Advertisement

ನ.12-13ಕ್ಕೆ ವಿದ್ಯಾದಾನ ಸಮಿತಿ ಶತಮಾನ ಕಾರ್ಯಕ್ರಮ

04:00 PM Jun 21, 2022 | Team Udayavani |

ಗದಗ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿರುವ, ಉತ್ತರ ಕರ್ನಾಟಕದ ಅತ್ಯಂತ ಹಳೇ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಥಳೀಯ ವಿದ್ಯಾದಾನ ಸಮಿತಿ ನೂರು ವರ್ಷ ಪೂರೈಸಿದ್ದು, ನ.12ಹಾಗೂ 13 ರಂದು ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಹಳೇ ವಿದ್ಯಾರ್ಥಿಯೂ ಆಗಿರುವ ಮಾಜಿ ಶಾಸಕ ಡಿ.ಆರ್‌. ಪಾಟೀಲ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಾಹಿತಿ, ಚಿಂತಕಿ, ಪದ್ಮಶ್ರೀ ಪುರಸ್ಕೃತೆ ಡಾ| ಸುಧಾ ಮೂರ್ತಿ, ಸಂಸ್ಥೆಯ ಹಳೇ ವಿದಾರ್ಥಿಯಾದ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ| ವಿಜಯ ಸಂಕೇಶ್ವರ ಸೇರಿ ಹಲವರು ಆಗಮಿಸಲಿದ್ದಾರೆ ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, 1911ರಲ್ಲಿ ಎನ್‌.ವಿ. ಹುಯಿಲಗೋಳ (ಸಾಬ ನಾರಾಯಣರಾಯರು), ಹುಯಿಲಗೋಳ ನಾರಾಯಣರಾಯರು, ಎಚ್‌.ಎಸ್‌. ಹುಯಿಲಗೋಳ, ಭೀಮರಾವ್‌ ಹುಯಿಲಗೋಳ ಒಳಗೊಂಡು ದ.ರಾ. ಬೇಂದ್ರೆ, ಕೀರ್ತಿನಾಥ ಕುರ್ತಕೋಟಿ, ಕೆ.ಎಸ್‌.ಎನ್‌. ಅಯ್ಯಂಗಾರ ಸೇರಿ ಮುಂತಾದವರು ವಿದ್ಯಾದಾನ ಸಮಿತಿ ಹುಟ್ಟು ಹಾಕಿ ಶಿಕ್ಷಣ ನೀಡಿದ್ದಾರೆ. ವಿದ್ಯಾದಾನ ಸಮಿತಿ ಅಡಿಯಲ್ಲಿ ಪ್ರಸ್ತುತ ಎರಡು ಪ್ರಾಥಮಿಕ, ಎರಡು ಪ್ರೌಢಶಾಲೆ, ಎರಡು ಪದವಿ ಪೂರ್ವ, ಬಿ.ಇಡಿ ಹಾಗೂ ಚಿತ್ರಕಲಾ ಸೇರಿ ಎಂಟು ಸಂಸ್ಥೆಗಳನ್ನು ಹೊಂದಿದೆ ಎಂದರು.

ಈ ಶತಮಾನೋತ್ಸವ ಯಶಸ್ವಿಗೆ ಸಂಸ್ಥೆಯ ಹಳೇ ವಿದ್ಯಾರ್ಥಿಗಳಾಗಿರುವ ಮಾಜಿ ಶಾಸಕ ಡಿ.ಆರ್‌. ಪಾಟೀಲ, ಶಾಸಕರಾದ ಎಚ್‌.ಕೆ. ಪಾಟೀಲ, ಪರಣ್ಣ ಮುನವಳ್ಳಿ ಸೇರಿ ಹಲವರ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಲಾಗುವುದು. ರಕ್ತದಾನ ಶಿಬಿರ, ನೇತ್ರದಾನ ವಾಗ್ಧಾನ ಸೇರಿ ಸಾಧಕರಿಗೆ ಸನ್ಮಾನ ಹೀಗೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳು ಇರಲಿವೆ. ಶತಮಾನೋತ್ಸವ ನಿಮಿತ್ತ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಳೇ ವಿದ್ಯಾರ್ಥಿಗಳಾದ ಉದ್ಯಮಿ ಮೃತ್ಯುಂಜಯ ಸಂಕೇಶ್ವರ, ಲೆಕ್ಕ ಪರಿಶೋಧಕ ಆನಂದ ಎಲ್‌. ಪೊತ್ನೀಸ್‌, ಡಾ| ಪ್ಯಾರ್‌ ಅಲಿ ನೂರಾನಿ, ಗುರಣ್ಣ ಬಳಗಾನೂರ, ವಿಜಯಕುಮಾರ ಬಾಗಮಾರ, ವಿಜಯ ಮೇಲಗಿರಿ ಸೇರಿದಂತೆ ಉಪನ್ಯಾಸಕ ಡಾ| ಡಿ.ಎಲ್‌. ಪಾಟೀಲ, ಪ್ರದೀಪ ಹುಯಿಲಗೋಳ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next