Advertisement

ವಿಜಯ್‌ ಹಜಾರೆ ಟ್ರೋಫಿ :ಮುಂಬಯಿ ಚಾಂಪಿಯನ್, ಆದಿತ್ಯ ಗೆಲುವಿನ ತಾರೆ

12:10 AM Mar 15, 2021 | Team Udayavani |

ಹೊಸದಿಲ್ಲಿ : ಪೃಥ್ವಿ ಶಾ ನೇತೃತ್ವದ ಮುಂಬಯಿ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯ ಚಾಂಪಿಯನ್‌ ಆಗಿ ಮೂಡಿಬಂದಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಅದು ಉತ್ತರ ಪ್ರದೇಶದ ಬೃಹತ್‌ ಮೊತ್ತಕ್ಕೆ ದಿಟ್ಟ ಉತ್ತರ ನೀಡಿ 6 ವಿಕೆಟ್‌ಗಳ ಗೆಲುವು ಸಾಧಿಸಿತು. ವಿಕೆಟ್‌ ಕೀಪರ್‌ ಆದಿತ್ಯ ತಾರೆ ಅವರ ಅಜೇಯ 118 ರನ್‌ ಹಾಗೂ ಶಾ ಅವರ ಸ್ಫೋಟಕ ಆರಂಭ ಮುಂಬಯಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ಉತ್ತರಪ್ರದೇಶ 4 ವಿಕೆಟಿಗೆ 312 ರನ್‌ ಪೇರಿಸಿದರೆ, ಮುಂಬಯಿ 41.3 ಓವರ್‌ಗಳಲ್ಲೇ 4 ವಿಕೆಟಿಗೆ 315 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಇದು ಮುಂಬಯಿಗೆ ಒಲಿದ 4ನೇ ಪ್ರಶಸ್ತಿ.

ಶಾ, ತಾರೆ ಬ್ಯಾಟಿಂಗ್‌ ತಾರೆಗಳು
ಸರಣಿಯಲ್ಲಿ ರನ್‌ ಪ್ರವಾಹ ಹರಿಸುತ್ತಲೇ ಬಂದ ಪೃಥ್ವಿ ಶಾ ಕೇವಲ 39 ಎಸೆತಗಳಿಂದ 73 ರನ್‌ ಸಿಡಿಸಿ ಮುಂಬಯಿಗೆ ಬಿರುಸಿನ ಆರಂಭ ಒದಗಿಸಿದರು. 10 ಫೋರ್‌, 4 ಸಿಕ್ಸರ್‌ ಬಾರಿಸಿ ತಂಡಕ್ಕೆ ಭರ್ಜರಿ ರನ್‌ರೇಟ್‌ ತಂದಿತ್ತರು. ಹೀಗಾಗಿ ವಿಕೆಟ್‌ ಉಳಿಸಿಕೊಂಡ ಮುಂಬಯಿ ಎಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಶಾ 5 ರನ್‌ ಮಾಡಿದ್ದಾಗ ಎದುರಾಳಿ ನಾಯಕ ಕರಣ್‌ ಶರ್ಮ ಕ್ಯಾಚ್‌ ಕೈಚೆಲ್ಲಿದ್ದು ಉತ್ತರ ಪ್ರದೇಶಕ್ಕೆ ದುಬಾರಿಯಾಗಿ ಪರಿಣಮಿಸಿತು.

ವನ್‌ಡೌನ್‌ನಲ್ಲಿ ಕ್ರೀಸಿಗೆ ಬಂದ ಆದಿತ್ಯ ತಾರೆ ಅಜೇಯ 118 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿ ದರು. 107 ಎಸೆತಗಳ ಈ ಪಂದ್ಯಶ್ರೇಷ್ಠ ಆಟದಲ್ಲಿ 18 ಬೌಂಡರಿ ಸೇರಿತ್ತು.

ಶಿವಂ ದುಬೆ 42, ಶಮ್ಸ್‌ ಮುಲಾನಿ 36, ಯಶಸ್ವಿ ಜೈಸ್ವಾಲ್‌ 29 ರನ್‌ ಮಾಡಿ ಮುಂಬಯಿಯ ಯಶಸ್ವಿ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

ಕೌಶಿಕ್‌ ನೂರೈವತ್ತರ ದಾಖಲೆ
ಉತ್ತರ ಪ್ರದೇಶದ ದೊಡ್ಡ ಮೊತ್ತಕ್ಕೆ ಕಾರಣವಾದದ್ದು ಆರಂಭಕಾರ ಮಾಧವ್‌ ಕೌಶಿಕ್‌ ಅವರ ಭರ್ಜರಿ 158 ರನ್‌ (156 ಎಸೆತ, 15 ಬೌಂಡರಿ, 4 ಸಿಕ್ಸರ್‌). ಇವರ ಜತೆಗಾರ ಸಮರ್ಥ್ ಸಿಂಗ್‌ ಮತ್ತು ಮಧ್ಯಮ ಸರದಿಯ ಅಕ್ಷದೀಪ್‌ ನಾಥ್‌ ತಲಾ 55 ರನ್‌ ಹೊಡೆದರು. ಮೊದಲ ವಿಕೆಟಿಗೆ 26 ಓವರ್‌ಗಳಿಂದ 122 ರನ್‌ ಒಟ್ಟುಗೂಡಿತು. ಕೌಶಿಕ್‌ ರಾಷ್ಟ್ರೀಯ ಏಕದಿನ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅತ್ಯಧಿಕ ರನ್‌ ಹೊಡೆದ ದಾಖಲೆ ಸ್ಥಾಪಿಸಿದರು. ಪಂಜಾಬ್‌ ವಿರುದ್ಧದ 2014ರ ಫೈನಲ್‌ನಲ್ಲಿ ಅಗರ್ವಾಲ್‌ 125 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

ಸಂಕ್ಷಿಪ್ತ ಸ್ಕೋರ್‌:
ಉ.ಪ್ರದೇಶ-4 ವಿಕೆಟಿಗೆ 312 (ಕೌಶಿಕ್‌ ಔಟಾಗದೆ 158, ಸಮರ್ಥ್ 55, ಅಕ್ಷದೀಪ್‌ 55, ಕೋಟ್ಯಾನ್‌ 54ಕ್ಕೆ 2). ಮುಂಬಯಿ-41.3 ಓವರ್‌ಗಳಲ್ಲಿ 4 ವಿಕೆಟಿಗೆ 315 (ತಾರೆ ಔಟಾಗದೆ 118, ಶಾ 73, ದುಬೆ 42, ಮುಲಾನಿ 36, ಚೌಧರಿ 43ಕ್ಕೆ 1, ಮಾವಿ 63ಕ್ಕೆ 1).

ಪಂದ್ಯಶ್ರೇಷ್ಠ: ಆದಿತ್ಯ ತಾರೆ.

Advertisement

Udayavani is now on Telegram. Click here to join our channel and stay updated with the latest news.

Next