Advertisement

ಮಾಲ್ಗುಡಿಯಲ್ಲಿ ವಿಜಯ ಸಂಭ್ರಮ

10:12 AM Feb 08, 2020 | Lakshmi GovindaRaj |

“ಎಲ್ಲಾ ಕಡೆ ಹೋಗಿ ಜನರ ಜೊತೆ ಬೆರೆತಿದ್ದೇವೆ. ಎಲ್ಲರಿಂದಲೂ ಸಿನಿಮಾ ಬಗ್ಗೆ ಪಾಸಿಟಿವ್‌ ಮಾತುಗಳೇ ಕೇಳಿಬರುತ್ತಿದೆ …’ ಹೀಗೆ ಹೇಳಿನಕ್ಕರು ವಿಜಯ ರಾಘವೇಂದ್ರ. ಅವರ ಕಣ್ಣಲ್ಲಿ ಒಂದು ಗೆಲುವಿನ ಕನಸಿತ್ತು, ಒಳ್ಳೆಯ ಸಿನಿಮಾ ಮಾಡಿದ ಖುಷಿ ಎದ್ದು ಕಾಣುತ್ತಿತ್ತು. ಅಷ್ಟಕ್ಕೂ ಆ ಸಿನಿಮಾ ಯಾವುದು ಎಂದು ನೀವು ಕೇಳಿದರೆ ಅದಕ್ಕೆ ಉತ್ತರ “ಮಾಲ್ಗುಡಿ ಡೇಸ್‌’. ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್‌ ಅಂಶಗಳಿಂದ ಮುಕ್ತವಾಗಿ, ಒಂದು ಹಿತವಾದ ಜರ್ನಿ ಮೂಲಕ ಗಮನಸೆಳೆಯುತ್ತಿರುವ ಸಿನಿಮಾ.

Advertisement

ಚಿತ್ರ ಇಂದು (07) ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ಮುನ್ನ ಪ್ರಚಾರದ ಸಲುವಾಗಿ ಚಿತ್ರತಂಡ ಇಡೀ ರಾಜ್ಯ ಸುತ್ತಿದೆ. ಬಹುಶಃ ಇತೀಚಿನ ದಿನಗಳಲ್ಲಿ ವಿಜಯ ರಾಘವೇಂದ್ರ ತಮ್ಮ ಯಾವುದೇ ಸಿನಿಮಾವನ್ನು ಈ ಮಟ್ಟಕ್ಕೆ ಪ್ರಚಾರ ಮಾಡಿಲ್ಲ. ಆದರೆ, “ಮಾಲ್ಗುಡಿ ಡೇಸ್‌’ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅದಕ್ಕೆ ಕಾರಣ ಸಿನಿಮಾದ ಕಂಟೆಂಟ್‌. ವಿಜಯ ರಾಘವೇಂದ್ರ ಅವರ ಮಾತಲ್ಲೇ ಹೇಳುವುದಾದರೆ ಇದೊಂದು ಕಾವ್ಯಾತ್ಮಕ ಸಿನಿಮಾ.

“ನಾನು ಈ ತರಹದ ಸವಾಲಿನ ಪಾತ್ರ, ಸಿನಿಮಾ ಮಾಡಿ ವರ್ಷಗಳೇ ಆಗಿ ಹೋಗಿತ್ತು. ಹೋದಲ್ಲೆಲ್ಲಾ, “ಯಾಕೆ ವಿಜಯ್‌ ನೀವು ಒಳ್ಳೆಯ ಸಿನಿಮಾ ಮಾಡಬಾರದು, ಯಾಕ್‌ ನಿಮಗೆ ಒಳ್ಳೆಯ ಸಿನಿಮಾ ಬರ್ತಾ ಇಲ್ವಾ’ ಎಂದು ನನ್ನ ಮೇಲಿನ ಪ್ರೀತಿಯಿಂದ ಎಂದು ಖುಷಿಯಿಂದ ಕೇಳಿದಾಗ, “ಹೌದು, ಯಾಕೆ ಒಳ್ಳೆಯ ಸಿನಿಮಾ ಬರ್ತಿಲ್ಲ ಎಂದು ನಾನು ಯೋಚಿಸುತ್ತಿದ್ದ ಸಂದರ್ಭದಲ್ಲಿ ಈ ಪಾತ್ರ ಸಿಕ್ಕಿತು’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ವಿಜಯ ರಾಘವೇಂದ್ರ.

ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ 75 ವರ್ಷದ ಗೆಟಪ್‌ ಗಮನ ಸೆಳೆಯುತ್ತಿದೆ. ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬ ಹಿರಿಯ ಸಾಹಿತಿಯ ಪಾತ್ರ ಮಾಡಿದ್ದಾರೆ. ಆ ಸಾಹಿತಿಯ ಜೀವನ, ನೆನಪುಗಳು, ಅದನ್ನು ಯಾವ ರೀತಿ ಅನುಭವಿಸುತ್ತಾರೆ, ಯಾವ ಹಂತದಲ್ಲಿ ಮತ್ತು ಯಾರ ಜೊತೆ ಅನುಭವಿಸುತ್ತಾರೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ.

“ಈ ಚಿತ್ರ ಎರಡು ಜನರೇಶನ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ತುಂಬಾ ವೇಗವಾಗಿ ಸಾಗುತ್ತಿರುವ ಜೀವನಕ್ಕೆ ಮನರಂಜನೆಯ ಲಗಾಮು ಹಾಕುವ ಪ್ರಯತ್ನ ಈ ಚಿತ್ರದ್ದು. ಚಿತ್ರದ ತುಂಬಾ ಒಂದು ಫೀಲ್‌ ಇದೆ. ಇಲ್ಲಿ ಫೈಟ್‌ ಇಲ್ಲ, ಡ್ಯಾನ್ಸ್‌ ಇಲ್ಲ. ಆದರೆ, ಎಲ್ಲರ ಮನಸ್ಸು ಮುಟ್ಟುವ ಪಾತ್ರವಿದೆ’ ಎನ್ನುವುದು ವಿಜಯ್‌ ಮಾತು. ಮಾಲ್ಗುಡಿ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಶಂಕರ್‌ನಾಗ್‌.

Advertisement

ಅವರ ಮಾಡಿರುವ “ಮಾಲ್ಗುಡಿ ಡೇಸ್‌’ ಅನ್ನು ಮರೆಯುವಂತಿಲ್ಲ. ಹಾಗಂತ ಶಂಕರ್‌ ನಾಗ್‌ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಎಲ್ಲವೂ ಹೊಸದೇ ಆಗಿರುತ್ತದೆ. ಮುಖ್ಯವಾಗಿ ಇದು ನೆನಪಿನ ಸುತ್ತ ಸಾಗುವ ಸಿನಿಮಾವಾದ್ದರಿಂದ ಆಡಿಯನ್ಸ್‌ಗೆ ಬೇಗನೇ ಕನೆಕ್ಟ್ ಆಗಲು ಚಿತ್ರತಂಡ “ಮಾಲ್ಗುಡಿ ಡೇಸ್‌’ ಎಂದು ಹೆಸರಿಟ್ಟಿದೆ.

ಮೇಕಪ್‌ ಹೈಲೈಟ್‌: ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ 75 ವರ್ಷದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷವಾದ ಮೇಕಪ್‌ ಮಾಡಲಾಗಿದೆ. ನಾಯಕನನ್ನು ಇಲ್ಲಿ ಸುಮಾರು 75 ವರ್ಷದ ವ್ಯಕ್ತಿಯನ್ನಾಗಿಸಲು ಸಾಕಷ್ಟು ಯೋಚಿಸಿ, ಚರ್ಚಿಸಿ ಒಳ್ಳೆಯ ಮೇಕಪ್‌ ಮ್ಯಾನ್‌ ಹುಡುಕಿ ಕರೆತರಲಾಗಿದೆ. ಪ್ರತಿ ದಿನ ಈ ಮೇಕಪ್‌ಗಾಗಿಯೇ ಸುಮಾರು 4 ತಾಸು ಸಮಯ ಬೇಕಾಗುತ್ತಿತ್ತು. ನಾಯಕನ ಮುಖಕ್ಕೆ ಹೋಲಿಕೆಯಾಗುವ ಮೇಕಪ್‌ ಹಾಗು ಮೋಲ್ಡ್‌ಗೆ ಒಂದು ತಿಂಗಳ ತಯಾರಿ ಬೇಕು. ವಿಜಯರಾಘವೇಂದ್ರ ಅವರು ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಿದ್ದಾರೆ. ಅಷ್ಟೇ ಪ್ರೀತಿಯಿಂದ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಅಪ್ಪೆ ಟೀಚರ್‌ ಕಾಂಬಿನೇಶನ್‌ನಿಂದ ಮಾಲ್ಗುಡಿ: “ಮಾಲ್ಗುಡಿ ಡೇಸ್‌’ ಚಿತ್ರವನ್ನು ಕಿಶೋರ್‌ ಮೂಡಬಿದ್ರೆ ನಿರ್ದೇಶಿಸಿದ್ದಾರೆ. ರತ್ನಾಕರ್‌ ಕಾಮತ್‌ ನಿರ್ಮಾಪಕರು. ಈ ಹಿಂದೆ ಇದೇ ಜೋಡಿ ತುಳುವಿನಲ್ಲಿ “ಅಪ್ಪೆ ಟೀಚರ್‌’ ಎಂಬ ಸಿನಿಮಾ ಮಾಡಿತ್ತು. ಆ ಚಿತ್ರ ಹಿಟ್‌ಲಿಸ್ಟ್‌ ಸೇರಿದೆ. ಈಗ ಇದೇ ಜೋಡಿ “ಮಾಲ್ಗುಡಿ ಡೇಸ್‌’ ಮಾಡಿದೆ. ಚಿತ್ರದಲ್ಲಿ ಗ್ರೀಷ್ಮಾ ಶ್ರೀಧರ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಗಗನ್‌ ಬಡೇರಿಯ ಸಂಗೀತವಿದೆ.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next