Advertisement

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌-2021: ತಮಿಳುನಾಡು-ಹಿಮಾಚಲ ನಡುವೆ ಫೈನಲ್‌

11:39 PM Dec 24, 2021 | Team Udayavani |

ಜೈಪುರ: ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ತಂಡಗಳು “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಫೈನಲ್‌ನಲ್ಲಿ ಸೆಣಸಲಿವೆ.

Advertisement

ಶುಕ್ರವಾರದ ಸೆಮಿಫೈನಲ್‌ ಮುಖಾಮುಖೀಯಲ್ಲಿ ಈ ತಂಡಗಳು ಕ್ರಮವಾಗಿ ಸೌರಾಷ್ಟ್ರ ಮತ್ತು ಸರ್ವೀಸಸ್‌ ತಂಡಗಳನ್ನು ಮಣಿಸಿದವು. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ.

ಇವುಗಳಲ್ಲಿ ತಮಿಳುನಾಡು-ಸೌರಾಷ್ಟ್ರ ನಡುವಿನ ಮುಖಾಮುಖೀ ಅತ್ಯಂತ ರೋಚಕವಾಗಿತ್ತು. ದೊಡ್ಡ ಮೊತ್ತದ ಈ ಪಂದ್ಯದಲ್ಲಿ ತಮಿಳುನಾಡು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ 2 ವಿಕೆಟ್‌ಗಳ ಗೆಲುವು ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಹಿಮಾಚಲ ಪ್ರದೇಶ 77 ರನ್ನುಗಳಿಂದ ಸರ್ವೀಸಸ್‌ಗೆ ಸೋಲುಣಿಸಿತು.

ತಮಿಳುನಾಡು-ಸೌರಾಷ್ಟ್ರ ನಡುವಿನ ಪಂದ್ಯ 2 ಶತಕ, 4 ಅರ್ಧ ಶತಕಗಳಿಗೆ ಸಾಕ್ಷಿಯಾಯಿತು. ಸೌರಾಷ್ಟ್ರ 8 ವಿಕೆಟಿಗೆ 310 ರನ್‌ ಪೇರಿಸಿದರೆ, ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ತಮಿಳುನಾಡು 8 ವಿಕೆಟಿಗೆ 314 ರನ್‌ ಬಾರಿಸಿತು. ಸಾಯಿ ಕಿಶೋರ್‌ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡದ ಗೆಲುವನ್ನು ಸಾರಿದರು. ಈ ಎಸೆತದಲ್ಲಿ ತಮಿಳುನಾಡು ಜಯಕ್ಕೆ ಕೇವಲ ಒಂದು ರನ್‌ ಅಗತ್ಯವಿತ್ತು.

ಇದನ್ನೂ ಓದಿ:ಐಪಿಎಲ್‌ ಮಾಲಕರ ಜತೆ ಬಿಸಿಸಿಐ ಸಭೆ

Advertisement

ಸೌರಾಷ್ಟ್ರ ಪರ ಶೆಲ್ಡನ್‌ ಜಾಕ್ಸನ್‌ ಆಕ್ರಮಣಕಾರಿ ಆಟದ ಮೂಲಕ 134 ರನ್‌ ಸಿಡಿಸಿದರು (125 ಎಸೆತ, 11 ಬೌಂಡರಿ, 4 ಸಿಕ್ಸರ್‌). ಅರ್ಪಿತ್‌ ವಸವಾಡ 57, ವಿಶ್ವರಾಜ್‌ ಜಡೇಜ 52 ರನ್‌ ಕೊಡುಗೆ ಸಲ್ಲಿಸಿದರು.

ಚೇಸಿಂಗ್‌ ವೇಳೆ ತಮಿಳುನಾಡು 23 ರನ್‌ ಆಗುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿತು. ಆದರೆ ಆರಂಭಕಾರ ಬಾಬಾ ಅಪರಾಜಿತ್‌ 123 (124 ಎಸೆತ, 12 ಬೌಂಡರಿ, 3 ಸಿಕ್ಸರ್‌), ಬಾಬಾ ಇಂದ್ರಜಿತ್‌ (50), ವಾಷಿಂಗ್ಟನ್‌ ಸುಂದರ್‌ (70) ಅಮೋಘ ಹೋರಾಟ ಪ್ರದರ್ಶಿಸಿದರು. ಅಪಾಯಕಾರಿ ಶಾರೂಖ್‌ ಖಾನ್‌ ಕೇವಲ 17 ರನ್ನಿಗೆ ಔಟಾದಾಗ ಸೌರಾಷ್ಟ್ರಕ್ಕೆ ಮೇಲುಗೈ ಅವಕಾಶವಿತ್ತು.

ಹಿಮಾಚಲಕ್ಕೆ ಮೊದಲ ಫೈನಲ್‌
ಸರ್ವೀಸಸ್‌ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದ ಹಿಮಾಚಲ ಪ್ರದೇಶ 6 ವಿಕೆಟಿಗೆ 281 ರನ್‌ ಗಳಿಸಿತು. ಜವಾಬಿತ್ತ ಸರ್ವೀಸಸ್‌ 46.1 ಓವರ್‌ಗಳಲ್ಲಿ 204ಕ್ಕೆ ಆಲೌಟ್‌ ಆಯಿತು. ಇದು ಹಿಮಾಚಲಕ್ಕೆ ಮೊದಲ ಫೈನಲ್‌ ಆಗಿದೆ.
ಪ್ರಶಾಂತ್‌ ಚೋಪ್ರಾ 78, ನಾಯಕ ರಿಷಿ ಧವನ್‌ 84 ರನ್‌ ಬಾರಿಸಿ ಹಿಮಾಚಲದ ದೊಡ್ಡ ಮೊತ್ತಕ್ಕೆ ಕಾರಣರಾದರು. ಬೌಲಿಂಗ್‌ನಲ್ಲೂ ಮಿಂಚಿದ ಧವನ್‌ 27 ರನ್ನಿಗೆ 4 ವಿಕೆಟ್‌ ಕೆಡವಿ ಗೆಲುವಿನ ರೂವಾರಿ ಎನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next