ಹೊಸಪೇಟೆ: ಐತಿಹಾಸಿಕ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಗುರು ಪೂರ್ಣಿಮೆ ಅಂಗವಾಗಿ ಹಂಪಿಯ ವಿದ್ಯಾರಣ್ಯ ಪೀಠಾಧಿಪತಿ ಶ್ರೀಭಾರತಿ ಸ್ವಾಮೀಜಿ ಶ್ರೀವಿರೂಪಾಕ್ಷೇಶ್ವರಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ವೇದವ್ಯಾಸ ಪೂಜೆ ಸಲ್ಲಿಸಿದರು. ಬೆಳಗ್ಗೆ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಸ್ನಾನ, ಸಂಧ್ಯಾವಂದನೆ ಸಲ್ಲಿಸಿದ ವಿದ್ಯಾರಣ್ಯ ಶ್ರೀಭಾರತಿ ಸ್ವಾಮೀಜಿ, ದತ್ತಾತ್ರೇಯ, ವೇದವ್ಯಾಸರು, ಕೃಷ್ಣ ಹಾಗೂ ಶಂಕರಾಚಾರ್ಯ ಅವರಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಚಾತುರ್ಮಾಸ ವ್ರತವನ್ನು ಆರಂಭಿಸಿದರು.
ಆಷಾಢ ಗುರುಪೂರ್ಣಿಮೆಯ ದಿನದಿಂದ ಕಾರ್ತಿಕ ಶುದ್ಧ ಪೂರ್ಣಿಮೆಯವರೆಗಿನ ಚಾತುರ್ಮಾಸ ಅವಧಿಯಲ್ಲಿ ಭಾರತಿ ಶ್ರೀಗಳು ಗಡಿದಾಟಿ ಎಲ್ಲಿಯೂ ಹೋಗದೆ, ಹಂಪಿಯಲ್ಲಿಯೇ ವಾಸ್ತವ್ಯ ಹೂಡಿ, ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ. ಪ್ರತಿನಿತ್ಯವೂ ವಿರೂಪಾಕ್ಷೇಶ್ವರ ಸ್ವಾಮಿಗೆ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಾರೆ. ಚಾತುರ್ಮಾಸದಲ್ಲಿ ಗುರುಪಾದುಕೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿದಿನ ನೂರಾರು ಭಕ್ತರು ಗುರುದರ್ಶನ ಪಡೆಯಲಿದ್ದಾರೆ.
ಈ ಅವಧಿಯಲ್ಲಿ ನಾಗಪಂಚಮಿ, ಗಣೇಶ ಚತುರ್ಥಿ, ನವರಾತ್ರಿ ಹಬ್ಬಗಳನ್ನು ಹಂಪಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅಂತಿಮವಾಗಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ವ್ರತಾಚರಣೆ ಪೂರ್ಣಗೊಳಿಸಿ, ಇತರೆ ಗ್ರಾಮಗಳಿಗೆ ಪುರ ಪ್ರವೇಶ ಮಾಡಲಿದ್ದಾರೆ.
ಚಂದ್ರಗ್ರಹಣ: ಈ ಮಧ್ಯೆ ಶುಕ್ರವಾರ ರಾತ್ರಿ ಚಂದ್ರಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 1.30ಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 3.30ಕ್ಕೆ ಹುಣ್ಣಿಮೆ ಉತ್ಸವ ನಡೆಯಿತು. ನಂತರ ದೇವಸ್ಥಾನ ಗರ್ಭಗುಡಿ ಬಾಗಿಲು ಹಾಕಲಾಯಿತು.
ಪ್ರತಿನಿತ್ಯ ರಾತ್ರಿ 8ರ ವರೆಗೆ ಭಕ್ತರಿಗೆ ವಿರೂಪಾಕ್ಷೇಶ್ವರಸ್ವಾಮಿಯ ದರ್ಶನ ಭಾಗ್ಯವಿರುತ್ತಿತ್ತು. ಆದರೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ಕ್ಕೆ ಬಾಗಿಲು ಹಾಕಲಾಗಿದ್ದು, ಮರುದಿನ ಬೆಳಗ್ಗೆ ದೇವಸ್ಥಾನ ಶುದ್ಧಗೊಳಿಸಿ, ಶ್ರೀಗಳ ನೇತೃತ್ವದಲ್ಲಿ ದೈನಂದಿನ ವಿಶೇಷ ಪೂಜೆಗಳು ನಡೆಯಲಿವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಜೆ.ಎಚ್.ಶ್ರೀನಾಥಶರ್ಮ ತಿಳಿಸಿದರು.