Advertisement
1950ರ ದಶಕದ ಬಳಿಕ ಭಾರತೀಯ ಸೇನಾಪಡೆಗಳು ಆರು ಪ್ರಮುಖ ಯುದ್ಧಗಳಲ್ಲಿ ಹೋರಾಡಿವೆ.
Related Articles
Advertisement
1971ರಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಮರಳಿ ಯುದ್ಧಕ್ಕಿಳಿದವು. ಪಶ್ಚಿಮದ ಯುದ್ಧರಂಗದಲ್ಲಿ ಸಂಘರ್ಷಮಯ ಫಲಿತಾಂಶಗಳು ಬಂದವು. ಆದರೆ ಇನ್ನೊಂದೆಡೆ ಢಾಕಾದ ಸಮೀಪದ ಪೂರ್ವ ವಲಯದಲ್ಲಿ ಪಾಕಿಸ್ತಾನಿ ಸೇನಾಪಡೆಗಳು ಸಿಲುಕಿಕೊಂಡು ಅಂತಿಮವಾಗಿ ಭಾರತೀಯ ಸೇನಾಪಡೆಗಳಿಗೆ ಶರಣಾದವು. ಭಾರತದ ಮಧ್ಯಪ್ರವೇಶದಿಂದ ಪಾಕಿಸ್ತಾನ ಕೆರಳುವ ಮೂಲಕ ಆರಂಭಗೊಂಡ ಈ ವಿಶಾಲ ಸೇನಾ ಕಾರ್ಯಾಚರಣೆಗಳು ಹದಿನಾಲ್ಕು ದಿನಗಳ ಕಾಲ ಮುಂದುವರೆದು, ಡಿಸೆಂಬರ್ 17ರಂದು ಪೂರ್ಣಗೊಂಡವು. ಅಂತಿಮವಾಗಿ ಭಾರತ 1971ರ ಯುದ್ಧದಲ್ಲಿ ಜಯಶಾಲಿಯಾಯಿತು.
1987ರಲ್ಲಿ, ಭಾರತೀಯ ಸೇನಾಪಡೆಗಳನ್ನು ಶಾಂತಿ ಸ್ಥಾಪನಾ ಉದ್ದೇಶದಿಂದ ಶ್ರೀಲಂಕಾಗೆ ಕಳುಹಿಸಲಾಯಿತು. 1987ರ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರಿಗೆ ಸಾಧಾರಣ ಯಶಸ್ಸು ಮಾತ್ರವೇ ಲಭಿಸಿತು. ಪ್ರಾಥಮಿಕವಾಗಿ, ಭಾರತೀಯ ಸೈನಿಕರ ಪಾತ್ರವೇನು ಎನ್ನುವುದನ್ನು ತಿಳಿಸಲು ಅಸಮರ್ಥವಾದ ರಾಜಕೀಯ ಇದಕ್ಕೆ ಕಾರಣವಾಗಿತ್ತು.
ಭಾರತ ಪಾಕಿಸ್ತಾನಗಳ ನಡುವೆ 1999ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಕರಗುತ್ತಿರುವ ಹಿಮದಲ್ಲಿ ಪಾಕಿಸ್ತಾನಿ ಸೇನೆ ಮೇಲುಗೈ ಸಾಧಿಸಿತ್ತು. ಚಳಿಗಾಲದಲ್ಲಿ ಸೈನಿಕರು ಸೇನಾನೆಲೆಗಳನ್ನು ಖಾಲಿ ಮಾಡಿ ತೆರಳುವುದಾಗಿ ಭಾರತ ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ಒಪ್ಪಂದವನ್ನು ಮೂಲೆಗುಂಪು ಮಾಡಿ, ಪಾಕಿಸ್ತಾನಿ ಸೇನೆ ಖಾಲಿಯಾಗಿದ್ದ ಭಾರತೀಯ ಸೇನಾ ನೆಲೆಗಳಲ್ಲಿ ಸ್ಥಾಪಿತವಾಯಿತು. ಆರಂಭದಲ್ಲಿ ಪಾಕಿಸ್ತಾನಿ ಸೇನೆ ಇದರಲ್ಲಿ ತನ್ನ ಪಾತ್ರವಿಲ್ಲ, ಬದಲಿಗೆ ಇದು ಕಾಶ್ಮೀರಿ ಬಂಡುಕೋರರ ಕೈವಾಡ ಎಂದಿತು. ಆದರೆ ಅಲ್ಲಿ ಲಭ್ಯವಾದ ದಾಖಲಾತಿಗಳು, ಪಾಕಿಸ್ತಾನಿ ಪ್ರಧಾನಿ ಮತ್ತು ಚೀಫ್ ಆಫ್ ಆರ್ಮಿ ಸ್ಟಾಫ್ ಅವರ ಹೇಳಿಕೆಗಳು ಪಾಕಿಸ್ತಾನಿ ಸೈನಿಕರು ಇದರಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿದವು. ಭಾರತ ತನ್ನ ನೆಲೆಗಳನ್ನು ಮರಳಿ ವಶಪಡಿಸಿಕೊಂಡು, ಪಾಕಿಸ್ತಾನಿ ಸೇನೆಯನ್ನು ಅಲ್ಲಿಂದ ಖಾಲಿ ಮಾಡುವ ಮೂಲಕ ಯುದ್ಧ ಮುಕ್ತಾಯಗೊಂಡಿತು. ಈ ಯುದ್ಧದಲ್ಲಿ ಎರಡೂ ಬದಿಗಳಲ್ಲಿ ಅಪಾರ ಸಾವುನೋವುಗಳು ಸಂಭವಿಸಿದವು.
ಇತ್ತೀಚಿನ ವರ್ಷಗಳಲ್ಲಿ, ಉತ್ತರದ ಗಡಿಯಲ್ಲಿ ಚೀನಾದೊಡನೆ ಗಡಿ ಚಕಮಕಿಗಳು, ಉದ್ವಿಗ್ನತೆಗಳು ಹೆಚ್ಚಾಗತೊಡಗಿವೆ. ಇದರೊಡನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದೊಡನೆಯೂ ಉದ್ವಿಗ್ನತೆಗಳು ತಲೆದೋರಿವೆ.
ಭಾರತೀಯ ಸೇನಾಪಡೆಗಳು ಹೇಗೆ ಬದಲಾಗುತ್ತಾ ಬಂದವು?
1971ರಲ್ಲಿ, ಭಾರತೀಯ ಸೇನಾಪಡೆಗಳಲ್ಲಿ ಒಟ್ಟಾಗಿ ಹತ್ತು ಲಕ್ಷ ಸಕ್ರಿಯ ಸಿಬ್ಬಂದಿಗಳಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅವರು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸದಸ್ಯರಾಗಿದ್ದರು. 1999ರ ವೇಳೆಗೂ ಭಾರತೀಯ ಪಡೆಗಳ ಯೋಧರ ಸಂಖ್ಯೆ ಬಹುತೇಕ ಅಷ್ಟೇ ಇದ್ದರೂ, ಪ್ರತಿಯೊಂದು ವಿಭಾಗದಲ್ಲೂ ತಾಂತ್ರಿಕ ಮತ್ತು ಸಾಮರಿಕ ನೈಪುಣ್ಯತೆಗಳನ್ನು ಸಾಧಿಸಲಾಗಿತ್ತು. ಭಾರತೀಯ ಸಶಸ್ತ್ರ ಪಡೆಗಳ ಪ್ರತಿಯೊಂದು ವಿಭಾಗವೂ ಬಹುವಾಗಿ ಬೆಳೆದಿತ್ತು. 2023ರ ವೇಳೆಗೆ, ಭಾರತೀಯ ಪಡೆಗಳ ಸೈನಿಕರ ಸಂಖ್ಯೆ 14 ಲಕ್ಷ ತಲುಪಿದ್ದು, ತಾಂತ್ರಿಕವಾಗಿ ಅಪಾರ ಮುಂದುವರಿಕೆ ಸಾಧಿಸಲಾಗಿದೆ. ಭಾರತದ ಸೇನಾಪಡೆಗಳು ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಸ್ವಯಂಪ್ರೇರಿತ ಸೈನಿಕರ ಪಡೆಗಳಾಗಿವೆ.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್ ಸೇರಿದಂತೆ ಭಾರತೀಯ ಸೇನೆಯ ಎಲ್ಲ ವಿಭಾಗಗಳಲ್ಲೂ ಅತ್ಯಂತ ಕುಶಲ ಸಿಬ್ಬಂದಿಗಳಿದ್ದಾರೆ. ಮಾರ್ಕೋಸ್ (MARCOS), ಹಾಗೂ ಪ್ಯಾರಾ ಕಮಾಂಡೋಗಳಂತಹ ವಿಶೇಷ ಪಡೆಗಳಂತೂ ತಮ್ಮ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಮತ್ತು ವಿಶಿಷ್ಟ ಸಾಮರ್ಥ್ಯಗಳಿಂದ ಹೆಸರುವಾಸಿಯಾಗಿವೆ.
‘ಮೇಕ್ ಇನ್ ಇಂಡಿಯಾ’ ಯೋಜನೆಯಂತಹ ವಿವಿಧ ಯೋಜನೆಗಳ ಮೂಲಕ, ಸ್ವದೇಶೀ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾರತೀಯ ಆಯುಧ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯುದ್ಧ ನೌಕೆಗಳು, ತೇಜಸ್ ಎಂಕೆ-1ಎ ಯುದ್ಧ ವಿಮಾನಗಳು, ಅರಿಹಂತ್ ವರ್ಗದ ನ್ಯೂಕ್ಲಿಯರ್ ಸಬ್‌ಮರೀನ್‌ಗಳು, ವಿಕ್ರಾಂತ್ ವರ್ಗದ ವಿಮಾನ ವಾಹಕ ನೌಕೆಗಳು, ಬ್ರಹ್ಮೋಸ್ ಕ್ಷಿಪಣಿಗಳು, ಎಟಿಎಜಿಎಸ್ ಮತ್ತು ಇತರ ಅತ್ಯಾಧುನಿಕ ಆಯುಧಗಳು ಮತ್ತು ಉಪಕರಣಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ.
ದೇಶೀಯವಾಗಿ ಆಯುಧಗಳು ಮತ್ತು ರಕ್ಷಣಾ ಉಪಕರಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದ್ದರೂ, ಭಾರತ ಇಂದಿಗೂ ರಕ್ಷಣಾ ಉಪಕರಣಗಳ, ಅದರಲ್ಲೂ ಹೈ ಟೆಕ್ ಆಯುಧಗಳ ಆಮದಿನ ಮೇಲೆ ಬಹಳಷ್ಟು ಅವಲಂಬಿತವಾಗಿದೆ.
ಭಾರತ ಶಾಂತಿಯುತ ರಾಷ್ಟ್ರವಾಗಿ ಮುಂದುವರಿಯುವ ಉದ್ದೇಶವನ್ನೇ ಹೊಂದಿದ್ದರೂ, ತನ್ನ ಮಿಲಿಟರಿ ಸಾಮರ್ಥ್ಯವನ್ನು ಇನ್ನಷ್ಟು ಬೆಳೆಸುವ ಗುರಿಯನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಭಾರತದ ನೆರೆಯ ರಾಷ್ಟ್ರಗಳಲ್ಲಿ ಪಾಕಿಸ್ತಾನ ಶತ್ರು ರಾಷ್ಟ್ರವಾದರೆ, ಚೀನಾ ಅಭಿವೃದ್ಧಿಯ ಹಾದಿಯಲ್ಲಿದೆ. ಈ ಎರಡೂ ರಾಷ್ಟ್ರಗಳು ಭಾರತದ ಆಂತರಿಕ ಭದ್ರತೆಗೆ ಧಕ್ಕೆ ಉಂಟುಮಾಡಬಲ್ಲ ರಾಷ್ಟ್ರಗಳಾಗಿವೆ. ಒಂದು ವೇಳೆ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಷ್ಟು ಸಾಮರ್ಥ್ಯ ಸಂಪಾದಿಸಿದರೆ ಮಾತ್ರವೇ ಅದು ಇಂತಹ ವಿಷಮ ಸನ್ನಿವೇಶದಲ್ಲಿ ಸುರಕ್ಷಿತವಾಗಿ ಉಳಿಯಲು ಸಾಧ್ಯ.
ರಾಷ್ಟ್ರದ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ರಾಜತಾಂತ್ರಿಕತೆ ಒಂದು ಬಹುಮುಖ್ಯ ಅಂಶವಾಗಿದೆ. ಭಾರತದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಳವಡಿಸಿದ ಅಲಿಪ್ತ ನೀತಿಯನ್ನು ಭಾರತ ಇನ್ನೂ ತ್ಯಜಿಸಿಲ್ಲ. ಆದರೆ, ಹಿಂದಿನ ಸೋವಿಯತ್ ಒಕ್ಕೂಟದ ಉತ್ತರಾಧಿಕಾರಿಯಾದ ರಷ್ಯಾದ ಜೊತೆಗಿನ ಸಹಯೋಗಕ್ಕಿಂತಲೂ ಹೆಚ್ಚಾಗಿ, ಭಾರತ ಈಗ ಅಮೆರಿಕಾದೊಡನೆ ಹೆಚ್ಚಿನ ಸಹಯೋಗ ಸಾಧಿಸುತ್ತಿದೆ.
ಭಾರತ ತನ್ನ ಪ್ರಾದೇಶಿಕ ಸ್ಥಿರತೆ ಮತ್ತು ಸುರಕ್ಷತೆಯನ್ನು ಸಾಧಿಸುವ ನಿಟ್ಟಿನಲ್ಲಿ ಅಮೆರಿಕಾದೊಡನೆ ಸಹಯೋಗ ಹೊಂದುತ್ತಿದೆ. ಆಧುನಿಕ ಮಿಲಿಟರಿ ತಂತ್ರಜ್ಞಾನಗಳ ಯುಗದಲ್ಲಿ, ಎರಡು ರಾಷ್ಟ್ರಗಳು ಪರಸ್ಪರ ಮಾಹಿತಿ ಹಂಚಿಕೆ ಮಾಡಿಕೊಳ್ಳುತ್ತಿವೆ ಮತ್ತು ಜಂಟಿ ಮಿಲಿಟರಿ ಅಭ್ಯಾಸಗಳನ್ನು ಕೈಗೊಳ್ಳುತ್ತಿವೆ. ಆದರೆ, ಇಷ್ಟೆಲ್ಲ ಹೆಚ್ಚುತ್ತಿರುವ ಸಹಯೋಗದ ಹೊರತಾಗಿಯೂ, ಅಮೆರಿಕಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳು ಅಸ್ಥಿರವಾಗೇ ಇವೆ.
ಭಾರತದ ಸಮಕಾಲೀನ ರಾಜತಾಂತ್ರಿಕತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು, ಕಾರ್ಯತಂತ್ರದ ಸಹಯೋಗಿಗಳನ್ನು ಹುಡುಕುವುದು, ಜಾಗತಿಕ ವಿಚಾರಗಳಿಗೆ ಧ್ವನಿ ಎತ್ತುವುದು, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ನಾಯಕತ್ವವನ್ನು ತೋರುವುದನ್ನು ಒಳಗೊಂಡಿದೆ. ರಾಜತಾಂತ್ರಿಕ ಪ್ರಯತ್ನಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ಮೂಲಕ, ಭಾರತ ಪ್ರಾದೇಶಿಕ ಮತ್ತು ಜಾಗತಿಕ ವ್ಯವಸ್ಥೆಗಳನ್ನು ಬದಲಾಯಿಸಲು ಅವಕಾಶ ಸೃಷ್ಟಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತ ಸಂಕೀರ್ಣ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ.
ಮುಂದಿನ ದಿನಗಳಲ್ಲಿ ಭಾರತದ ಮಿಲಿಟರಿ ಕಾರ್ಯತಂತ್ರ ಆಧುನೀಕರಣ, ಪ್ರಾದೇಶಿಕ ಪಾಲ್ಗೊಳ್ಳುವಿಕೆ, ಮತ್ತು ತಂತ್ರಜ್ಞಾನದ ಅಭಿವೃದ್ಧಿಗಳನ್ನು ಒಳಗೊಂಡ ಯೋಜನೆಯಾಗಿರಲಿದೆ. ಈ ಮೂಲಕ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅತ್ಯಂತ ಕುಶಲವಾದ, ಎಂತಹ ಪರಿಸ್ಥಿತಿಗೂ ಹೊಂದಿಕೊಳ್ಳುವ, ಮತ್ತು ಆಧುನಿಕ ಆಯುಧಗಳನ್ನು ಹೊಂದಿರುವ ಸೇನಾಪಡೆಗಳನ್ನು ನಿರ್ಮಿಸಿ, ಆ ಮೂಲಕ ಸಂಭಾವ್ಯ ಅಪಾಯಗಳ ವಿರುದ್ಧ ಸೆಣಸಲು ಸಿದ್ಧವಾಗಿ, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಗಳನ್ನು ಕಾಪಾಡಿಕೊಳ್ಳಲು ಆಲೋಚಿಸುತ್ತಿದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)