ಹನೋಯ್: ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಗತ್ತಿನ ಬಹುತೇಕ ದೇಶಗಳು ಲಾಕ್ ಡೌನ್ ಗೆ ಮೊರೆ ಹೋಗಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಲಾಕ್ ಡೌನ್ ಮೂಲಕ ಸೋಂಕಿತರ ಸಂಖ್ಯೆ ಇಳಿಮುಖ ಮಾಡಲು ಹೋರಾಡುತ್ತಿದೆ. ಏತನ್ಮಧ್ಯೆ ಚೀನಾದ ನೆರೆಯ ಪುಟ್ಟ ರಾಷ್ಟ್ರ ವಿಯೆಟ್ನಾಂ ಕೋವಿಡ್ 19 ಸೋಂಕು ಹರಡುವುದನ್ನು ತಡೆಟ್ಟುವಲ್ಲಿ ಯಶಸ್ವಿಯಾಗಿದ್ದು ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದರಿಂದ ನಿರ್ಬಂಧಗಳನ್ನು ಸಡಿಲಿಕೆ ಮಾಡಿರುವುದಾಗಿ ಗುರುವಾರ ತಿಳಿಸಿದೆ.
ದಕ್ಷಿಣ ಆಗ್ನೇಯ ದೇಶಗಳಲ್ಲಿನ ವಿಯೆಟ್ನಾಂನಲ್ಲಿ 268 ಕೋವಿಡ್ 19 ಸೋಂಕಿತರ ಪ್ರಕರಣ ಪತ್ತೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲವಾಗಿತ್ತು. ಅಲ್ಲದೇ ಕೋವಿಡ್ 19 ವೈರಸ್ ವಿಚಾರದಲ್ಲಿ ವಿಯೆಟ್ನಾಂ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಫೆಬ್ರುವರಿ ಆರಂಭದಲ್ಲಿಯೇ ನೆರೆಯ ಚೀನಾ ಹಾಗೂ ವಿದೇಶಿ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದ ಮೊದಲ ದೇಶ ವಿಯೆಟ್ನಾಂ. ಫೆಬ್ರುವರಿ ತಿಂಗಳಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳು ವಿಯೆಟ್ನಾಂನಲ್ಲಿ ಪತ್ತೆಯಾಗಿದ್ದವು. ಕೂಡಲೇ ರಾಜಧಾನಿ ಹನೋಯ್ ನ ಗ್ರಾಮದಲ್ಲಿ ಇರುವ ಹತ್ತು ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಿತ್ತು ಎಂದು ವರದಿ ವಿವರಿಸಿದೆ. ರೋಗಿಗಳು ಯಾರನ್ನೆಲ್ಲಾ ಸಂಪರ್ಕಿಸಿದ್ದರು ಎಂಬುದನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕ್ವಾರಂಟೈನ್ ನಲ್ಲಿ ಇಟ್ಟಿದ್ದರು.
ನಾವು ಪ್ರತಿಯೊಂದು ಮನೆಯ ಬಾಗಿಲನ್ನು ತಟ್ಟಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದೇವು ಎಂದು ನ್ಯೂಯೆನ್ ಟ್ರಿನ್ ಥಾಂಗ್ ಎಎಫ್ ಪಿಗೆ ತಿಳಿಸಿದ್ದಾರೆ. ನಮ್ಮ ಸರ್ಕಾರದ ಕ್ರಮವನ್ನು ನಾವು ಅನುಸರಿಸಿದ್ದೇವೆ. ಕೋವಿಡ್ 19 ವಿರುದ್ಧ ನಾವು ಶತ್ರುವಿನ ವಿರುದ್ಧದ ಹೋರಾಟದಂತೆ ಹೋರಾಡಿರುವುದಾಗಿ ತಿಳಿಸಿದರು.
ವಿಯೆಟ್ನಾಂನ ಜನರು ಕೂಡಾ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಹಕಾರ ನೀಡಿರುವುದರಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಸ್ಟರ್ನ್ ಫೆಸಿಪಿಕ್ ರೀಜನಲ್ ಡೈರೆಕ್ಟರ್ ಟಾಕೇಶಿ ಕಸಾಯ್ ತಿಳಿಸಿದ್ದಾರೆ.
ಎರಡನೇ ಹಂತದಲ್ಲಿ 80 ಸಾವಿರ ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಿತ್ತು. ಇದರಿಂದಾಗಿ ವಿಯೆಟ್ನಾಂನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ಕಸಾಯ್ ಹೇಳಿದರು. ಬಹುತೇಕ ಅಂತಾರಾಷ್ಟ್ರೀಯ ವಿಮಾನಗಳ ಆಗಮನ ಬಂದ್ ಆಗಿತ್ತು. ಏಪ್ರಿಲ್ ಮೊದಲ ವಾರದವರೆಗೆ ವಿಯೆಟ್ನಾಂನಲ್ಲಿ ಭಾಗಶಃ ಲಾಕ್ ಡೌನ್ ಇದ್ದಿತ್ತು ಎಂದು ವರದಿ ತಿಳಿಸಿದೆ.
ಸತತ ಆರು ದಿನಗಳಿಂದ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಬುಧವಾರ ಕೆಲವು ಅಂಗಡಿ, ಸೇವೆಗಳನ್ನು ಪುನರಾರಂಭಿಸಲು ಸರ್ಕಾರ ಸೂಚನೆ ನೀಡಿದೆ. ಗುರುವಾರ ಕೆಲವು ಕೆಫೆಗಳು ಆರಂಭವಾಗಿದ್ದವು ಎಂದು ವರದಿ ಹೇಳಿದೆ.