ಸುರಪುರ: ಹುಣಸಿಹೊಳೆ ಕಣ್ವ ಮಠದ ನಿರ್ಗಮಿತ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥರು ಶನಿವಾರ ಮಠದಲ್ಲಿ ಪ್ರಾಯಶ್ಚಿತಾಂಗ ಹೋಮ ನಡೆಸಿ ಕಾಶಾಂಬರ ವಸ್ತ್ರ ಕಳಚಿ ಗೃಹಸ್ಥಾಶ್ರಮ ಸ್ವೀಕರಿಸಿದರು. ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಅವರು ನೂತನ ಯತಿ ವಿದ್ಯಾಕಣ್ವ ವಿರಾಜ ತೀರ್ಥರಿಗೆ ಕಾಯಿ ಹಸ್ತಾಂತರ ಮಾಡಿದ್ದರು.
ಬಳಿಕ ಶುಕ್ರವಾರ ಧರ್ಮದಂಡ ಹಸ್ತಾಂತರ ಮಾಡಿ, ಪೀಠತ್ಯಾಗ ಮಾಡಿದ್ದರು. ಐದು ವರ್ಷಗಳ ಹಿಂದೆ ಕೊಪ್ಪಳದ ಕೊಪ್ರೇಶ ಆಚಾರ್ಯ, ಕಣ್ವಮಠದ ಉತ್ತರಾಧಿಕಾರವನ್ನು ವೃಂದಾವನಸ್ಥ ವಿದ್ಯಾಭಾಸ್ಕರ ತೀರ್ಥರಿಂದ ವಹಿಸಿಕೊಂಡಿದ್ದರು. ರಾಜ್ಯವೂ ಸೇರಿ ದೇಶದ ವಿವಿಧೆಡೆ ಸಂಚರಿಸಿ ಕಣ್ವ ಸಮಾಜ ಸಂಘಟಿಸಿದ್ದರು. ಆ ಮೂಲಕ ಶುಕ್ಲಯಜುರ್ವೇದ ಧರ್ಮ ಪ್ರಚುರಪಡಿಸಿ ಪ್ರವರ್ಧಮಾನಕ್ಕೆ ತಂದಿದ್ದರು.
ಶ್ರೀಗಳ ವಿರುದ್ಧ ಮಹಿಳೆಯೊಂದಿಗಿನ ಚಾಟಿಂಗ್ ಆರೋಪ ಕೇಳಿ ಬಂದಾಗಿನಿಂದಲೂ ಕಣ್ವ ಮಠದ ಅನುಯಾಯಿಗಳು ಮತ್ತು ಸಮಾಜ ಬಾಂಧವರು ಸೇರಿ ಒಂದು ತಿಂಗಳ ಕಾಲ ನಿರಂತರ ಸಭೆ ನಡೆಸಿ ಪೀಠ ತ್ಯಾಗಕ್ಕೆ ಒತ್ತಾಯಿಸಿದ್ದರು. ಮಠದ ಪೋಷಕರಾದ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕರ ನೇತೃತ್ವದಲ್ಲಿ ಸಭೆ ನಡೆಸಿ, ನೂತನ ಪೀಠಾಧಿ ಕಾರಿಯನ್ನಾಗಿ ಬೆಂಗಳೂರಿನ ರವೀಂದ್ರಚಾರ್ಯ ಜೋಶಿ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮಠದ ನೂತನ ಯತಿಗಳ ಪಟ್ಟಾಭಿಷೇಕ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತ್ತು. ವಿದ್ಯಾವಾರಿಧಿ ತೀರ್ಥರು ಮೂವರು ಮಕ್ಕಳ ವಿದ್ಯಾಭ್ಯಾಸ-ಮದುವೆ ಜವಾಬ್ದಾರಿ ಜೊತೆಗೆ ಪತ್ನಿ ಹಾಗೂ ವೃದ್ಧ ತಾಯಿ ಯೋಗಕ್ಷೇಮ ನೋಡಿಕೊಳ್ಳುವುದು ಸೇರಿ ಕುಟುಂಬದ ಜವಾಬ್ದಾರಿ ನಿರ್ವಹಣೆ ಹಿನ್ನೆಲೆಯಲ್ಲಿ ಗೃಹಸ್ಥಾಶ್ರಮಕ್ಕೆ ಮರುಳುವುದಾಗಿ ತಿಳಿಸಿದ್ದರು.
ಈ ಮೊದಲು ತಾವು ನಡೆಸಿಕೊಂಡು ಹೋಗುತ್ತಿದ್ದ ವೇದ ಪಾಠಶಾಲೆ ಪುನರಾರಂಭಿಸಿ ಮುಂದುವರಿಸಿಕೊಂಡು ಹೋಗುವ ಇಚ್ಛೆ ವ್ಯಕ್ತಪಡಿಸಿದ್ದರು. ವಿದ್ಯಾವಾರಿಧಿ ತೀರ್ಥರು ಶನಿವಾರ ಬೆಳಗ್ಗೆ ಕೃಷ್ಣಾನದಿಗೆ ತೆರಳಿ ದಂಡ ಮತ್ತು ಕಾಶಾಯ ವಸ್ತ್ರ ಕಳಚಿ ನದಿ ಸ್ನಾನ ಮಾಡಿದರು.
ನಂತರ ಮಠದಲ್ಲಿ ಪ್ರಾಯಶ್ಚಿತ್ತಾಂಗ ಹೋಮ ನಡೆಸಿ, ಸನ್ಯಾಸ ದೀಕ್ಷೆ ತ್ಯಾಗ ಮಾಡಿ, ಗೃಹಸ್ಥಾಶ್ರಮ ಸ್ವೀಕರಿಸುವುದರೊಂದಿಗೆ ಮತ್ತೆ ಕೊಪ್ರೇಶ ಆಚಾರ್ಯರಾಗಿ ಪರಿವರ್ತನೆ ಹೊಂದಿದರು. ಸನ್ಯಾಸ ಆಶ್ರಮದಿಂದ ಮರಳಿ ಗೃಹಸ್ಥಾಶ್ರಮಕ್ಕೆ ಮರಳುವ ವಿಧಿ ವಿಧಾನಗಳ ಮೂಲಕ ಕಾಶಾಯ ವಸ್ತ್ರ ಕಳಚಿ ಬಿಳಿ ಪಂಜೆ, ಅಂಗಿ ಧರಿಸಿ ಯಜ್ಞೋಪವೀತ (ಜನಿವಾರ) ಧಾರಣೆ ಮಾಡಿಕೊಂಡರು.