Advertisement

ಕಾವು ಉನ್ನತೀಕರಿಸಿದ ಜಿ.ಪಂ.ಸ.ಹಿ. ಪ್ರಾಥಮಿಕ ಶಾಲೆಗೆ 105 ವರ್ಷ

09:53 AM Nov 30, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1914 ಶಾಲೆ ಆರಂಭ
ಪ್ರಸ್ತುತ 326 ಮಕ್ಕಳು

ಬಡಗನ್ನೂರು: ಸ್ವಾತಂತ್ರ್ಯ ಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದ ಕಾವು ದ.ಕ.ಜಿ.ಪಂ. ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 105 ವರ್ಷ. ತಾಲೂಕಿನ ಹಿರಿಯ ಶಾಲೆ ಇದಾಗಿದ್ದು, ಕೊಡಂಗಿ ಕೃಷ್ಣ ನಾಯಕ್‌ ತಮ್ಮ ಮನೆಯ ಅವರಣದ ಪಕ್ಕದಲ್ಲಿ ಹೆಂಚಿನ ಮಾಡಿನ ಮನೆಯೊಂದರಲ್ಲಿ ಈ ಶಾಲೆಯನ್ನು ಪ್ರಾರಂಭಿಸಿದ್ದರು.

ಕಾವು ಈ ಪ್ರದೇಶದ ಪೆರ್ನಾಜೆ, ಅಮಚ್ಚಿನಡ್ಕ, ಈಶ್ವರಮಂಗಲ, ಪಾಪೆಮಜಲು, ಕುಂಬ್ರ, ಕೌಡಿಚ್ಚಾರ್‌, ಮಾಟ್ನೂರು ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ಶಾಲೆಗಳು ಇಲ್ಲದ ನಿಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಏಕೋಪಾಧ್ಯಾಯ ಶಾಲೆ ಮುಖ್ಯ ಶಿಕ್ಷಕರಾಗಿ ಕೊಡಂಗಿ ಕೃಷ್ಣ ನಾಯಕ್‌ ಪ್ರಾರಂಭಿಸಿದ್ದರು. 1914ರಲ್ಲಿ ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಮಾಟ್ನೂರು ಗ್ರಾಮದ ಕಾವು ಎಂಬಲ್ಲಿ 1.85 ಎಕ್ರೆ ಜಾಗದಲ್ಲಿ ಶಾಲೆ ಪ್ರಾರಂಭಗೊಂಡಿತು. ಪ್ರಾರಂಭದಲ್ಲಿ 1ರಿಂದ 5ನೇ ತರಗತಿಯವರೆಗೆ ಸುಮಾರು 30 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು..

ಉನ್ನತೀಕರಣದ ದಶಮಾನೋತ್ಸವ
ಈ ಭಾಗದಲ್ಲಿ ಸದ್ಯ 5 ಸರಕಾರಿ ಹಾಗೂ 3 ಖಾಸಗಿ ಶಾಲೆಗಳಿವೆ. 1990ರ ದಶಕದಲ್ಲಿ ದ.ಕ.ಜಿ.ಪಂ. ಉನ್ನತೀಕರಣ ಶಾಲೆಯಾಗಿ ಮಾರ್ಪಟ್ಟಿತು. 2000ನೇ ಇಸವಿಯಲ್ಲಿ ಶಾಲಾ ಉನ್ನತೀಕರಣದ ದಶಮಾನೋತ್ಸವ ಸಂಭ್ರಮ ನಡೆಯಿತು. 2016-17ರಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಗೊಂಡಿತು. 2019-20ರಲ್ಲಿ ಸರಕಾರದ ನಿಯಮ ಪ್ರಕಾರ 1ನೇ ತರಗತಿ ಆಂಗ್ಲ ಮಾಧ್ಯಮ ಆರಂಭಗೊಂಡಿತು. ಪ್ರಸ್ತುತ ಎಲ್‌ಕೆಜಿ, ಯುಕೆಜಿಯಲ್ಲಿ ಒಟ್ಟು 69 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕಿಯರು ಮತ್ತು ಸಹಾಯಕಿ ಇದ್ದಾರೆ. 1ರಿಂದ 8ನೇ ವರೆಗೆ 257 ವಿದ್ಯಾರ್ಥಿಗಳಿದ್ದಾರೆ. 10 ಖಾಯಂ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಹುಕ್ರಪ್ಪ ನಾಯ್ಕ ಬಿ. ಮುಖ್ಯ ಶಿಕ್ಷಕರಾಗಿದ್ದಾರೆ.

Advertisement

ಜಿಲ್ಲಾಮಟ್ಟದ ಪ್ರಶಸ್ತಿ
ಶಾಲೆಯಲ್ಲಿ ಮುಖ್ಯ ಶಿಕ್ಷಕ ಶಿವಶಂಕರ ಭಟ್‌ ಅವರಿಗೆ ಜಿಲ್ಲಾ ಪ್ರಶಸ್ತಿ ಲಭಿಸಿತ್ತು. ಶಾಲೆಯಲ್ಲಿ ಕಲಿತ ಸಾಧಕರಲ್ಲಿ ಸಾಹಿತಿಯಾಗಿ ನಿರಂಜನ ಹಾಗೂ ಕ್ರೀಡಾ ಕ್ಷೇತ್ರದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಮುಖರಾಗಿ ಪ್ರೇಮಾನಾಥ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶೇ. 90ರಷ್ಟು ಮೂಲಸೌಕರ್ಯ
ಮಕ್ಕಳಿಗೆ ಸಂಗೀತ, ಕ್ರೀಡಾ ತರಬೇತಿ ಹಾಗೂ ಹೊಲಿಗೆ ತರಬೇತಿ ತರಗತಿ ನಡೆಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿದ ತೃಪ್ತಿ. ದತ್ತು ಸ್ವೀಕರಿಸಿದ ನನಗೆ ಇದೆ. ದತ್ತು ಸ್ವೀಕರಿಸಿದ ಉದ್ದೇಶದ ಫ‌ಲವಾಗಿ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿ ಮತ್ತು ಮಕ್ಕಳಿಗೆ ಅಗತ್ಯವಾದ ಶಿಕ್ಷಣ ಹಾಗೂ ಶಾಲೆಗೆ ಬೇಕಾದ ಮೂಲ ಸೌಕರ್ಯ ಶೇ. 90ರಷ್ಟು ಒದಗಿಸಲಾಗಿದೆ ಎಂದು ಹೇಮನಾಥ ಶೆಟ್ಟಿ ಹೇಳಿದ್ದಾರೆ.

ಭೇದ-ಭಾವವಿಲ್ಲದೆ ಅಭಿವೃದ್ಧಿ
ಶತಮಾನದ ಸಂಭ್ರಮದ ಬಳಿಕ ವಿವಿಧ ಜನಪ್ರತಿನಿಧಿಗಳ ಸಹಕಾರದಿಂದ 60ರಿಂದ 70 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದೆ. ಜಾತಿ, ಮತ, ರಾಜಕೀಯದ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ನಮ್ಮೂರ ಶಾಲೆ ಅಭಿವೃದ್ಧಿ ಕಂಡಿದೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಹೇಳಿದ್ದಾರೆ.

ಸ್ಮಾರ್ಟ್‌ ಟಿ.ವಿ. ಶಿಕ್ಷಣ
ತರಗತಿ ಕೊಠಡಿ, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಹಾಗೂ ಬಿಸಿ ನೀರಿನ ವ್ಯವಸ್ಥೆಯೂ ಇಲ್ಲಿದೆ. ಸೋಲಾರ್‌, ಹವಾನಿಯಂತ್ರಿತ ಸ್ಮಾರ್ಟ್‌ ಟಿ.ವಿ., ಕಂಪ್ಯೂಟರ್‌, ಸುಸಜ್ಜಿತ ಆಟದ ಮೈದಾನ, ಉಪಾಹಾರ ಮಂದಿರ, ಪ್ರತಿ ತರಗತಿಯಲ್ಲೂ ಧ್ವನಿವರ್ಧಕ ಅಳವಡಿಕೆ ಹಾಗೂ ಸುಸಜ್ಜಿತ ಅಕ್ಷರ ದಾಸೋಹ ಕೊಠಡಿ ಇವೆ. ಗಿಡ, ಮರ ನೆಟ್ಟು ಪರಿಸರ ರಕ್ಷಣೆ, ಹಸಿ ತರಕಾರಿ ತ್ಯಾಜ್ಯಗಳಿಂದ ಬಯೋಗ್ಯಾಸ್‌ ಉತ್ಪಾದನೆ ಮೂಲಕ ನೀರು ಬಿಸಿ ಮಾಡಲು ಬಳಸಲಾಗುತ್ತದೆ. ಶಾಲೆಯಲ್ಲಿ ಕೈತೋಟ ರಚಿಸಿ ಮಧ್ಯಾಹ್ನದ ಬಿಸಿಯೂಟಕ್ಕೆ ರಾಸಾಯನಿಕಮುಕ್ತ ತರಕಾರಿ ಬಳಕೆ ಮಾಡುತ್ತಿದ್ದು, ಶಾಲಾ ಸುತ್ತಲೂ ಹೂವಿನ ಗಿಡ ನೆಟ್ಟು ಪ್ರಶಾಂತ ವಾತಾವರಣ ಹೊಂದಿದೆ.

ದ.ಕ. ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ, ಗ್ರಾಮಾಂತರ ಪ್ರದೇಶದಲ್ಲೂ ಸರಕಾರಿ ಶಾಲೆಯಲ್ಲಿ ಈ ಗ್ರಾಮದ ಪ್ರತಿಯೊಬ್ಬರೂ ಆಂಗ್ಲ ಮಾಧ್ಯಮದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಅರಂಭಿಸಲಾಗಿದೆ. 86 ವಿದ್ಯಾರ್ಥಿಗಳ ದಾಖಲೆಯಾಗಿದೆ. ಅದರೊಂದಿಗೆ ಆ ಮಕ್ಕಳು 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಸರಕಾರದ ನಿಯಮದಂತೆ ಪಡೆಯಲಿದ್ದಾರೆ. ಇದು ಸಂತೋಷದ ವಿಷಯ.
-ಹೇಮನಾಥ ಶೆಟ್ಟಿ ಕಾವು
(ಶಾಲೆಯನ್ನು ದತ್ತು ಸ್ವೀಕರಿಸಿದವರು)

ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 2016ರಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ 216 ಇತ್ತು. ಈಗ 257 ಇದೆ. ಸುಮಾರು 40 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ದತ್ತು ಪಡೆದು ಶಾಲೆಯನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯವ ಕಾವು ಹೇಮನಾಥ ಶೆಟ್ಟಿ ಅವರ ಸಹಕಾರ ಹಾಗೂ ಜನಪ್ರತಿನಿಧಿಯವರು, ಶಾಲಾಭಿವೃದ್ಧಿ ಸಮಿತಿಯವರು, ಮಕ್ಕಳ ಹೆತ್ತವರು, ಊರಿನವರು ಹಾಗೂ ನಮ್ಮ ಕ್ರಿಯಾಶೀಲ ಅಧ್ಯಾಪಕ ವೃಂದದವರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ.
– ಹುಕ್ರಪ್ಪ ನಾಯ್ಕ ಬಿ. ಮುಖ್ಯ ಶಿಕ್ಷಕರು

-  ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next