ಹೈದರಾಬಾದ್: “ದೇಶದ ಎಲ್ಲ ನಾಗರಿಕರಿಗೂ ಮತದಾನದ ಹಕ್ಕನ್ನು ನೀಡಲೇಬಾರದು.’ ಹೀಗೆಂದು ಹೇಳಿರುವುದು ತೆಲುಗಿನ ನಟ ವಿಜಯ್ ದೇವರಕೊಂಡ.
ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿರುವ ಅವರು, “ನಾನೇನಾದರೂ ರಾಜಕೀಯ ಪ್ರವೇಶಿಸಿದರೆ “ಸರ್ವಾಧಿಕಾರಿಯಾಗಲು ಬಯಸುತ್ತೇನೆ. 300 ಮಂದಿ ಒಂದು ವಿಮಾನದಲ್ಲಿ ತೆರಳಲು ಬಯಸುತ್ತಾರೆ ಎಂದಿಟ್ಟುಕೊಳ್ಳಿ. ಪೈಲಟ್ ಯಾರಾಗಬೇಕು ಎಂದು ಎಲ್ಲ 300 ಮಂದಿ ಸೇರಿ ನಿರ್ಧರಿಸುತ್ತಾರಾ? ಇಲ್ಲವಲ್ಲ. ವಿಮಾನ ಓಡಿಸಲು ಯಾರು ಅರ್ಹರು ಎಂಬುದನ್ನು ಒಂದು ಸಮರ್ಪಕ ಸಂಸ್ಥೆ ನಿರ್ಧರಿಸುತ್ತದೆ.
ಅದೇ ರೀತಿ ದೇಶವನ್ನು ನಡೆಸಬೇಕಾದವರು ಯಾರು ಎಂಬುದನ್ನು ಇಡೀ ದೇಶವೇ ನಿರ್ಧರಿಸಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡುವುದು ನನಗೆ ಸಮಂಜಸ ಎನಿಸುವುದಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ:ಟೈಮ್ ಮುಖಪುಟದಲ್ಲಿ ಅಪ್ಪಟ ಭಾರತೀಯ ಪ್ರತಿಭೆ ಮಾನಸಿ ಜೋಷಿ
ತುಂಬಾ ಜನರು ಹಣ ಮತ್ತು ಹೆಂಡಕ್ಕಾಗಿ ತಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳುತ್ತಾರೆ. ಅವರು ಯಾವ ಕಾರಣಕ್ಕಾಗಿ ಮತದಾನದಲ್ಲಿ ಭಾಗಿಯಾಗುತ್ತಾರೆ ಎನ್ನುವ ಪರಿಕಲ್ಪನೆಯೂ ಅವರಿಗೆ ಇರುವುದಿಲ್ಲ. ಅಂತವರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ವಿಜಯ್ ಹೇಳಿದ್ದಾರೆ.
ಅರ್ಜುನ್ ರೆಡ್ಡಿ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಸೆನ್ಸೇಶನ್ ಹುಟ್ಟು ಹಾಕಿದ ವಿಜಯ್ ದೇವರಕೊಂಡ ಮುಂದಿನ ಚಿತ್ರ ಫೈಟರ್ ನಲ್ಲಿ ಅನನ್ಯಾ ಪಾಂಡೆ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.