ಮಾಗಡಿ: ಕೋವಿಡ್ ಕಾರಣದಿಂದ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕೇಂದ್ರ ಸರ್ಕಾರದ ನಿಲುವಿನಡಿ ಶಿಕ್ಷಣ ತಜ್ಞ ಎಂ.ಕೆ.ಶ್ರೀಧರ್ ನೇತೃತ್ವದಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನ ತರಲು ವಿದ್ಯಾಗಮ ಸಹಕಾರಿಯಾಗಲಿದೆ. ರಾಜ್ಯದ ಎಲ್ಲ ವಿದ್ಯಾಗಮ ಪ್ರಾರಂಭಿಸಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದರು.
ಪಟ್ಟಣದ ವಿದ್ಯಾನಿಧಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಕರ್ಣೀಕರ ಕಲ್ಯಾಣಿ ಕಣ್ವ ಉಗಮ ಸ್ಥಾನದ ಬಳಿ ತೆರಳಿ ಮಕ್ಕಳ ಕಲಿಕೆ ಹೇಗಿದೆ ಎಂದು ಸ್ವತಃ ಸಚಿವರೇ ಮಕ್ಕಳಿಂದ ಪದ್ಯ ಓದಿಸಿದರು. ರಾಷ್ಟ್ರ ಗೀತೆ ಹಾಡಿಸಿದರು. ಕೆಲವೊಂದು ಪ್ರಶ್ನೆಗಳನ್ನು ಕೇಳಿದರು.
ಕೋವಿಡ್ ಬಗ್ಗೆ ಮಾಹಿತಿ: ಮಕ್ಕಳಿಂದಲೇ ಕೋವಿಡ್ ಬಗ್ಗೆ ಮಾಹಿತಿ ಪಡೆದುಕೊಂಡರು. ಕೋವಿಡ್ ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ತಿಳಿಸಿಕೊಟ್ಟರು. ಮಕ್ಕಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದನ್ನು ಕಂಡು ಸಂತಸ ಪಟ್ಟರು. ಮನೆಯಿಂದಲೇ ಕಾಯಿಸಿ ಹಾರಿಸಿದ ನೀರನ್ನು ತಂದು ಕುಡಿಯಬೇಕೆಂದು ಮಕ್ಕಳಿಗೆ ಸಲಹೆ ಸಹ ನೀಡಿದ ಸಚಿವರು, ಸ್ಥಳೀಯ ಮಹಾನ್ ವ್ಯಕ್ತಿಗಳ ಪರಿಚಯ, ಚಾರಿತ್ರಿಕ ಮತ್ತು ಪ್ರಾಕೃತಿಕ ಸಂಪತ್ತಿನ ಕುರಿತು ಮಕ್ಕಳಿಗೆ ಪರಿಚಯಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಖಾಸಗಿ ಶಾಲಾ ಸಂಸ್ಥೆಗಳು ಆನ್ ಲೈನ್ ಶಿಕ್ಷಣ ನೀಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಮಕ್ಕಳಿಗೆ ನಿರಂತರ ಕಲಿಕೆಯಿಂದ ವಂಚಿತರಾಗುತ್ತಾರೆ. ಕೋವಿಡ್ ಕಾರಣದಿಂದಲೇ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಶಾಲೆಗಳು ಪ್ರಾರಂಭಗೊಳ್ಳಲಿಲ್ಲ, ಕೇವಲ ಸರ್ಕಾರಿ ಮಕ್ಕಳಿಗೆ ಮಾತ್ರವಲ್ಲ ಎಲ್ಲ ಮಕ್ಕಳಿಗೆ ವಿದ್ಯಾಗಮ ಅವಕಾಶ ಕೊಟ್ಟಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಜೇಶ್, ಯುವ ಅಧ್ಯಕ್ಷ ಶಂಕರ್, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ.ಧನಂಜಯ, ಬಾಲಾಜಿ, ಶಿಕ್ಷಕರ ಸಂಘದ ಎಂ.ಕೆಂಪೇಗೌಡ, ಲೋಕೇಶ್,ಮಲ್ಲೂರು ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದೇಶ್ವರ್, ಕುಮಾರ್, ಧನಂಜಯ, ವಿದ್ಯಾನಿಧಿ ಶಾಲೆಯ ಪ್ರಾಂಶುಪಾಲ ಆರ್. ಶ್ರೀನಿವಾಸ್, ಮುಖ್ಯ ಶಿಕ್ಷಕ ಶಿವಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಆರಸನಾಳ್ ಇದ್ದರು.