Advertisement

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌-2021: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಕರ್ನಾಟಕ

11:19 PM Dec 19, 2021 | Team Udayavani |

ಜೈಪುರ: ವಿಜಯ್‌ ಹಜಾರೆ ಟ್ರೋಫಿ ಏಕ ದಿನ ಸರಣಿಯ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನವನ್ನು 8 ವಿಕೆಟ್‌ಗಳಿಂದ ಸುಲ ಭದಲ್ಲಿ ಮಣಿಸಿದ ಕರ್ನಾಟಕ ಕ್ವಾ.ಫೈನಲ್‌ ಸುತ್ತು ಪ್ರವೇಶಿಸಿದೆ. ಇಲ್ಲಿ ಮತ್ತೆ ಬದ್ಧ ಎದುರಾಳಿ ತಮಿಳು ನಾಡು ತಂಡವನ್ನು ಎದುರಿಸುವ ಒತ್ತಡಕ್ಕೆ ಸಿಲುಕಿದೆ.

Advertisement

ರವಿವಾರ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ, ದೀಪಕ್‌ ಹೂಡಾ ಅವರ ಅಮೋಘ ಶತಕದ ಹೊರತಾಗಿಯೂ 41.4 ಓವರ್‌ಗಳಲ್ಲಿ 199ಕ್ಕೆ ಆಲೌಟ್‌ ಆಯಿತು. ಕರ್ನಾಟಕ 43.4 ಓವರ್‌ಗಳಲ್ಲಿ 2 ವಿಕೆಟಿಗೆ 204 ರನ್‌ ಬಾರಿಸಿತು.

ದೇವದತ್ತ ಪಡಿಕ್ಕಲ್‌, ಕೆ. ಗೌತಮ್‌ ಮತ್ತು ಪ್ರಸಿದ್ಧ್ ಕೃಷ್ಣ ಅವರ ಸೇರ್ಪಡೆಯಿಂದ ಕರ್ನಾಟಕ ತಂಡ ಹೆಚ್ಚು ಬಲಿಷ್ಠವಾಗಿ ಗೋಚರಿಸಿತ್ತು. ಇವರಲ್ಲಿ ಪಡಿಕ್ಕಲ್‌ ನಾಲ್ಕೇ ರನ್‌ ಮಾಡಿ ನಿರ್ಗಮಿಸಿದರು. ಪ್ರಸಿದ್ಧ್ ಕೃಷ್ಣ 8 ಓವರ್‌ಗಳಲ್ಲಿ ಮೂರನ್ನು ಮೇಡನ್‌ ಮಾಡಿ 17 ರನ್‌ ವೆಚ್ಚದಲ್ಲಿ ಒಂದು ವಿಕೆಟ್‌ ಕೆಡವಿದರು. ಕೆ. ಗೌತಮ್‌ ಬಹಳ ದುಬಾರಿಯಾದರು (61ಕ್ಕೆ 2).

ಮೂವರ ಅರ್ಧ ಶತಕ
ಚೇಸಿಂಗ್‌ ವೇಳೆ ಮಿಂಚಿದವರೆಂದರೆ ಆರಂಭಕಾರ ಆರ್‌. ಸಮರ್ಥ್ (54), ಕೆ. ಸಿದ್ಧಾರ್ಥ್ (ಅಜೇಯ 85) ಮತ್ತು ನಾಯಕ ಮನೀಷ್‌ ಪಾಂಡೆ (ಅಜೇಯ 52). ಮೂವರಿಂದಲೂ ಅರ್ಧ ಶತಕ ದಾಖಲಾಯಿತು. ಸಮರ್ಥ್-ಸಿದ್ಧಾರ್ಥ್ ದ್ವಿತೀಯ ವಿಕೆಟಿಗೆ 75 ರನ್‌ ಒಟ್ಟುಗೂಡಿಸಿದರೆ, ಸಿದ್ಧಾರ್ಥ್-

ಪಾಂಡೆ ಮುರಿಯದ 3ನೇ ವಿಕೆಟಿಗೆ 104 ರನ್‌ ಪೇರಿಸಿದರು. ತಂಡದ ಸ್ಟಾರ್‌ ಬೌಲರ್‌ಗಳಾದ ಖಲೀಲ್‌ ಅಹ್ಮದ್‌, ಕಮಲೇಶ್‌ ನಾಗರಕೋಟಿ, ರವಿ ಬಿಷ್ಣೋಯಿ ನಿರೀಕ್ಷಿತ ಪರಿಣಾಮ ಬೀರಲು ವಿಫಲರಾದರು.

Advertisement

ರಾಜಸ್ಥಾನ ವಿ. ವೈಶಾಖ್‌ ಬೌಲಿಂಗ್‌ ದಾಳಿಗೆ ತತ್ತರಿಸಿತು. ಪ್ರಸಿದ್ಧ್ ಕೃಷ್ಣ ಕುಸಿತಕ್ಕೆ ಚಾಲನೆ ನೀಡಿದ ಬಳಿಕ ವೈಶಾಖ್‌ ಘಾತಕವಾಗಿ ಎರಗಿದರು; 22 ರನ್ನಿತ್ತು 4 ವಿಕೆಟ್‌ ಕೆಡವಿದರು.

ಆದರೆ ಒಂದು ತುದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು ನಿಂತಿದ್ದ ದೀಪಕ್‌ ಹೂಡಾ ಮಾತ್ರ ಕಪ್ತಾನನ ಆಟವನ್ನು ಆಡುತ್ತ ಹೋದರು. ಅತ್ಯಂತ ಕಠಿನ ಸನ್ನಿವೇಶದಲ್ಲೂ ಜವಾಬ್ದಾರಿಯುತವಾಗಿ ಆಡಿ ಎಸೆತಕ್ಕೊಂದರಂತೆ 109 ರನ್‌ ಬಾರಿಸಿದರು. ಈ ಆಕ್ರಮಣಕಾರಿ ಆಟದ ವೇಳೆ 5 ಸಿಕ್ಸರ್‌ ಹಾಗೂ 8 ಬೌಂಡರಿ ಸಿಡಿಯಿತು.

ಹೂಡಾ ಅವರನ್ನು ಹೊರತುಪಡಿಸಿದರೆ 33 ರನ್‌ಧ ಮಾಡಿದ ಸಮರ್ಪಿತ್‌ ಅವರದೇ ಹೆಚ್ಚಿನ ಗಳಿಕೆ.

ಇದನ್ನೂ ಓದಿ:ಪಿಂಕ್‌ಬಾಲ್‌ ಟೆಸ್ಟ್‌: ಮಂಕಾದ ಇಂಗ್ಲೆಂಡ್‌; ಅಜೇಯ ದಾಖಲೆಯತ್ತ ಆಸೀಸ್‌

ಯುಪಿ, ವಿದರ್ಭ ವಿಜಯ
ಉಳಿದೆರಡು ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಉತ್ತರಪ್ರದೇಶ ಮತ್ತು ವಿದರ್ಭ ತಂಡಗಳು ಜಯ ಸಾಧಿಸಿದವು. ಉತ್ತರಪ್ರದೇಶ ತಂಡ ಮಧ್ಯಪ್ರದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದರೆ, ವಿದರ್ಭ 34 ರನ್ನುಗಳಿಂದ ತ್ರಿಪುರವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ-41.4 ಓವರ್‌ಗಳಲ್ಲಿ 199 (ಹೂಡಾ 109, ಜೋಶಿ 33, ವೈಶಾಖ್‌ 22ಕ್ಕೆ 4, ಗೌತಮ್‌ 61ಕ್ಕೆ 2). ಕರ್ನಾಟಕ-43.4 ಓವರ್‌ಗಳಲ್ಲಿ 2 ವಿಕೆಟಿಗೆ 204 (ಸಿದ್ಧಾರ್ಥ್ ಔಟಾಗದೆ 85, ಸಮರ್ಥ್ 54, ಪಾಂಡೆ ಔಟಾಗದೆ 52, ನಾಗರಕೋಟಿ 27ಕ್ಕೆ 1).

 

Advertisement

Udayavani is now on Telegram. Click here to join our channel and stay updated with the latest news.

Next