ ಪ್ರವೇಶಿಸಿದ್ದು, ನಾಲ್ಕೂ ಸಲ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದೆ.
ಹರಿಯಾಣ ಕೂಡ ಬಲಿಷ್ಠ ತಂಡ. ನಾಯಕ ಅಂಕಿತ್ ಕುಮಾರ್, ಹಿಮಾಂಶು ರಾಣಾ ಮತ್ತು ನಿಶಾಂತ್ ಸಿಂಧು ಬ್ಯಾಟಿಂಗ್ ಬಲವಾಗಿ ನಿಂತರೆ, ಅಂಶುಲ್ ಕಾಂಬೋಜ್, ಅಮಿತ್ ರಾಣಾ ಬೌಲಿಂಗ್ ಹೀರೋಗಳಾಗಿದ್ದಾರೆ.