ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಭಾನುವಾರ ಹಳೆಯ ಜಾವಾ ಬೈಕ್‌ಗಳ ಸದ್ದು ಕೇಳಿಸಿದರೆ, ಸೋಮವಾರ ಟ್ರಿಣ್ ಟ್ರಿಣ್ ಸೈಕಲ್ ಬೆಲ್‌ನ ಸದ್ದು ಜೋರಾಗಿತ್ತು. ಮುಂಜಾನೆಯೇ ಸೈಕಲ್ ಏರಿದ ಅನೇಕರು ನಗರದಲ್ಲಿನ ಪಾರಂಪರಿಕ ಕಟ್ಟಡಗಳ ವೀಕ್ಷಣೆ ಮಾಡುತ್ತಾ ಸೈಕಲ್ ಸವಾರಿ ಮಾಡಿದರು.
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಪುರಾತತ್ವ ಮತ್ತು ಪರಂಪರೆ ಇಲಾಖೆ ಆಯೋಜಿಸಿರುವ ಪಾರಂಪರಿಕ ನಡಿಗೆ ಕಾರ್ಯಕ್ರಮದ 3ನೇ ದಿನ ಸೈಕಲ್ ಸವಾರಿಯಲ್ಲಿ ಪಾರಂಪರಿಕ ಕಟ್ಟಡಗಳ ವೀಕ್ಷಣೆ ಮಾಡಲಾಯಿತು. ನಗರದ ಪುರಭವನದ ಆವರಣದಿಂದ ಹೊರಟ ಟ್ರಿಣ್ ಟ್ರಿಣ್ ಸೈಕಲ್ ಸವಾರಿ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಮುಂದೆ ಸಂಚರಿಸಿತು.
ಈ ವೇಳೆ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು ಹಾಗೂ ಹಿರಿಯ ಪತ್ರಕರ್ತ ಈಚನೂರು ಕುಮಾರ್ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಡಿ.ರಂದೀಪ್, ಮೇಯರ್ ಎಂ.ಜೆ.ರವಿಕುಮಾರ್ ಸೈಕಲ್ ಸವಾರಿಗೆ ಚಾಲನೆ ನೀಡಿದರು.
ಈ ವೇಳೆ ಇಲಾಖೆ ಉಪನಿರ್ದೆಶಕ ಡಾ.ಗವಿಸಿದ್ದಯ್ಯ, ಪುರಾತತ್ವ ತಜ್ಞ ಎನ್.ಎಲ್.ಗೌಡ ಭಾಗವಹಿಸಿದ್ದರು. ಇವರೊಂದಿಗೆ ಎನ್.ಆರ್. ಮೊಹಲ್ಲಾದ 88 ವರ್ಷದ ಅಂಚೆ ಇಲಾಖೆ ನಿವೃತ್ತ ನೌಕರ ಸೋಸಲೆ ವೀರಯ್ಯ ಹಾಗೂ 11 ವರ್ಷದ 6ನೇ ತರಗತಿ ಜೆಎಸ್‌ಎಸ್ ಶಾಲೆಯ ಅನ್ನಪೂರ್ಣೆàಶ್ವರಿ ಸೈಕಲ್ ಸವಾರಿಯಲ್ಲಿ ಭಾಗವಹಿಸಿ ಎಲ್ಲರ ಗಮನ ಸಳೆದರು.
ಎಲ್ಲೆಲ್ಲಿಗೆ ಸೈಕಲ್ ಸವಾರಿ?: ನಗರದ 70ಕ್ಕೂ ಹೆಚ್ಚು ಮಂದಿ ವಯಸ್ಸಿನ ಬೇದವಿಲ್ಲದೆ ಟ್ರಿಣ್ ಟ್ರಿಣ್ ಸೈಕಲ್ ಸವಾರಿಯಲ್ಲಿ ಭಾಗವಹಿಸಿದ್ದರು. ಪುರಭವನದಿಂದ ಹೊರಟ ಸವಾರಿ ದೊಡ್ಡಗಡಿಯಾರ, ಚಾಮರಾಜವೃತ್ತ, ಅರಮನೆ, ಕೆ.ಆರ್.ವೃತ್ತ, ಜಗನ್ಮೋಹನ ಅರಮನೆ, ಜೂನಿಯರ್ ಮಹಾರಾಣಿ ಕಾಲೇಜು, ನಿರಂಜನ ಆಶ್ರಮ, ಪದ್ಮಾಲಯ, ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಒರಿಯಂಟಲ್ ರಿಸರ್ಚ್ ಸಂಸೆ, ಕ್ರಾಪರ್ಡ್ ಹಾಲ್, ಜಿಲ್ಲಾಧಿಕಾರಿ ಕಚೇರಿ ಮಾರ್ಗಗಳಲ್ಲಿ ಸಾಗಿತು.