Advertisement

ವೀಕ್ಷಕರ ಬೆಂಬಲವೇ ನಮಗೆ ಶ್ರೀರಕ್ಷೆ: ಸ್ಟಾಲಿನ್‌

10:35 AM Oct 04, 2017 | |

ಹೊಸದಿಲ್ಲಿ: ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ನಮಗೆ ತವರಿನ ವೀಕ್ಷಕರ ಬೆಂಬಲ ಅತ್ಯಗತ್ಯ, ಗ್ರೂಪ್‌ ಹಂತ ದಾಟುವುದು ನಮ್ಮ ಮೊದಲ ಗುರಿ ಎಂದಿದ್ದಾರೆ ಭರವಸೆಯ ಡಿಫೆನ್ಸ್‌ ಆಟಗಾರ ಸಂಜೀವ್‌ ಸ್ಟಾಲಿನ್‌. 

Advertisement

“ನಮಗೀಗ ಆತ್ಮವಿಶ್ವಾಸ ಮೂಡಿದೆ. ಆದರೆ ಇದು ಅತಿಯಾದ ಆತ್ಮವಿಶ್ವಾಸವಲ್ಲ. ದೊಡ್ಡದೊಂದು ಸಮರಕ್ಕೆ ನಾವು ಸಜ್ಜಾಗಿದ್ದೇವೆ. ವಿಶ್ವಕಪ್‌ನಲ್ಲಿ ಗ್ರೂಪ್‌ ಹಂತ ದಾಟುವ ಯೋಜನೆಯೊಂದಿಗೆ ನಾವು ಕಣಕ್ಕಿಳಿಯಲಿದ್ದೇವೆ’ ಎಂದು ಸ್ಟಾಲಿನ್‌ ಹೇಳಿದರು. ಭಾರತದ ಸೀನಿಯರ್‌ ಫ‌ುಟ್ಬಾಲಿಗರೇ ಮಾಧ್ಯಮಗಳ ಮುಂದೆ ಮಾತಾಡಲು ಹಿಂದೇಟು ಹಾಕುತ್ತಿರುವಂಥ ಸಂದರ್ಭದಲ್ಲಿ ಕಿರಿಯ ಡಿಫೆಂಡರ್‌ ಸ್ಟಾಲಿನ್‌ ಅಭ್ಯಾಸದ ವೇಳೆ ತಮಗೆ ಅನಿಸಿದ್ದನ್ನೆಲ್ಲ ಹೇಳಿಕೊಂಡದ್ದು ವಿಶೇಷವಾಗಿತ್ತು. ಅ. 6ರಿಂದ ಈ ಕಾಲ್ಚೆಂಡಿನ ಕಾಳಗ ಭಾರತದ ಆತಿಥ್ಯದಲ್ಲಿ ರಂಗೇರಿಸಿಕೊಳ್ಳಲಿದೆ.

“ಭಾರತದ ಅಂಡರ್‌-17 ತಂಡ ವಿಶ್ವಕಪ್‌ಗೆ ಸಂಪೂರ್ಣವಾಗಿ ಅಣಿಯಾಗಿದೆ. 2015ರಿಂದ 14 ದೇಶಗಳಲ್ಲಿ ನಮ್ಮ ತಂಡ ಪ್ರವಾಸಗೈದು ಸಾಕಷ್ಟು ಪಂದ್ಯಗಳನ್ನಾಡಿದೆ. ಜರ್ಮನಿ, ರಶ್ಯ, ಸ್ಪೇನ್‌, ಮೆಕ್ಸಿಕೊ, ದಕ್ಷಿಣ ಆಫ್ರಿಕಾ ಮತ್ತು ಯುಎಇಗೆ ತೆರಳಿದೆ. ಇದರಿಂದ ಈಗ ಲಾಭವಾಗಬಹುದೇ ಎಂದು ಕೇಳಬಹುದು. ಆದರೆ ಈ ಪ್ರವಾಸಗಳಿಂದ ನಾನೋರ್ವ ಆಟಗಾರನಾಗಿ ಹಾಗೂ ಓರ್ವ ವ್ಯಕ್ತಿಯಾಗಿ ಸಾಕಷ್ಟು ಬೆಳೆದಿದ್ದೇನೆ’ ಎಂದು ಸ್ಟಾಲಿನ್‌ ಆತ್ಮವಿಶ್ವಾಸದಿಂದ ಹೇಳಿದರು.

ದೊಡ್ಡ ಪಂದ್ಯಾವಳಿಯ ಒತ್ತಡ ತಂಡದ ಮೇಲಿರಬೇಕಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್‌, “ಒತ್ತಡ ಎನ್ನುವುದು ಬದುಕಿನ ಅವಿಭಾಜ್ಯ ಅಂಗ. ಇದು ದೊಡ್ಡ ಟೂರ್ನಿಯಾದ್ದರಿಂದ ನಮ್ಮೆಲ್ಲರ ಮೇಲೂ ಒತ್ತಡ ಇದ್ದೇ ಇದೆ. ಆದರೆ ಇದು ಉತ್ತಮ ರೀತಿಯ ಒತ್ತಡ. ಆ್ಯತ್ಲೀಟ್‌ಗಳಾಗಿ ನಾವು ಇದನ್ನೆಲ್ಲ ನಿಭಾಯಿಸುವುದು ಮುಖ್ಯ’ ಎಂದರು.

“ಉತ್ತಮ ರೀತಿಯ ಒತ್ತಡ’ವನ್ನು ವ್ಯಾಖ್ಯಾನಿಸಿದ ಸ್ಟಾಲಿನ್‌, “ಇದರಿಂದ ನಮಗೆ ಆಗುವ ಲಾಭ ಅಧಿಕ. ಯಾವ ಒತ್ತಡ ನಮ್ಮಿಂದ ಉತ್ತಮ ಹಾಗೂ ಸಾಮರ್ಥ್ಯಕ್ಕೂ ಮಿಗಿಲಾದ ಸಾಧನೆಯನ್ನು ಹೊರಗೆಡವುತ್ತದೋ ಅದೇ ಉತ್ತಮ ರೀತಿಯ ಒತ್ತಡ’ ಎಂದರು.
 
“12ನೇ ಆಟಗಾರರ ಪ್ರೋತ್ಸಾಹವಿರಲಿ’
“ಭಾರತದ ಫ‌ುಟ್‌ಬಾಲ್‌ ಪಾಲಿಗೆ ಇದೊಂದು ಚಾರಿತ್ರಿಕ ಗಳಿಗೆ. ನಮಗೆ 12ನೇ ಆಟಗಾರರ, ಅಂದರೆ ವೀಕ್ಷಕರ ಸಂಪೂರ್ಣ ಬೆಂಬಲದ ಅಗತ್ಯವಿದೆ. ಮುಖ್ಯವಾಗಿ ಅಮೆರಿಕ ವಿರುದ್ಧ ಮೊದಲ ಪಂದ್ಯವಾಡುವಾಗ ಈ ಬೆಂಬಲ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿರಬೇಕು. ಇದು ಕೇವಲ “ಫಿಫಾ’ದ ವಿಶ್ವಕಪ್‌ ಅಲ್ಲ. ಪ್ರತಿಯೊಬ್ಬ ಭಾರತೀಯನಿಗೂ ಅನ್ವಯಿಸುವ ವಿಶ್ವಕಪ್‌. ಭಾರತೀಯರೆಲ್ಲರೂ ಈ ಪಂದ್ಯಾವಳಿಯ ಭಾಗವಾಗಿದ್ದಾರೆ’ ಎಂದ ಸಂಜೀವ್‌ ಸ್ಟಾಲಿನ್‌, ಬಲಿಷ್ಠವೆಂದೇ ಗುರುತಿಸಲ್ಪಡುವ “ಎ’ ವಿಭಾಗದಲ್ಲಿ ಭಾರತ “ಅಂಡರ್‌ ಡಾಗ್‌’ ಆಗಿದೆ ಎಂದರು.

Advertisement

“ಕೊನೆಯ ಪಂದ್ಯವೆಂದೇ ಆಡಿ’
ಈ ಸಂದರ್ಭದಲ್ಲಿ ಮಾತಾಡಿದ ತಂಡದ ಮತ್ತೂಬ್ಬ ಆಟಗಾರ ಕೋಮಲ್‌ ಥಾಟಲ್‌, “ನಾವು ಎಲ್ಲ ವಿಭಾಗಗಳಲ್ಲೂ ಸುಧಾರಣೆಗೊಂಡಿದ್ದೇವೆ. ಈ ಪ್ರವಾಸಗಳಿಂದ ವಿಶ್ವದ ದೊಡ್ಡ ತಂಡಗಳನ್ನೆದುರಿಸುವ ಆತ್ಮವಿಶ್ವಾಸ ಮೂಡಿದೆ. ನನ್ನ ಡ್ರಿಬ್ಲಿಂಗ್‌ ಹಾಗೂ ಪಾಸಿಂಗ್‌ನಲ್ಲಿ ಪ್ರಗತಿ ಕಂಡುಬಂದಿದೆ’ ಎಂದರು.

“ಎಲ್ಲ ಪಂದ್ಯವನ್ನೂ ಆನಂದಿಸಿ, ಆದರೆ ಒಮ್ಮೆ ಒಂದು ಪಂದ್ಯದ ಮೇಲಷ್ಟೇ ಗಮನವಿರಲಿ. ಇದು ನಿಮ್ಮ ಕೊನೆಯ ಫ‌ುಟ್‌ಬಾಲ್‌ ಪಂದ್ಯ ಎಂದು ಭಾವಿಸಿಕೊಂಡು ಆಡಿ. ನೂರು ಪ್ರತಿಶತ ಸಾಮರ್ಥ್ಯ ತೋರಿಸಿ ಎಂಬುದು ನಮ್ಮ ಕೋಚ್‌ ನೀಡಿದ ಸಲಹೆ. ಇದನ್ನು ನಾವು ಪಾಲಿಸಬೇಕಿದೆ’ ಎಂದು ಥಾಟಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next