Advertisement

ವಿಜಯ್‌ ಹಜಾರೆ ಟ್ರೋಫಿ-2021: ಕರ್ನಾಟಕ ವಿರುದ್ಧ ಮುಗ್ಗರಿಸಿದ ಮುಂಬಯಿ

11:14 PM Dec 11, 2021 | Team Udayavani |

ತಿರುವನಂತಪುರ: ತಮಿಳುನಾಡು ವಿರುದ್ಧ ಹೀನಾಯವಾಗಿ ಸೋತಿದ್ದ ಕರ್ನಾಟಕ ಶನಿವಾರದ ಪಂದ್ಯದಲ್ಲಿ ಮುಂಬಯಿಯನ್ನು 7 ವಿಕೆಟ್‌ಗಳಿಂದ ಮಣಿಸಿ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಸರಣಿಯಲ್ಲಿ ಗೆಲುವಿನ ಹಳಿ ಏರಿದೆ.

Advertisement

ತಿರುವನಂತಪುರದಲ್ಲಿ ನಡೆದ “ಬಿ’ ವಿಭಾಗದ ಪಂದ್ಯ ದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬಯಿ ಉತ್ತಮ ಆರಂಭದ ಹೊರತಾಗಿಯೂ 9 ವಿಕೆಟಿಗೆ 208 ರನ್‌ ಗಳಿಸಲಷ್ಟೇ ಶಕ್ತವಾಯಿತು. ಜವಾಬಿತ್ತ ಕರ್ನಾಟಕ 45.3 ಓವರ್‌ಗಳಲ್ಲಿ 3 ವಿಕೆಟಿಗೆ 211 ರನ್‌ ಬಾರಿಸಿ ತನ್ನ ಎರಡನೇ ಗೆಲುವನ್ನು ದಾಖಲಿಸಿತು. ಮೊದಲ ಪಂದ್ಯದಲ್ಲಿ ಪುದುಚೇರಿಯನ್ನು ಮಣಿಸಿತ್ತು.

ಮುಂಬಯಿಗೆ ಯಶಸ್ವಿ ಜೈಸ್ವಾಲ್‌ (61) ಮತ್ತು ಅರ್ಮಾನ್‌ ಜಾಫ‌ರ್‌ (43) ಉತ್ತಮ ಆರಂಭವನ್ನೇ ಒದಗಿಸಿದ್ದರು. 22.3 ಓವರ್‌ಗಳಲ್ಲಿ 95 ರನ್‌ ಒಟ್ಟುಗೂಡಿಸಿ ಬೃಹತ್‌ ಮೊತ್ತದ ಸೂಚನೆ ನೀಡಿದರು. ಆದರೆ ಜಗದೀಶ್‌ ಸುಚಿತ್‌ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಕರ್ನಾಕಟದ ಬೌಲರ್‌ಗಳ ಕೈ ಮೇಲಾಯಿತು. ಮುಂಬಯಿ ವಿಕೆಟ್‌ಗಳು ಪಟಪಟನೆ ಉದುರತೊಡಗಿದವು.

ಲೆಗ್‌ಸ್ಪಿನ್ನರ್‌ ಪ್ರವೀಣ್‌ ದುಬೆ ಮುಂಬಯಿ ಮಧ್ಯಮ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿದರು. ಸೂರ್ಯಕುಮಾರ್‌ ಯಾದವ್‌ (8), ಶಮ್ಸ್‌ ಮುಲಾನಿ (9), ಶಿವಂ ದುಬೆ (6) ಮತ್ತು ಹಾರ್ದಿಕ್‌ ತಮೋರೆ (46) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ದುಬೆ ಸಾಧನೆ 29ಕ್ಕೆ 4 ವಿಕೆಟ್‌.

ಸಮರ್ಥ್ ಅಜೇಯ 96
ಮುಂಬಯಿಯಂತೆ ಕರ್ನಾಟಕದ ಮೊದಲ ವಿಕೆಟಿಗೂ 95 ರನ್‌ ಒಟ್ಟುಗೂಡಿತು. ರವಿಕುಮಾರ್‌ ಸಮರ್ಥ್ ಮತ್ತು ರೋಹನ್‌ ಕದಂ 26ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಮುಂಬಯಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.
ಸಮರ್ಥ್ ಅಜೇಯರಾಗಿ ಉಳಿದು 96 ರನ್‌ ಬಾರಿಸಿದರೆ (129 ಎಸೆತ, 9 ಬೌಂಡರಿ), ಕದಂ 79 ಎಸೆತ ಎದುರಿಸಿ 44 ರನ್‌ ಮಾಡಿದರು (4 ವಿಕೆಟ್‌). ಕೆ. ಸಿದ್ಧಾರ್ಥ್ 17, ಮನೀಷ್‌ ಪಾಂಡೆ ಕೇವಲ 5 ರನ್‌ ಮಾಡಿ ನಿರ್ಗಮಿಸಿದರು. ಕೊನೆಯಲ್ಲಿ ಸಮರ್ಥ್-ಕರುಣ್‌ ನಾಯರ್‌ ಸೇರಿಕೊಂಡು ತಂಡವನ್ನು ದಡ ಸೇರಿಸಿದರು. ನಾಯರ್‌ ಆಟ ಆಕ್ರಮಣಕಾರಿಯಾಗಿತ್ತು. 34 ಎಸೆತಗಳಿಂದ ಅಜೇಯ 39 ರನ್‌ ಸಿಡಿಸಿದರು (3 ಬೌಂಡರಿ, 2 ಸಿಕ್ಸರ್‌).
ರವಿವಾರದ ಪಂದ್ಯದಲ್ಲಿ ಕರ್ನಾಟಕ ಬರೋಡವನ್ನು ಎದುರಿಸಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-9 ವಿಕೆಟಿಗೆ 208 (ಜೈಸ್ವಾಲ್‌ 61, ತಮೋರೆ 46, ಜಾಫ‌ರ್‌ 43, ಪ್ರವೀಣ್‌ ದುಬೆ 29ಕ್ಕೆ 4). ಕರ್ನಾಟಕ-45.3 ಓವರ್‌ಗಳಲ್ಲಿ 3 ವಿಕೆಟಿಗೆ 211 (ಸಮರ್ಥ್ ಔಟಾಗದೆ 96, ಕದಂ 44, ನಾಯರ್‌ ಔಟಾಗದೆ 39, ಪ್ರಶಾಂತ್‌ 48ಕ್ಕೆ 2).

ಇದನ್ನೂ ಓದಿ:ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಂಡಾರೇ ಪಿ.ವಿ. ಸಿಂಧು?

ಗಾಯಕ್ವಾಡ್‌ ಹ್ಯಾಟ್ರಿಕ್‌ ಶತಕ
ಐಪಿಎಲ್‌ ಬ್ಯಾಟಿಂಗ್‌ ಹೀರೋ, ಮಹಾರಾಷ್ಟ್ರದ ಆರಂಭಕಾರ ಋತುರಾಜ್‌ ಗಾಯಕ್ವಾಡ್‌ “ವಿಜಯ್‌ ಹಜಾರೆ ಟ್ರೋಫಿ’ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್‌ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ.

ಮಧ್ಯಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ 112 ಎಸೆತಗಳಿಂದ 136 ರನ್‌ (14 ಬೌಂಡರಿ, 4 ಸಿಕ್ಸರ್‌), ಬಳಿಕ ಛತ್ತೀಸ್‌ಗಢ ವಿರುದ್ಧ 143 ಎಸೆತಗಳಿಂದ ಅಜೇಯ 154 ರನ್‌ (14 ಬೌಂಡರಿ, 3 ಸಿಕ್ಸರ್‌) ಬಾರಿಸಿದ ಗಾಯಕ್ವಾಡ್‌, ಶನಿವಾರ ಕೇರಳ ವಿರುದ್ಧವೂ ಸಿಡಿದು ನಿಂತು 124 ರನ್‌ ಚಚ್ಚಿದರು (129 ಎಸೆತ, 9 ಬೌಂಡರಿ, 3 ಸಿಕ್ಸರ್‌).
ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿರುದ್ಧ ಗಾಯಕ್ವಾಡ್‌ ಚೇಸಿಂಗ್‌ ವೇಳೆ ಸೆಂಚುರಿ ದಾಖಲಿಸಿದ್ದರು. ಎರಡೂ ಪಂದ್ಯಗಳಲ್ಲಿ ಮಹಾರಾಷ್ಟ್ರ ಜಯ ಸಾಧಿಸಿತ್ತು. ಆದರೆ ಕೇರಳ ವಿರುದ್ಧ 4 ವಿಕೆಟ್‌ಗಳಿಂದ ಎಡವಿತು. ಇಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮಹಾರಾಷ್ಟ್ರ 8 ವಿಕೆಟಿಗೆ 291 ರನ್‌ ಗಳಿಸಿದರೆ, ಕೇರಳ 48.5 ಓವರ್‌ಗಳಲ್ಲಿ 6 ವಿಕೆಟಿಗೆ 294 ರನ್‌ ಪೇರಿಸಿತು.

ಕೇರಳದ 6 ವಿಕೆಟ್‌ 120ಕ್ಕೆ ಉದುರಿತ್ತು. ವಿಷ್ಣು ವಿನೋದ್‌ (ಅಜೇಯ 100) ಮತ್ತು ಸಿಜೋಮನ್‌ ಜೋಸೆಫ್ (ಅಜೇಯ 71) ಮುರಿಯದ 7ನೇ ವಿಕೆಟಿಗೆ 174 ರನ್‌ ಬಾರಿಸಿ ಕೇರಳದ ಗೆಲುವು ಸಾರಿದರು.

Advertisement

Udayavani is now on Telegram. Click here to join our channel and stay updated with the latest news.

Next