Advertisement
ಕಥೆ, ಚಿತ್ರಕಥೆ, ಪಾತ್ರ ಇತ್ಯಾದಿ ಎಲ್ಲವನ್ನೂ ಆ “ಧೂಳು’ ಆವರಿಸಿಕೊಂಡಿರುವುದರಿಂದ ಕಣ್ಣಿಗೆ ಎಲ್ಲವೂ ಅಸ್ಪಷ್ಟ! ಶೀರ್ಷಿಕೆ ನೋಡಿ ಚಿತ್ರದಲ್ಲೇನೋ ಇರಬಹುದು ಅಂದುಕೊಂಡು ಬಂದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಇಲ್ಲಿ ಭರಪೂರ ಪಾತ್ರಗಳಿವೆ. ಆದರೆ, ಅವುಗಳಿಗೆ ಗಟ್ಟಿ ಬುನಾದಿಯೇ ಇಲ್ಲ. ಕಥೆಯಲ್ಲಿ ವಿಶೇಷವೇನಿಲ್ಲ. ಈಗಾಗಲೇ ಕನ್ನಡದಲ್ಲೇ ಈ ರೀತಿಯ ಕಥೆಗಳು ಬೇಜಾನ್ ಬಂದು ಹೋಗಿವೆ.
Related Articles
Advertisement
ಇಲ್ಲಿ ಕಾಣುವ ಪಾತ್ರಗಳೆಲ್ಲವೂ ನೆಗೆಟಿವ್ ಶೇಡ್‌ನಲ್ಲಿವೆ. ಹಾಗಂತ ಚಿತ್ರದಲ್ಲಿ ಪಾಸಿಟಿವ್ ಅಂಶಗಳೇ ಇಲ್ಲವೆಂದಲ್ಲ. ಅಲ್ಲಲ್ಲಿ, ಮೆಚ್ಚುವಂತಹ ಅಂಶಗಳು, ದೃಶ್ಯಗಳು ಬಂದು ಹೋಗುತ್ತವೆ. ಇಷ್ಟಾದರೂ ಇಲ್ಲಿ ನಿರ್ದೇಶಕರು ಒಂದು ಸಣ್ಣ ಸಂದೇಶ ಕೊಟ್ಟಿದ್ದಾರೆ. ಆ ಸಂದೇಶದ ಬಗ್ಗೆ ಏನಾದರೂ ಕುತೂಹಲವಿದ್ದರೆ, “ಧರ್ಮಸ್ಯ’ ನೋಡುವ ಧೈರ್ಯ ಮಾಡಬಹುದು.
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಫೈಟ್‌ವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರೇಕೆ ಇದ್ದಕ್ಕಿದ್ದಂತೆ ಎಂಟ್ರಿಯಾದರು ಎಂಬುದಕ್ಕೆ ಬಲವಾದ ಕಾರಣಗಳಿಲ್ಲ. ಚಿತ್ರದಲ್ಲಿ ರೌಡಿಗಳಿಂದ ಹೀರೋನ ಉಳಿಸಲು ಎಂಟ್ರಿಯಾಗಿ, ಗೆಳೆಯನ ಕಾಪಾಡಲು ಬಂದ ಈಶ್ವರ ಅಂತ ಡೈಲಾಗ್ ಹೊಡೆದು ಒಂದು ಭರ್ಜರಿ ಫೈಟ್ ಮಾಡಿ ಮಾಯವಾಗುತ್ತಾರೆ.
ಇನ್ನು, ಪ್ರಥಮ್ ಪಾತ್ರ ಇರದಿದ್ದರೂ ಸಿನಿಮಾಗೇನೂ ನಷ್ಟ ಆಗುತ್ತಿರಲಿಲ್ಲ. ಅಂತೆಯೇ ಸಾಧುಕೋಕಿಲ ಅವರ ಕಾಮಿಡಿ ಎಪಿಸೋಡ್‌ಗೆ ಹೆಚ್ಚು ಒತ್ತು ಕೊಟ್ಟು ನೋಡುಗರ ತಾಳ್ಮೆ ಪರೀಕ್ಷಿಸಲಾಗಿದೆ. ಇವೆಲ್ಲವನ್ನು ಸ್ವಲ್ಪ ಯೋಚಿಸಿ, ಅಳವಡಿಸಿದ್ದರೆ, ನಿಜ “ಧರ್ಮ’ ಪಾಲನೆಯಾಗುತ್ತಿತ್ತು. ಆದರೆ, ಆ ಪ್ರಯತ್ನ ಇಲ್ಲಿ ಆಗಿಲ್ಲ.
ಕಥೆ ಬಗ್ಗೆ ಹೇಳುವುದಾದರೆ, ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥನಾಗುವ ಹುಡುಗನೊಬ್ಬ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಕೊನೆಗೆ ಹಣದ ಹಿಂದೆ ಹೋಗುವ ಮನಸ್ಸು ಮಾಡುತ್ತಾನೆ. “ತಿಂಗಳು ದುಡಿದರೆ ಇರುವೆ ಕಾಸು, ಒಬ್ಬನೇ ದುಡಿದರೆ ಆನೆಕಾಸು’ ಅನ್ನುತ್ತಲೇ ಗನ್ ಹಿಡಿದು ಮೈ ಹೂ ಡಾನ್’ ಅನ್ನುತ್ತಾನೆ.
ದುಡ್ಡಿನ ಹಿಂದೆ ಹೋಗುವ ಅವನಿಗೆ ಪ್ರೀತಿಯೊಂದು ಚಿಗುರೊಡೆಯುತ್ತೆ, ಕಳೆದು ಹೋದ ಗೆಳೆಯನೊಬ್ಬ ಸಿಗುತ್ತಾನೆ. ಆದರೆ, ಅವನಿಗೆ ಗೊತ್ತಿಲ್ಲದಂತೆ ಒಂದು ವ್ಯೂಹ ರಚನೆಯಾಗಿ, ಅವನ ಲೈಫಲ್ಲಿ ಏನೇನೋ ಘಟನೆಗಳಿಗೆ ಕಾರಣವಾಗುತ್ತೆ. ನಾಯಕ ತಪ್ಪು ಹಾದಿ ತುಳಿಯಲು ಕಾರಣ ಏನೆಂಬುದುದೇ ಕಥೆ. ವಿಜಯರಾಘವೇಂದ್ರ ಅವರಿಗಿಲ್ಲಿ ಆ ಪಾತ್ರವೇ ಹೊಂದಿಕೆಯಾಗಿಲ್ಲ. ಸಾಫ್ಟ್ ಪಾತ್ರವನ್ನು “ರಗಡ್’ ಆಗಿ ತೋರಿಸಿರುವುದೇ ಮೈನಸ್.
ಆದರೂ, ನಿರ್ದೇಶಕರು ಹೇಳಿದಂತೆ ಮಾಡಿರುವ ವಿಜಯರಾಘವೇಂದ್ರ, ಕಿರುಚಾಡಲು ಹರಸಾಹಸ ಪಟ್ಟಿದ್ದಾರೆ. ಭರ್ಜರಿ ಫೈಟ್‌ನಲ್ಲಿ ಹಿಂದೆ ಬಿದ್ದಿಲ್ಲ. ನಿರ್ದೇಶಕರು ನಿರ್ದೇಶನದತ್ತ ಗಮನಹರಿಸಿದ್ದರೆ ಸಾಕಿತ್ತು. ಆದರೆ, ಅವರೂ ತೆರೆ ಮೇಲೆ ರಾರಾಜಿಸಿದ್ದಾರೆ. ಹಾಗಂತ ನಟನೆ ಬಗ್ಗೆ ಹೇಳುವಂಥದ್ದೇನೂ ಇಲ್ಲ.
ಸಾಯಿಕುಮಾರ್ ಮಾರಿ ಪಾತ್ರವನ್ನು ಜೀವಿಸಿದ್ದಾರೆ. ಖಡಕ್ ಡೈಲಾಗ್ ಜೊತೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಶ್ರಾವ್ಯಾ ಗ್ಲಾಮರ್‌ಗಷ್ಟೇ ಸೀಮಿತ. ಉಳಿದಂತೆ ಬರುವ ಪಾತ್ರಗಳ್ಯಾವೂ ನೆನಪಲ್ಲುಳಿಯಲ್ಲ. ಜೂಡ ಸ್ಯಾಂಡಿ ಮತ್ತು ಪರಾಗ್ ಸಂಗೀತದಲ್ಲಿ ಸ್ವಾದ ಹುಡುಕುವುದು ಕಷ್ಟ. ಶಂಕರ್ ಛಾಯಾಗ್ರಹಣದಲ್ಲಿ “ಧರ್ಮ’ ಸಂಕಟವೇ ಹೆಚ್ಚು.
ಚಿತ್ರ: ಧರ್ಮಸ್ಯನಿರ್ಮಾಣ: ಅಕ್ಷರ ತಿವಾರಿ, ವಿಶಾಲ್ ತಿವಾರಿ
ನಿರ್ದೇಶನ: ವಿರಾಜ್
ತಾರಾಗಣ: ವಿಜಯ ರಾಘವೇಂದ್ರ, ಶ್ರಾವ್ಯಾ, ಸಾಯಿಕುಮಾರ್, ಪ್ರಜ್ವಲ್ ದೇವರಾಜ್, ಗಡ್ಡಪ್ಪ, ಪ್ರಥಮ್, ಪದ್ಮವಾಸಂತಿ ಇತರರು. * ವಿಜಯ್ ಭರಮಸಾಗರ