Advertisement

ತೋರಣಗಟ್ಟೆ ವಯೋವೃದ್ಧರ ಧರಣಿ

12:47 PM May 21, 2017 | Team Udayavani |

ಜಗಳೂರು: ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನದ ಆದೇಶವನ್ನು ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ತೋರಣಗಟ್ಟೆ ಗ್ರಾಮದ ವಯೋ ವೃದ್ಧರು ಇಲ್ಲಿನ ತಾಲೂಕು ಕಚೇರಿಯ ಮುಂದೆ ಶನಿವಾರ ಧರಣಿ ನಡೆಸಿದರು. 

Advertisement

ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಯೋವೃದ್ಧರು, ಕೂಡಲೇ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿದರು. ಪ್ರತಿದಿನ ಕಚೇರಿಗೆ ಬಂದು ವೇತನದ ಬಗ್ಗೆ ವಿಚಾರಿಸುವುದೇ ಆಗಿದೆ. ಆದರೆ ಪುನಃ ಅರ್ಜಿ ನೀಡಿ ಎಂದು ವಿಷಯ ನಿರ್ವಾಹಕರು ಸಬೂಬು ಹೇಳುತ್ತಿದ್ದಾರೆ.

ಈ ಹಿಂದೆ ಸರ್ಕಾರ ನೀಡಿದ ಆದೇಶಕ್ಕೆ ಬೆಲೆ ಇಲ್ಲವೇ ಎಂದು ಧರಣಿ ನಿರತರು ಪ್ರಶ್ನಿಸಿದರು. ವಯೋವೃದ್ಧರಾದ ನಮಗೆ ಮತ್ತೂಮ್ಮೆ ಅರ್ಜಿ ಹಾಕಲು ಕಷ್ಟವಾಗುತ್ತದೆ. ವೇತನ ಸ್ಥಗಿತವಾಗಿರುವುದರಿಂದ ಅದಕ್ಕೆ ತಗಲುವ ವೆಚ್ಚ ಪಾವತಿಸುವ ಶಕ್ತಿ ನಮಗಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. 

ಧರಣಿಯ ನೇತೃತ್ವ ವಹಿಸಿದ್ದ ಮುಖಂಡ ಹನುಮಂತಪ್ಪ ಮಾತನಾಡಿ, ಗ್ರಾಮದಲ್ಲಿನ ವೇತನ ಪಡೆಯುತ್ತಿದ್ದ 120 ಮಂದಿ ಅರ್ಹ ಫಲಾನುಭವಿಗಳು ಆಧಾರ ಸಹಿತ ಎಲ್ಲಾ ದಾಖಲೆಗಳನ್ನು ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳಿಗೆ ನೀಡಿದ್ದಾರೆ. ಆ ದಾಖಲೆಗಳು ಕಣ್ಮರೆಯಾಗಿವೆ ಎಂದು ಆರೋಪಿಸಿದರು. 

ಪದ್ಧತಿಯ ಪ್ರಕಾರ ಪುನಃ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿಸಲಾಗಿದೆ. ಈಗ ಕಚೇರಿಯಲ್ಲಿ ಕೇಳಿದರೇ ತಿರಸ್ಕೃತಗೊಂಡಿದೆ. ಹೊಸದಾಗಿ ಅರ್ಜಿ ಹಾಕುವಂತೆ ಹೇಳುತ್ತಾರೆ. ಏಕೆ ಹೀಗೆ ಹೇಳುತ್ತಾರೆಂಬುದು ಗೊತ್ತಾಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿಂದ ವೇತನ ಸ್ಥಗಿತಗೊಂಡಿರುವುದರಿಂದ ವೃದ್ಧರ ಸಂಕಷ್ಟಕ್ಕಿಡಾಗಿದ್ದಾರೆ.

Advertisement

ಇದು ಸಂಬಂಧಪಟ್ಟ ವಿಷಯ ನಿರ್ವಾಹಕರ ಬೇಜವಾಬ್ದಾರಿ ತನ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಳೆ ಆದೇಶಕ್ಕೆ ವೇತನ ಮಂಜೂರು ಮಾಡಬೇಕು. ಆಧಾರ ಲಿಂಕ್‌ ಮತ್ತು ಖಾತೆ ಸಂಖ್ಯೆಯನ್ನು ಈ ಕೂಡಲೇ ಲಿಂಕ್‌ ಮಾಡಬೇಕು. ಇನ್ನೇರಡು ದಿನಗಳಲ್ಲಿ ಈ ಬೇಡಿಕೆಗಳು ಈಡೇರಬೇಕು.

ಇಲ್ಲವಾದರೆ ವೃದ್ಧರ ಕರೆ ತಂದು ಅನಿರ್ದಿಷ್ಟಾವಧಿಯವರೆಗೆ ಉಗ್ರಾ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಧರಣಿ ನಿರತರ ಮನವಿ ಆಲಿಸಿದ ತಹಶೀಲ್ದಾರ್‌ ಶ್ರೀಧರಮೂರ್ತಿ ಮಾತನಾಡಿ, ಇಷ್ಟೊಂದು ಮಂದಿಯ ವೇತನ ಸ್ಥಗಿತವಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. 

ಸಂಬಂಧಪಟ್ಟ ಅಧಿಕಾರಿ ಮತ್ತು ವಿಷಯ ನಿರ್ವಾಹಕರನ್ನು ಕರೆಯಿಸಿ ಕೂಡಲೇ ವೇತನ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುವುದು ಎಂದು  ಭರವಸೆ ನೀಡಿದರು. ಹಿರಿಯರಾದ ಕಾಟಪ್ಪ, ದೊಡ್ಡಪ್ಪ, ಬಡಪ್ಪ, ಕರಡಿ ತಿಪ್ಪಯ್ಯ, ಚಳ್ಳಕೆರೆ ಈರಪ್ಪ, ಬಾಲಪ್ಪ, ಬಡಪ್ಪ, ಸಣ್ಣ ಬಸಪ್ಪ, ನಾಗಮ್ಮ, ಬಡಮ್ಮ, ಸೂರಮ್ಮ, ಮರಿಯಮ್ಮ, ಜಯ್ಯಮ್ಮ  ಸೇರಿದಂತೆ ಮತ್ತಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next