Advertisement

ವಿದ್ಯಾಸಾಲದ ಬಡ್ಡಿ ದರ, ಮರು ಪಾವತಿ ಸೌಲಭ್ಯ ಮತ್ತಿತರ ವಿಚಾರಗಳು

01:05 AM Jun 17, 2019 | Sriram |

ಕೆಲವೊಮ್ಮೆ, ಕೆಲವು ಬ್ಯಾಂಕುಗಳು ಸಾಲದ ಮೊತ್ತದ ಮೇಲೆ ಜೀವವಿಮೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಬಹುದು. ಅದರಿಂದ ಆಕಸ್ಮಿಕ ಮೃತ್ಯು ವೇಳೆ ಬರುವ ವಿಮಾ ಕಂಪೆನಿಯ ದುಡ್ಡು, ಸಾಲವನ್ನು ತೀರಿಸಲು ನೆರವಾದೀತು. ಹಾಗಾಗಿ, ಅತಿ ಕಡಿಮೆ ಗ್ರೂಪ್‌ ವಿಮೆಯಂಥ ವಿಮೆ ಕೊಳ್ಳುವುದು ಉತ್ತಮ.

Advertisement

ಕಳೆದ ವಾರ ಶಿಕ್ಷಣ ಸಾಲ ಪಡೆಯುವ ವಿಧಾನ, ಯಾವ ರೀತಿಯ ಶಿಕ್ಷಣ ಸಾಲಗಳಿವೆ ಎಂದೆಲ್ಲ ನೋಡಿದೆವು. ಈ ವಾರ ಅದನ್ನೇ ಮುಂದುವರಿಸಿ, ಶಿಕ್ಷಣ ಸಾಲದ ಮುಂದಿನ ಹಂತ ಏನೆಂದು ನೋಡೋಣ.

ಮರು ಪಾವತಿ
ಸಾಲದ ಮರು ಪಾವತಿ ಕೋರ್ಸ್‌ ಮುಗಿದ 1 ವರ್ಷಕ್ಕೆ ಅಥವ ಕೆಲಸ ಸಿಕ್ಕ 6 ತಿಂಗಳಿಗೆ – ಇವುಗಳಲ್ಲಿ ಯಾವುದು ಮೊದಲೋ ಆವಾಗ – ಆರಂಭವಾಗುತ್ತದೆ. ಕೋರ್ಸು ಮುಗಿದು ಸಾಲದ ಮರುಪಾವತಿ ಆರಂಭವಾಗುವವರೆಗಿನ ಅವಧಿಯನ್ನು ‘ಮೊರಟೋರಿಯಂ ಅವಧಿ’ ಎನ್ನುತ್ತಾರೆ. ಈ ಅವಧಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸರಕಾರದ ವತಿಯಿಂದ ಸಬ್ಸಿಡಿ ಸಹಾಯ ಸಿಗುತ್ತದೆ.

ಮರುಪಾವತಿ ಆರಂಭವಾದಂದಿನಿಂದ ಮರು ಪಾವತಿಯ ಅವಧಿ ಒಟ್ಟು 10-15 ವರ್ಷಗಳು.

ಈ ನಿಟ್ಟಿನಲ್ಲಿ ಐಬಿಎ ಮಾರ್ಗದರ್ಶಿ ಈ ರೀತಿಯಿದೆ:

Advertisement

•ರೂ. 7.5 ಲಕ್ಷಕ್ಕಿಂತ ಕಡಿಮೆ ಮೊತ್ತದ ಸಾಲಕ್ಕೆ ಮರುಪಾವತಿಯ ಅವಧಿ 10 ವರ್ಷಗಳು

•ರೂ 7.5 ಲಕ್ಷಕ್ಕಿಂತ ಜಾಸ್ತಿ ಅವಧಿಯ ಸಾಲಕ್ಕೆ ಮರುಪಾವತಿಯ ಅವಧಿ 15 ವರ್ಷಗಳು

ಹೆಚ್ಚಿನ ಬ್ಯಾಂಕುಗಳು ಈ ಅವಧಿಗಳನ್ನು ಪಾಲಿಸುತ್ತವೆ.

ಬಡ್ಡಿ ದರ
ವಿದ್ಯಾಸಾಲ ಬಹುತೇಕ Floating Rate ಪದ್ಧತಿಯಲ್ಲೇ ಇದ್ದು ಬೇರೆ ಬೇರೆ ಬ್ಯಾಂಕುಗಳಲ್ಲಿ ಸದ್ಯಕ್ಕೆ ಸುಮಾರು ಶೇ.10ರಷ್ಟು ಇದೆ. (Fixed rate ವಿದ್ಯಾಸಾಲಗಳು ಅಷ್ಟಾಗಿ ಕಾಣಬರುತ್ತಿಲ್ಲ). ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸ ಇರುತ್ತದೆ ಹಾಗೂ ಅದು ಆಗಾಗ ಬದಲಾಗುತ್ತಾ ಇರುತ್ತದೆ. ಈ ಬಗ್ಗೆ ಸ್ಪಷ್ಟವಾಗಿ ಬ್ಯಾಂಕುಗಳಲ್ಲಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.

ಫ್ಲೋಟಿಂಗ್‌ ರೇಟ್ ಪದ್ಧತಿಯಲ್ಲಿ ಸಂದರ್ಭಾನುಸಾರ ಆರ್‌ಬಿಐ ಬಡ್ಡಿದರ ಬದಲಿಸಿದಂತೆಲ್ಲಾ ವಿದ್ಯಾ ಸಾಲದ ಬಡ್ಡಿದರವೂ ಬದಲಾಗಬಹುದು. ಈ ಬಡ್ಡಿದರವನ್ನು ಬ್ಯಾಂಕು ತನ್ನ ಕನಿಷ್ಟ ಬಡ್ಡಿ ದರದ ಮೇಲೆ ಇಂತಿಷ್ಟು ಶೇಕಡಾ ಎಂಬ ಸೂತ್ರದ ಪ್ರಕಾರ ಕಾಲಕಾಲಕ್ಕೆ ನಿರ್ಧರಿಸುತ್ತದೆ. ಉದಾ: ಬೇಸ್‌ ರೇಟ್+1%, ಬೇಸ್‌ ರೇಟ್+2% MCLR+1%, MCLR+2% ಇತ್ಯಾದಿ. ಇಲ್ಲಿ ಸೂತ್ರ ಬದಲಾಗುವುದಿಲ್ಲ ಆದರೆ ಬೇಸ್‌/MCLR/PLR ರೇಟ್ ಬದಲಾದಂತೆ ಅನ್ವಯವಾಗುವ ಬಡ್ಡಿದರ ಆ ಸೂತ್ರದಂತೆ ಬದಲಾಗುತ್ತದೆ. (MCLRರೇಟ್ ಬರುವ ಮೊದಲು ಬೇಸ್‌ ರೇಟ್ ಹಾಗೂ ಅದರ ಮೊದಲು ಪಿಎಲ್ಆರ್‌ ರೇಟ್ ಪದ್ಧತಿ ಜಾರಿಯಲ್ಲಿತ್ತು.)

ಈ ರೀತಿ ಫ್ಲೊಟಿಂಗ್‌ ಪದ್ಧತಿಯಲ್ಲಿ ಬಡ್ಡಿದರ ಬದಲಾಗುತ್ತಾ ಇರುತ್ತದೆ. ಸಾಲ ಪಡಕೊಳ್ಳುವಾಗ ಇದ್ದ ಬಡ್ದಿದರ ಆ ಮೇಲೆಯೂ ಹಾಗೆಯೇ ಇರುವುದಿಲ್ಲ. ವಿದ್ಯಾಭ್ಯಾಸ ಮುಗಿದು, ಮರುಪಾವತಿ ಆರಂಭವಾದರೂ ಸಾಲ ಸಂಪೂರ್ಣವಾಗಿ ತೀರುವವರೆಗೂ ಬಡ್ಡಿದರ ಬದಲಾಗುತ್ತಲೇ ಇರುತ್ತದೆ ಹಾಗೂ ಕಟ್ಟುವ ಇಎಂಐ ಮೊತ್ತ ಕೂಡಾ ಹೆಚ್ಚುಕಡಿಮೆಯಾಗುತ್ತಲೇ ಇರುತ್ತದೆ. ಈ ವಿಚಾರವನ್ನು ಕೂಡಾ ಸಾಲ ಪಡೆಯುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕು.

ಬಡ್ಡಿದರದಲ್ಲಿ ರಿಯಾಯಿತಿ
ಪ್ರೀಮಿಯರ್‌ ವಿದ್ಯಾ ಸಂಸ್ಥೆಗಳಲ್ಲಿ ಬೇರೆಡೆಗಳಿಗಿಂತ ಬಡ್ಡಿ ದರಗಳು ತುಸು ಕಡಿಮೆಯಿರುತ್ತವೆ. ಉತ್ತಮ ಹೆಸರುಳ್ಳ ವಿದ್ಯಾ ಸಂಸ್ಥೆಗಳಲ್ಲಿ ನೌಕರಿ ಅವಕಾಶ ಉತ್ತಮವಿರುವ ಕಾರಣ ಬ್ಯಾಂಕುಗಳು ಅಲ್ಲಿ ಸ್ವಲ್ಪ ರಿಯಾಯತಿಯನ್ನು ತೋರಿಸುತ್ತವೆ.

ಉದಾಹರಣೆಗೆ, ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಹಲವಾರು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ತನ್ನ ‘ಸ್ಕಾಲರ್‌’ ಸ್ಕೀಮಿನಡಿಯಲ್ಲಿ ಅತ್ಯಾಕರ್ಷಕ ಮಟ್ಟದಲ್ಲಿ ರಿಯಾಯಿತಿ ಬಡ್ಡಿದರದಲ್ಲಿ ವಿದ್ಯಾಸಾಲ ನೀಡುತ್ತಿದೆ. ಓರಿಯೆಂಟಲ್ ಬ್ಯಾಂಕ್‌ ಆಫ್ ಕಾಮರ್ಸ್‌ ಐಐಎಂ, ಐಐಟಿಗಳಲ್ಲಿ ಇತರೆಡೆಗಳಿಗಿಂತ ಸುಮಾರು 2ಶೇ.5ದಷ್ಟು ಕಡಿಮೆ ದರದಲ್ಲಿ ವಿದ್ಯಾ ಸಾಲ ನೀಡುತ್ತದೆ. ಪಂಜಾಬ್‌ ನ್ಯಾಶನಲ್ ಬ್ಯಾಂಕ್‌ ಕೂಡಾ ಇದೇ ರೀತಿಯ ರಿಯಾಯಿತಿಯನ್ನು ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೀಡುತ್ತದೆ. ಇತರ ಬ್ಯಾಂಕುಗಳಲ್ಲೂ ಇದೇ ರೀತಿಯ ರಿಯಾಯಿತಿಗಳು ಇವೆ. ಈ ಬಗ್ಗೆ ಮಾಹಿತಿ ಕ್ಯಾಂಪಸ್‌ಗಳಲ್ಲಿ ಸಿಗುತ್ತವೆ.

ಮಹಿಳೆಯರಿಗೂ ಕೂಡಾ ಪ್ರತ್ಯೇಕವಾದ ಬಡ್ಡಿದರದ ರಿಯಾಯತಿಯನ್ನು ಬ್ಯಾಂಕುಗಳು ನೀಡುತ್ತವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಶೇ.0.5 ರಿಯಾಯಿತಿ ಬಡ್ಡಿದರದಲ್ಲಿ ಸಿಗಬಹುದು. ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರದಿಂದ ಈ ಹೆಜ್ಜೆ.

ಹಿಂದುಳಿದ ವರ್ಗದ (ಎಸ್ಸಿ /ಎಸ್ಟಿ) ವಿದ್ಯಾರ್ಥಿಗಳಿಗೂ ಸುಮಾರು ಶೇ.0.25-ಶೇ.0.5 ಕಡಿಮೆ ದರದಲ್ಲಿ ವಿದ್ಯಾ ಸಾಲ ದೊರಕುತ್ತದೆ.

ಅದಲ್ಲದೆ ಅಂಗವಿಕಲರಿಗೆ ಕೂಡಾ ಸುಮಾರು ಶೇ.0.5 ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕುತ್ತದೆ.

CSIS ಸಬ್ಸಿಡಿ ಯೋಜನೆ
Central Scheme of Interest Subsidyಯೋಜನೆಯ ಅಡಿಯಲ್ಲಿ ಎಪ್ರಿಲ್ 1, 2009 ರಿಂದ ಅನ್ವಯವಾಗುವಂತೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS) ಕೇವಲ ಮೊರಟೊರಿಯಂ ಅವಧಿಯ ಬಡ್ಡಿಯನ್ನು ಮಾತ್ರ ಸರಕಾರವು ಭರಿಸುತ್ತದೆ. ಇದು ಕೌಟುಂಬಿಕ ವಾರ್ಷಿಕ ಆದಾಯ ರೂ. 4.5 ಲಕ್ಷದ ಒಳಗಿನವರಿಗೆ ಹಾಗೂ ರೂ. 7.5 ಲಕ್ಷ ಸಾಲದ ಮೊತ್ತದ ಮಿತಿಯಲ್ಲಿ ಮಾತ್ರ ಲಭ್ಯ. ಇದು ಕೆಲ ನಿಗದಿತ ತಾಂತ್ರಿಕ/ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಲಭ್ಯ. ಈ ಬಗ್ಗೆ ವಿಸ್ತೃತ ವಿವರಗಳನ್ನು ಬ್ಯಾಂಕಿನಲ್ಲಿ ಕೇಳಿ ತಿಳಿಯಿರಿ.

ಬಡ್ಡಿ ಲೆಕ್ಕ ಹೇಗೆ?
ಬಡ್ಡಿ ದರವನ್ನು ಕೋರ್ಸು/ಮಹಿಳೆ/ಎಸ್‌ಸಿ/ಎಸ್‌ಟಿ/ಅಂಗವಿಕಲ ಇತ್ಯಾದಿ ವಿಚಾರಗಳನ್ನು ಅನುಸರಿಸಿ ಇಂತಿಷ್ಟು ಎಂದು ನಿಗದಿ ಪಡಿಸಿದ ಮೇಲೆ ‘MCLR+ಇಂತಿಷ್ಟು’ ಎಂಬಲ್ಲಿಗೆ ಅಂತಿಮಗೊಳಿಸುತ್ತಾರೆ. ಸಾಲದ ಅವಧಿಯ ಉದ್ದಕ್ಕೂ ಇದೇ ಸೂತ್ರ ಸಾಲಗಾರನನ್ನು ಹಿಂಬಾಲಿಸುತ್ತದೆ. MCLR ರೇಟ್ ಬದಲಾದಂತೆ ಬಡ್ಡಿದರ ಬದಲಾದರೂ ‘ಪ್ಲಸ್‌ ಇಂತಿಷ್ಟು’ ಎನ್ನುವ ಸೂತ್ರ ಬದಲಾಗುವುದಿಲ್ಲ.

ಸಾಲದ ಮೇಲೆ ಬಡ್ಡಿಯನ್ನು ಎರಡು ಹಂತದಲ್ಲಿ ವಿದಿಸಲಾಗುತ್ತದೆ:

1.ಮೊರಟೋರಿಯಂ ಅವಧಿ
ವಿದ್ಯಾ ಸಾಲವನ್ನು ಬ್ಯಾಂಕುಗಳು ಏಕಗಂಟಿನಲ್ಲಿ ನೀಡುವುದಿಲ್ಲ. ಫೀಸ್‌ ಮತ್ತಿತರ ಅಗತ್ಯ ಬಂದಂತೆ ಸೂಕ್ತ ಪುರಾವೆಯ ಎದುರು ಕಂತು ಕಂತಾಗಿ ಶಿಕ್ಷಣದ ಅವಧಿಯುದ್ದಕ್ಕೂ ಬ್ಯಾಂಕು ಸಾಲವನ್ನು ನೀಡುತ್ತ ಬರುತ್ತದೆ. ಶಿಕ್ಷಣ ಮುಗಿದು 1 ವರ್ಷದ ನಂತರ ಅಥವಾ ಕೆಲಸ ಸಿಕ್ಕಿ 6 ತಿಂಗಳ ಬಳಿಕ ಸಾಲದ ಮರುಪಾವತಿ ಆರಂಭವಾಗುತ್ತದೆ. ಅಲ್ಲಿಯವರೆಗಿನ ಅವಧಿಯನ್ನು ಮೊರಟೋರಿಯಂ ಅವಧಿ ಅನ್ನುತ್ತಾರೆ. ಆ ಬಳಿಕವೇ ಸಾಲದ ಮರುಪಾವತಿ ಆರಂಭವಾಗುತ್ತದೆ.

ಅಂತಹ ಮೊರಟೋರಿಯಂ ಅವಧಿಯಲ್ಲಿ ಸಾಲದ ಮೇಲೆ ಸಿಂಪಲ್ ಇಂಟರೆಸ್ಟ್‌ ಅಥವಾ ಸರಳ ಬಡ್ಡಿ ಅನ್ವಯವಾಗುತ್ತದೆ. ಅಂದರೆ ಕಾಲಕಾಲಕ್ಕೆ ಅನ್ವಯವಾಗುವ ಬಡ್ಡಿದರವನ್ನು ನೀಡಿದ ಸಾಲ ಮೊತ್ತದ ಮೇಲೆ ಸೇರಿಸುತ್ತಾ ಹೋಗುತ್ತಾರೆ. ಇದರಲ್ಲಿ ಬಡ್ಡಿಯನ್ನು ಕಾಲಕಾಲಕ್ಕೆ ಚಕ್ರೀಕರಣ ಅಥವಾ ಕಾಂಪೌಂಡಿಂಗ್‌ ಮಾಡುವುದಿಲ್ಲ. ಈ ರೀತಿಯ ಸರಳ ಬಡ್ಡಿ ಕೂಡಾ ವಿದ್ಯಾ ಸಾಲದ ಹಿರಿಮೆಗಳಲ್ಲಿ ಒಂದು.

ಸಾಲದ ಅವಧಿಯಲ್ಲಿ ಬಡ್ಡಿ ಕಟ್ಟುವ ಅಗತ್ಯವಿಲ್ಲ. ಆದರೆ ಬಡ್ಡಿ ಇಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೂ ಜನಸಾಮಾನ್ಯರು ವಿದ್ಯಾಭ್ಯಾಸದ ಅವಧಿಯಲ್ಲಿ ಬಡ್ಡಿಯೇ ಇಲ್ಲ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಬಡ್ಡಿ ಇದ್ದರೂ ಅದು ಎಷ್ಟಾಗುತ್ತದೆ ಎನ್ನುವ ಕಲ್ಪನೆ ಇರುವುದಿಲ್ಲ. ವಿಷಯ ತಿಳಿದಾಗ ಮೋಸ ಮಾಡುತ್ತಾರೆ ಎಂದು ಬ್ಯಾಂಕಿನವರನ್ನು ಸಿಕ್ಕಾಬಟ್ಟೆ ಬೈಯುತ್ತಾರೆ. ಸಾಲದ ಅವಧಿಯಲ್ಲಿ ಬಡ್ಡಿ ಇದೆ ಮತ್ತು ಆ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವ ಆಯ್ಕೆಯೂ ಸಾಲಗಾರನಿಗೆ ಇರುತ್ತದೆ. ಅಷ್ಟೇ ಏಕೆ, ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವವರಿಗೆ ಬ್ಯಾಂಕು ಶೇ.1 ರಿಯಾಯಿತಿಯನ್ನೂ ನೀಡುತ್ತದೆ. ಆ ರೀತಿ ಬಡ್ಡಿಯನ್ನು ಕಟ್ಟುತ್ತಾ ಹೋಗುವವರಿಗೆ ಕಡಿಮೆ ಬಡ್ಡಿಯ ಲಾಭವೂ ದೊರಕುತ್ತದೆ, ಸಾಲದ ಮೊತ್ತ ಅನವಶ್ಯಕ ವೃದ್ಧಿಯಾಗುವ ಭಯವೂ ಇರುವುದಿಲ್ಲ. ಕಾಲಕಾಲಕ್ಕೆ ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವವರಿಗೆ ಸಾಲವು ಮೂಲ ಮೊತ್ತದಲ್ಲಿಯೇ ಉಳಿಯುತ್ತದೆ.

2.ಮರುಪಾವತಿಯ ಅವಧಿ
ಒಮ್ಮೆ ಈ ರೀತಿ ಪೇರಿಸಲ್ಪಟ್ಟ ಸಾಲದ ಮೊತ್ತವನ್ನು ಮೊರಟೋರಿಯಂ ಅವಧಿ ಮುಗಿದಾಕ್ಷಣ ಆ ಸಮಯಕ್ಕೆ ಅನ್ವಯವಾಗುವ ಬಡ್ಡಿದರದಲ್ಲಿ ಇ.ಎಂ.ಐ ಆಗಿ ಪರಿವರ್ತಿಸುತ್ತಾರೆ. ಈಗ ಮಾಸಿಕ ಮರುಪಾವತಿ ಆರಂಭ.

ಇ.ಎಂ.ಐ ಎಂದರೆ ಈಕ್ವೇಟೆಡ್‌ ಮಂತ್ಲಿ ಇನ್‌ಸ್ಟಾಲ್ಮೆಂಟ್. ಅಂದರೆ ಇಡೀ ಸಾಲದ ಮೊತ್ತವನ್ನು ಮತ್ತು ಅದರ ಮೇಲೆ ಬರುವ ಪೂರ್ತಿ ಅವಧಿಯ ಬಡ್ಡಿಯನ್ನು ಒಟ್ಟು ಸೇರಿಸಿ ಅದನ್ನು ಸಮಾನ ಮಾಸಿಕ ಕಂತುಗಳಾಗಿ ಭಾಗಿಸುವುದು. ಇದರ ಗಣಿತಸೂತ್ರ ತುಸು ಕಠಿನವಾಗಿದೆ ಅಲ್ಲದೆ ಯಾವುದೇ ಆನ್‌ಲೈನ್‌ ಕ್ಯಾಲ್ಕುಲೇಟರ್‌ ಇದನ್ನು ಸುಲಭವಾಗಿ ಮಾಡಿಕೊಡುತ್ತದೆ. ಮೂಲ ಮೊತ್ತ, ಬಡ್ಡಿ ದರ, ಅವಧಿ ನೀಡಿದರೆ ಮಾಸಿಕ ಕಂತುಕಟ್ಟುವ ಕಾರಣ ಪ್ರತಿ ತಿಂಗಳೂ ಸಾಲದ ಮೊತ್ತ ಕಡಿಮೆಯಾಗುವ ನೆಲೆಯಲ್ಲಿ (Monthly Reducing Balance) ಅದು ಇಎಂಐ ಕಂತುಗಳನ್ನು ಲೆಕ್ಕ ಹಾಕಿ ಕೊಡುತ್ತದೆ.

ಇಎಂಐ ಲೆಕ್ಕಾಚಾರ ಒಂದು ಸಿದ್ಧ ಮಾದರಿ ಹಾಗೂ ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುವುದಿಲ್ಲ. ಯಾರು ಬೇಕಾದರೂ ಈ ಲೆಕ್ಕವನ್ನು ಪರಿಶೀಲಿಸಿ ನೋಡಬಹುದು; ಎಲ್ಲರಿಗೂ ಒಂದೇ ಅಂಕಿ/ಅಂಶ ದೊರಕುತ್ತದೆ. ಹಲವರು ಅನವಶ್ಯಕ ಬ್ಯಾಂಕಿನವರ ಮೇಲೆ ಇಎಂಐ ಸರಿ ಇಲ್ಲ ಎಂಬ ಆರೋಪ ಹೊರಿಸುತ್ತಾರೆ. ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುವುದು ಬಡ್ಡಿದರ ಮಾತ್ರ.

ಮೊದಲೇ ತಿಳಿಸಿದಂತೆ ವಿದ್ಯಾ ಸಾಲವು ಬಹುತೇಕ ಫ್ಲೋಟಿಂಗ್‌ ರೇಟ್ ಪದ್ಧತಿಯಲ್ಲಿ ನಡೆಯುತ್ತದೆ. ಆ ಕಾರಣಕ್ಕಾಗಿ ಬಡ್ಡಿದರವು ಆಗಾಗ್ಗೆ ಏರಿಳಿಯುತ್ತಾ ಇರುತ್ತದೆ. ಇದು ರಿಸರ್ವ್‌ ಬ್ಯಾಂಕಿನ ಹಣಕಾಸು ನೀತಿಸೂತ್ರಗಳನ್ನು ಆಧರಿಸಿ ನಡೆಯುವ ವಿದ್ಯಮಾನ. ಹಾಗಾಗಿ ವಿದ್ಯಾ ಸಾಲದ ಅವಧಿಯುದ್ದಕ್ಕೂ ಬಡ್ಡಿದರ ಹಾಗೂ ತತ್ಪರಿಣಾಮವಾಗಿ ಇಎಂಐ ಕಂತುಗಳ ಮೊತ್ತವೂ ಬದಲಾಗುತ್ತಾ ಇರುತ್ತದೆ. ಗ್ರಾಹಕರು ಇದನ್ನು ಸಂಪೂರ್ಣವಾಗಿ ಮನನಮಾಡಿಕೊಳ್ಳುವುದು ಒಳ್ಳೆಯದು.

ಇಲ್ಲಿ ನಾವು ಇಎಂಐ ಕಂತು ಸಮಾನವಾಗಿ ಇರುವುದನ್ನು ಗಮನಿಸಬಹುದು. ಆದರೆ ಪ್ರತೀ ಇಎಂಐ ಕಂತಿನಲ್ಲಿ ಅಸಲು ಮತ್ತು ಬಡ್ಡಿಯ ಭಾಗ ಏರಿಳಿಯುವುದನ್ನು ಕಾಣಬಹುದು. ಮೊದ ಮೊದಲು ಬಡ್ಡಿಯ ಭಾಗ ಜಾಸ್ತಿಯಿದ್ದರೆ ಅಸಲು ಭಾಗ ಕಡಿಮೆಯಿರುತ್ತದೆ ಆದರೆ ಕ್ರಮೇಣ ಅಸಲು ಭಾಗ ಜಾಸ್ತಿಯಾಗಿ ಬಡ್ಡಿಯ ಭಾಗ ಕಡಿಮೆಯಾಗುತ್ತದೆ. ಪ್ರತಿ ಮಾಸವೂ ಸಮಾನವಾದ ಪಾವತಿಯ ಹೊರೆ ಬರುವಂತೆ ಈ ಪದ್ಧತಿಯನ್ನು ಗ್ರಾಹಕರ ಹಿತದೃಷ್ಟಿಯಿಂದ ನಿಯೋಜಿಸಲಾಗಿದೆ.

ಪ್ರತಿ ವರ್ಷವೂ ಬ್ಯಾಂಕು ತನ್ನ ಸಾಲಗಾರರಿಗೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಪ್ರತ್ಯೇಕವಾಗಿ ತೋರಿಸಿ ತನ್ನ ಸ್ಟೇಟ್ಮೆಂಟ್ ನೀಡುತ್ತದೆ. ಇದು ಸೂಕ್ತ ರೀತಿಯಲ್ಲಿ ಆದಾಯ ತೆರಿಗೆಯ ಲಾಭ ಪಡೆಯುವುದರಲ್ಲಿ ಸಹಕಾರಿಯಾಗುತ್ತದೆ.

ಪೆನಾಲ್ಟಿ ದಂಡ
ಅಕಸ್ಮಾತ್ತಾಗಿ ಇಎಂಐ ಕಟ್ಟುವುದನ್ನು ಬಿಟ್ಟು ಬಿಟ್ಟರೆ ಅಂತಹ ತಪ್ಪಿಗೆ ತಪ್ಪುದಂಡ ಅಥವಾ ಪೆನಾಲ್ಟಿಯನ್ನು ಬ್ಯಾಂಕು ವಿಧಿಸುತ್ತದೆ. ಈ ತಪ್ಪು ದಂಡ ಹೆಚ್ಚಾಗಿ ವಿಪರೀತವಾಗಿರುತ್ತದೆ. ಇದರ ಬಗ್ಗೆಯೂ ಬ್ಯಾಂಕಿನಲ್ಲಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು. ಆದುದರಿಂದ ಒಮ್ಮೆ ಇಎಂಐ ಆರಂಭವಾದರೆ ಡೇಟ್ ತಪ್ಪದೆ ಸಾಲವನ್ನು ಮರುಪಾವತಿ ಮಾಡುತ್ತಾ ಇರುವುದು ಬಹಳ ಮುಖ್ಯವಾಗಿದೆ.

ಪ್ರಾಸೆಸ್ಸಿಂಗ್‌ ಫೀ
ಐಬಿಎ ಅಡಿಯಲ್ಲಿ ವ್ಯವಹಾರ ನಡೆಸುವ ಬಹುತೇಕ ಬ್ಯಾಂಕುಗಳು ವಿದ್ಯಾ ಸಾಲಕ್ಕೆ ಪ್ರಾಸೆಸ್ಸಿಂಗ್‌ ಫೀಸ್‌ ಅಥವಾ ಸಂಸ್ಕರಣಾ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ಇನ್ನು ಕೆಲವರು ಈ ಶುಲ್ಕ ವಸೂಲಿ ಮಾಡುತ್ತಾರೆ. ಪಂಜಾಬ್‌ ನ್ಯಾಶನಲ್ ಬ್ಯಾಂಕ್‌ ಸುಮಾರು ರೂ. 270-500 ರಷ್ಟು ಶುಲ್ಕ ವಿಧಿಸಿದರೆ ಅವನ್ಸೆಯಂತಹ ಸಾಲ ಸಂಸ್ಥೆ ಸಾಲ ಮೊತ್ತದ ಶೇ.1-2ದಷ್ಟು ಸಂಸ್ಕರಣಾ ಶುಲ್ಕ ವಸೂಲಿ ಮಾಡುತ್ತದೆ. ವಿದ್ಯಾ ಸಾಲ ಪಡೆವ ಮೊದಲು ಬ್ಯಾಂಕುಗಳಲ್ಲಿ ಈ ಬಗ್ಗೆಯೂ ಸ್ಪಷ್ಟವಾಗಿ ಕೇಳಿ ತಿಳಿದುಕೊಳ್ಳಬೇಕು.

ವಿದೇಶಿ ವಿದ್ಯಾಸಾಲಕ್ಕೆ ಮಾತ್ರ ಡೆಪಾಸಿಟ್ ರೂಪದಲ್ಲಿ ಪ್ರಾಸೆಸ್ಸಿಂಗ್‌ ಶುಲ್ಕ ವಿಧಿಸಲು ಐಬಿಎ ಅನುಮತಿ ನೀಡಿದೆ. ಬ್ಯಾಂಕುಗಳು ಹೆಚ್ಚಾಗಿ ಡೆಪಾಸಿಟ್ ಪಡೆದು ಕೋರ್ಸಿಗೆ ಸೇರಿದ ಬಳಿಕ ಅದನ್ನು ವಾಪಾಸು ನೀಡುತ್ತದೆ. ಸ್ಟೇಟ್ ಬ್ಯಾಂಕ್‌ ರೂ. 5000ದ ಡೆಪಾಸಿಟ್ ವಿದೇಶಿ ಸಾಲಕ್ಕೆ ವಿಧಿಸಿದರೆ ಕಾರ್ಪೋರೇಶನ್‌ ಬ್ಯಾಂಕು ರೂ. 2000 ಡೆಪಾಸಿಟ್ ಆಗಿ ಪಡಕೊಳ್ಳುತ್ತದೆ.

ಸಾಲದ ಮೇಲೆ ವಿಮೆ
ಕೆಲವೊಮ್ಮೆ, ಕೆಲವು ಬ್ಯಾಂಕುಗಳು ಸಾಲದ ಮೊತ್ತದ ಮೇಲೆ ಜೀವವಿಮೆಯನ್ನು ತೆಗೆದುಕೊಳ್ಳುವಂತೆ ಕೇಳಿಕೊಳ್ಳಬಹುದು. ಅದರಿಂದ ಅಕಸ್ಮಾತ್‌ ಮೃತ್ಯು ಸಂಭವಿಸಿದ ಸಂದರ್ಭದಲ್ಲಿ ವಿಮಾ ಕಂಪೆನಿಯ ದುಡ್ಡು ಸಾಲವನ್ನು ಮುಚ್ಚುವುದರಲ್ಲಿ ಸಹಕಾರಿಯಾದೀತು. ಬಹುತೇಕ ಬ್ಯಾಂಕುಗಳು ಅತಿ ಕಡಿಮೆ ಪ್ರೀಮಿಯಂ ಉಳ್ಳ ಗ್ರೂಪ್‌ ವಿಮೆಯೊಂದನ್ನು ಪಡಕೊಳ್ಳುವಂತೆ ಕೇಳಿಕೊಳ್ಳಬಹುದು. ಇದು ಒಂದು ಉತ್ತಮವಾದ ಅಂಶ.

ಕೆಲವೊಮ್ಮೆ, ಕೆಲವು ಬ್ಯಾಂಕುಗಳು ಸಾಲದ ಮೊತ್ತದ ಮೇಲೆ ಜೀವವಿಮೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಬಹುದು. ಅದರಿಂದ ಆಕಸ್ಮಿಕ ಮೃತ್ಯು ವೇಳೆ ಬರುವ ವಿಮಾ ಕಂಪೆನಿಯ ದುಡ್ಡು, ಸಾಲವನ್ನು ತೀರಿಸಲು ನೆರವಾದೀತು. ಹಾಗಾಗಿ, ಅತಿ ಕಡಿಮೆ ಗ್ರೂಪ್‌ ವಿಮೆಯಂಥ ವಿಮೆ ಕೊಳ್ಳುವುದು ಉತ್ತಮ.

(ಗಮನಿಸಿ: ವಿದ್ಯಾ ಸಾಲದ ಬಗ್ಗೆ ಇದು ಸ್ಥೂಲವಾದ ಮಾಹಿತಿ ಮಾತ್ರ. ಖಚಿತವಾದ ಅಂಕಿ ಅಂಶಗಳಿಗಾಗಿ ನಿಮ್ಮ ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸಿರಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next