Advertisement

ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವ ವಿದ್ಯಾ ಸಾಲ

01:59 AM Jun 10, 2019 | Sriram |

ಇಂತಹ ಸುಲಭ ಸೌಲಭ್ಯದ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಹಲವಾರು ಬ್ಯಾಂಕುಗಳು ಇಂದಿಗೂ ವಿದ್ಯಾ ಸಾಲವನ್ನು ಸಕ್ರಿಯವಾಗಿ ಮುಂದೆ ದೂಡುತ್ತಿಲ್ಲ. ಹಲವಾರು ಬಾರಿ ಮಾಹಿತಿಯ ಕೊರತೆಯಿಂದಲೇ ಇರುವ ಸೌಲಭ್ಯದ ಉತ್ತಮ ಪ್ರಯೋಜನವನ್ನೂ ಜನತೆ ಪಡೆಯಲಾಗುತ್ತಿಲ್ಲ.

Advertisement

ಇಂದು ಭಾರತದಲ್ಲಿ ವಿದ್ಯಾ ಸಾಲ ಅತ್ಯಂತ ಸುಲಭವಾಗಿ, ಅತ್ಯಂತ ಅಗ್ಗವಾಗಿ, ಅತ್ಯಂತ ಕನಿಷ್ಠ ಜಾಮೀನಿನೊಂದಿಗೆ ಸಿಗುವಂತಹ ಒಂದು ಸೌಲಭ್ಯ. ಹಿಂದಿನ ಕಾಲದಂತೆ ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಡುತ್ತಾ ಟೇಬಲಿನಿಂದ ಟೇಬಲಿಗೆ ನಮಸ್ಕಾರ ಹಾಕುವ ಪ್ರಮೇಯವಿಲ್ಲ. ಜಾಮೀನಿಗೆ ಏನನ್ನು ಕೊಡಲಿ ಎನ್ನುವ ತಲೆಬಿಸಿ ಇಲ್ಲ. ಬಡ್ಡಿದರವೂ ಆಕರ್ಷಕ ಮಟ್ಟದಲ್ಲೇ ಇದೆ (ಸದ್ಯಕ್ಕೆ ಸರಿಸುಮಾರು ಶೇ.10), ಜೊತೆಗೆ ಆದಾಯಕರ ವಿನಾಯಿತಿಯೂ ಸೇರಿಕೊಂಡಿದೆ. ವಿದ್ಯಾ ಸಾಲ ಇದೀಗ ಆದ್ಯತೆಯ ಸಾಲಗಳ ಪಟ್ಟಿಯಲ್ಲಿದೆ ಹಾಗೂ ಯಾವ ಕಾರಣಕ್ಕೂ ವಿದ್ಯಾ ಸಾಲವನ್ನು ಅರ್ಹರಿಗೆ ತಿರಸ್ಕರಿಸಬಾರದು ಎನ್ನುವ ಆದೇಶವೂ ಸರಕಾರದ ವತಿಯಿಂದ ಇದೆ. ಅತ್ಯಂತ ಬಡವರಿಗೆ ಒಂದು ಹಂತದವರೆಗೆ ಸರಕಾರದ ವತಿಯಿಂದ ವಿದ್ಯಾ ಸಾಲದ ಮೇಲೆ ಸಬ್ಸಿಡಿಯೂ ದೊರಕುತ್ತದೆ.

ಆದರೂ ಇಂತಹ ಸುಲಭ ಸೌಲಭ್ಯದ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಹಲವಾರು ಬ್ಯಾಂಕುಗಳು ಇಂದಿಗೂ ವಿದ್ಯಾ ಸಾಲವನ್ನು ಸಕ್ರಿಯವಾಗಿ ಮುಂದೆ ದೂಡುತ್ತಿಲ್ಲ. ಹಲವಾರು ಬಾರಿ ಮಾಹಿತಿಯ ಕೊರತೆಯಿಂದಲೇ ಇರುವ ಸೌಲಭ್ಯದ ಉತ್ತಮ ಪ್ರಯೋಜನವನ್ನೂ ಜನತೆ ಪಡೆಯಲಾಗುತ್ತಿಲ್ಲ. ಪಿಯುಸಿ ಆದಾಕ್ಷಣ ಉಚ್ಛ ಶಿಕ್ಷಣಕ್ಕೆ ಪ್ರವೇಶಾತಿಯ ಜೊತೆಗೆ ಅದಕ್ಕೆ ದುಡ್ಡು ಹೇಗೆ ಹೊಂದಿಸುವುದು, ಸಾಲವನ್ನು ಎಲ್ಲಿಂದ ಹೇಗೆ ಪಡಕೊಳ್ಳುವುದು ಸಿಗದಿದ್ದರೆ ಏನು ಮಾಡುವುದು ಎನ್ನುವ ತಲೆಬಿಸಿ ಆರಂಭವಾಗುತ್ತದೆ. ವಿದ್ಯಾರ್ಥಿಗಳೂ, ಹೆತ್ತವರೂ ಮಾಹಿತಿ ಸಂಗ್ರಹಕ್ಕಾಗಿ ಅತ್ತಿತ್ತ ಅಲೆದಾಡುತ್ತಾರೆ.

ಇದೀಗ ಹೊಸ ವರ್ಷದ ಪ್ರವೇಶಾತಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಮಯೋಚಿತವಾಗಿ ವಿದ್ಯಾ ಸಾಲದ ಬಗ್ಗೆ ಮಾಹಿತಿ:

ವಿದ್ಯಾ ಸಾಲ ಎಲ್ಲಿ?: ಸರಕಾರಿ ಸ್ವಾಯತ್ತೆಯ ಬ್ಯಾಂಕುಗಳು (ಸ್ಟೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್‌, ಸಿಂಡಿಕೇಟ್ ಬ್ಯಾಂಕ್‌, ಕಾರ್ಪೋರೇಶನ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡ ಇತ್ಯಾದಿ) ಇಂದು ವಿದ್ಯಾ ಸಾಲವನ್ನು ಸುಲಭವಾಗಿ ನೀಡುತ್ತಿವೆ.

Advertisement

ಸರಕಾರಿ ಬ್ಯಾಂಕುಗಳಲ್ಲದೆ ಕೆಲವು ಖಾಸಗಿ ಬ್ಯಾಂಕುಗಳು (ಆಕ್ಸಿಸ್‌, ಎಚ್‌ಡಿಎಫ್ಸಿ ಬ್ಯಾಂಕ್‌) ಈ ಕ್ಷೇತ್ರದಲ್ಲಿ ಇವೆಯಾದರೂ ಇನ್ನು ಕೆಲವೊಂದು ಖಾಸಗಿ ಬ್ಯಾಂಕುಗಳು ಅಷ್ಟೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಹೇಳಬಹುದು. ವಿದ್ಯಾ ಸಾಲ ಒಂದು ಹಂತದವರೆಗೆ ಯಾವುದೇ ಭದ್ರತೆಯಿಲ್ಲದೆ ಕೊಡುವ ಸಾಲವಾದ ಕಾರಣ ಮತ್ತು ಅದರ ವಾಪಸಾತಿಯ ದಾಖಲೆ ಅತ್ಯಂತ ಕೆಟ್ಟದಾಗಿರುವ ಕಾರಣ ಹಲವು ಖಾಸಗಿ ಬ್ಯಾಂಕುಗಳು ಈ ಕ್ಷೇತ್ರದಲ್ಲಿ ಹಿಂದೇಟು ಹಾಕುತ್ತಿವೆ.

ಆದರೆ ವಿದ್ಯಾ ಸಾಲಕ್ಕಾಗಿಯೇ ಹೆಸರುವಾಸಿಯಾದ ಕ್ರೆಡಿಲ ಫೈನಾನ್ಶಿಯಲ್ ಸರ್ವಿಸಸ್‌ ಹಾಗೂ ಅವನ್ಸೆ ಫೈನಾನ್ಶಿಯಲ್ ಸರ್ವಿಸಸ್‌ ಎಂಬ ಎರಡು ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿವೆ.

ಐಬಿಎ ಮಾರ್ಗದರ್ಶಿ: ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಶನ್‌ ಅಥವಾ ಐಬಿಎ ವಿದ್ಯಾ ಸಾಲದ ಬಗ್ಗೆ ಎಲ್ಲಾ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಒಂದು ಮಾರ್ಗದರ್ಶಿಯನ್ನು ರೂಪಿಸಿದೆ. ಎಲ್ಲಾ ಬ್ಯಾಂಕುಗಳೂ ಸರಿ ಸುಮಾರು ಇದೇ ಮಾದರಿಯನ್ನು ಅನುಸರಿಸುತ್ತವೆ. ಬ್ಯಾಂಕುಗಳಿಂದ ಬ್ಯಾಂಕಿಗೆ ಅಲ್ಪಸ್ವಲ್ಪ ವ್ಯತ್ಯಾಸಗಳಿರುತ್ತವಾದರೂ ಮೂಲಭೂತ ವಿಚಾರಗಳಲ್ಲಿ ವ್ಯತ್ಯಾಸಗಳಿರುವುದಿಲ್ಲ.

ಪ್ರತಿಯೊಂದು ಬ್ಯಾಂಕೂ ಕೂಡಾ ತನ್ನ ವೆಚ್ಚಾನುಸಾರ ತನ್ನದೇ ಬಡ್ಡಿ ದರಗಳನ್ನು ನಿಗದಿಪಡಿಸುತ್ತವೆ; ತನ್ನದೇ ನೆಲೆಯಲ್ಲಿ ಕೆಲವು ಅಂಕಿಅಂಶಗಳಲ್ಲಿ ವ್ಯತ್ಯಾಸವಿರುತ್ತವೆ, ಆದರೆ ಸಾಲದ ಷರತ್ತುಗಳಲ್ಲಿ, ರೀತಿನೀತಿಗಳಲ್ಲಿ ವಿಶೇಷವಾದ ವ್ಯತ್ಯಾಸಗಳು ಕಾಣಬರದು.

ಮಾರುಕಟ್ಟೆಯಲ್ಲಿ ಸ್ಥೂಲವಾಗಿ ಎಲ್ಲಾ ರಾಷ್ಟ್ರೀಕೃತ/ಕೋ-ಓಪರೇಟಿವ್‌/ಖಾಸಗಿ ಬ್ಯಾಂಕುಗಳೂ ಬಹುತೇಕ ಈ ಮಾರ್ಗದರ್ಶಿಯ ಅನುಸಾರ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು ಮಾತ್ರ ಇದಕ್ಕಿಂತ ಭಿನ್ನವಾದ ತಮ್ಮದೇ ರೀತಿಯಲ್ಲಿ ಸಾಲವನ್ನು ನಿರ್ವಹಿಸುವುದನ್ನು ಕಾಣಬಹುದು.

ಯಾರಿಗೆ ಸಾಲ?: ಐಬಿಎ ಅಥವಾ ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಶನ್‌ ಮಾರ್ಗದರ್ಶಿಯ ಅನುಸಾರ ಭಾರತದಲ್ಲಿ ವಿದ್ಯಾಸಾಲವನ್ನು ಪಡೆಯಲು ಈ ಕೆಳಗಿನವರು ಅರ್ಹರಾಗಿರುತ್ತಾರೆ.

•ಈ ಸಾಲ ಪಡೆಯುವವನು ಓರ್ವ ಭಾರತೀಯ ಪ್ರಜೆಯಾಗಿರಬೇಕಾದದ್ದು ಮುಖ್ಯ.

•ಹತ್ತನೆಯ ತರಗತಿಯ ಬಳಿಕ 2 ವರ್ಷ ಕಲಿತ (ಪ್ಲಸ್‌ ಟು ಅಥವಾ ಪಿಯುಸಿ) ವಿದ್ಯಾರ್ಥಿಗಳು ಇದಕ್ಕೆ ಅರ್ಹರು. ಹತ್ತನೆಯ ತರಗತಿಯ ಬಳಿಕ ಮಾಡುವ ವೃತ್ತಿ ಕೌಶಲ ತರಬೇತಿ (ವೊಕೇಶನಲ್ ಟ್ರೈನಿಂಗ್‌) ಅದರದ್ದೇ ಆದ ವಿದ್ಯಾ ಸಾಲ ಮಾರ್ಗದರ್ಶಿಯನ್ನು ಅನುಸರಿಸುತ್ತದೆ.

•ಮೆರಿಟ್ ಆಧಾರದಲ್ಲಿ ಪ್ರೊಫೆಶನಲ್/ತಾಂತ್ರಿಕ ಕೋರ್ಸುಗಳಿಗೆ ಪ್ರವೇಶಾತಿ ಪರೀಕ್ಷೆ/ಆಯ್ಕೆ ವಿಧಾನಗಳ ಮೂಲಕ ಪ್ರವೇಶ ಪಡೆದಿರಬೇಕು. ಆದರೂ ಕೆಲ ಸಂದರ್ಭಗಳಲ್ಲಿ ಮೆರಿಟ್/ಪ್ರವೇಶಾತಿ ಪರೀಕ್ಷೆ ಸೀಟ್ ಹಂಚಿಕೆಯ ಮಾನದಂಡವಾಗಿರದಿದ್ದಲ್ಲಿ ಬ್ಯಾಂಕುಗಳು ಅಂತಹ ಸಂದರ್ಭಗಳಲ್ಲಿ ವಿದ್ಯಾ ಸಂಸ್ಥೆಯ ಪ್ರತಿಷ್ಠೆ ಮತ್ತು ನೌಕರಿಯ ಸಾಧ್ಯತೆಗಳನ್ನು ಗಮನಿಸಿ ಸಾಲ ನೀಡಬಹುದು.

•ಹೊಸ ಸೂಚನೆಯ ಪ್ರಕಾರ ಮೆರಿಟ್ ಕೋಟಾದಲ್ಲಿ ಸೀಟ್ ಸಿಗುವ ಯೋಗ್ಯತೆಯುಳ್ಳ ಆದರೆ ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೀಟು ಪಡಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ವಿದ್ಯಾ ಸಾಲ ಸಿಗಬಹುದಾಗಿದೆ.

•ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬಹುದು.

•ಒಬ್ಟಾತ ವಯಸ್ಕ (ಮೇಜರ್‌) ಅಥವಾ ಒಬ್ಬ ಅಪ್ರಾಪ್ತ ವಯಸ್ಕನನ್ನು ಪ್ರತಿನಿಧಿಸುವ ಹೆತ್ತವರು/ರಕ್ಷಕರು.

ಯಾವ ಕೋರ್ಸು?: ಐಬಿಎ ಮಾರ್ಗದರ್ಶಿ ಅನುಸಾರ ಪಿಯುಸಿ ಅಥವಾ ತತ್ಸಮ ವಿದ್ಯಾಭ್ಯಾಸ ಹೊಂದಿದ ಬಳಿಕ ಹೆಚ್ಚು ಕಡಿಮೆ ಟೆಕ್ನಿಕಲ್/ಪ್ರೊಫೆಶನಲ್ ಸಹಿತ ಯಾವುದೇ ಡಿಗ್ರಿ/ಪಿ.ಜಿ. ಕೋರ್ಸುಗಳಿಗೆ ವಿದ್ಯಾಸಾಲ ದೊರೆಯುತ್ತದೆ. ವಿದ್ಯಾ ಸಾಲಕ್ಕೆ ಅರ್ಹವಾದ ಕೆಲ ಮುಖ್ಯ ಕೋರ್ಸುಗಳ ವಿವರ ಈ ಕೆಳಗಿನಂತಿದೆ:

ಭಾರತದಲ್ಲಿ

•ಯುಜಿಸಿ/ಸರಕಾರ/ಎಐಸಿಟಿಇ/ಎಐಬಿಎಂಎಸ್‌/ಐಸಿಎಂಆರ್‌ ಗುರುತಿಸಿರುವ ಯಾವುದೇ ಕಾಲೇಜು/ಯುನಿವರ್ಸಿಟಿ ಶಿಕ್ಷಣ.

•ರಾಷ್ಟೀಯ ಇನ್‌ಸ್ಟಿಟ್ಯೂಟ್‌ಗಳು/ಪ್ರತಿಷ್ಟಿತ ಖಾಸಗಿ ಇನ್‌ಸ್ಟಿಟ್ಯೂಟ್‌ಗಳು ನೀಡುವ ಶಿಕ್ಷಣ.

•ಬಿಎ/ಬಿಕಾಂ/ಬಿಎಸ್ಸಿ ಇತ್ಯಾದಿ ಡಿಗ್ರಿಗಳು

•ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿಗಳು

•ಪೃತ್ತಿಪರ ಶಿಕ್ಷಣ (ಪ್ರೊಫೆಶನಲ್ ಕೋರ್ಸುಗಳು)- ಇಂಜಿನಿಯರಿಂಗ್‌, ಮೆಡಿಕಲ್, ಎಗ್ರಿ, ಡೆಂಟಲ್, ವೆಟರಿನರಿ, ಕಾನೂನು, ಕಂಪ್ಯೂಟರ್‌ ಶಿಕ್ಷಣ, ಇತ್ಯಾದಿ.

•ಸಿಎ, ಐಸಿಡಬ್ಲ್ಯುಎ, ಸಿಎಫ್ಎ ಇತ್ಯಾದಿ

•ಐಐಎಂ, ಐಐಟಿ, ಐಐಎಸ್‌ಸಿ, ಎಕ್ಸ್‌ಎಯಲ್ಆರ್‌ಐ, ಎನ್‌ಐಎಫ್ಟಿ, ಎನ್‌ಐಡಿ ಇತ್ಯಾದಿ. ಇಸ್ಟಿಟ್ಯೂಟ್ಗಖಳು ನಡೆಸುವ ಕೋರ್ಸುಗಳು

•ದೇಶದೊಳಗೆ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳು ನಡೆಸುವ ಕೋರ್ಸುಗಳು

ವಿದೇಶದಲ್ಲಿ

•ಪ್ರತಿಷ್ಠಿತ ಯುನಿವರ್ಸಿಟಿಗಳು ನೀಡುವ ವೃತ್ತಿಪರ/ತಾಂತ್ರಿಕ ಶಿಕ್ಷಣಗಳು.

•ಸ್ನಾತಕೋತ್ತರ ಪದವಿಗಳು – ಎಂಸಿಎ/ಎಂಬಿಎ/ಎಂಎಸ್‌ ಇತ್ಯಾದಿ

•ಸಿಐಎಂಎ-ಲಂಡನ್‌, ಸಿಪಿಎ-ಯುಎಸ್‌ಎಂ ಗಳು ನಡೆಸುವ ಕೋರ್ಸುಗಳು.

•ಉತ್ತಮ ಉದ್ಯೋಗಾವಕಾಶವಿರುವ ಏರೋನಾಟಿಕಲ್/ಶಿಪ್ಪಿಂಗ್‌/ಪೈಲಟ್ ತರಬೇತಿ

ಈ ಪಟ್ಟಿ ಪರಿಪೂರ್ಣವಲ್ಲ, ಕೇವಲ ಸೂಚಕವಾಗಿದೆ. ಬ್ಯಾಂಕುಗಳು ಕೋರ್ಸುಗಳ ಪ್ರತಿಷ್ಠೆ ಮತ್ತು ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ಈ ಪಟ್ಟಿಯಲ್ಲಿಲ್ಲದ ಕೋರ್ಸುಗಳಿಗೂ ವಿದ್ಯಾ ಸಾಲ ನೀಡಬಹುದಾಗಿದೆ. ಬ್ಯಾಂಕಿನಿಂದ ಬ್ಯಾಂಕಿಗೆ ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು.

ವಯೋಮಿತಿ: ಸಾಲಕ್ಕೆ ವಿದ್ಯಾರ್ಥಿಯ ವಯೋಮಿತಿ 16-35 ಆಗಿರಬೇಕು. ಹೆಚ್ಚಿನ ಬ್ಯಾಂಕುಗಳು ಈ ವಯೋಮಿತಿಯನ್ನು ಪಾಲಿಸುವುದನ್ನು ಕಾಣಬಹುದು.

ಸಾಲದ ಮೊತ್ತ: ಐಬಿಎ ಮಾದರಿಯಡಿಯಲ್ಲಿ ಬರುವ ಎಲ್ಲಾ ವಿದ್ಯಾ ಸಾಲಗಳೂ ಬಹುತೇಕ ಸ್ವದೇಶಿ ಶಿಕ್ಷಣಕ್ಕೆ ರೂ. 10 ಲಕ್ಷ ಹಾಗೂ ವಿದೇಶಿ ಶಿಕ್ಷಣಕ್ಕೆ ರೂ. 20 ಲಕ್ಷದ ಮಿತಿ ಹಾಕಿದೆ. ಆದರೂ ಕೆಲ ಬ್ಯಾಂಕುಗಳು ಕೆಲವು ಪ್ರತಿಸಿuತ ವಿದ್ಯಾ ಸಂಸ್ಥೆಗಳಿಗಾಗಿ ಸ್ವಲ್ಪ ಹೆಚ್ಚುವರಿ ಮಿತಿಯನ್ನು ನೀಡಿದೆ.

ಮಾರ್ಜಿನ್‌: ರೂ. 4 ಲಕ್ಷದವರೆಗಿನ ವಿದ್ಯಾ ಸಾಲಕ್ಕೆ ಯಾವುದೇ ಮಾರ್ಜಿನ್‌ ಮನಿಯ ಅಗತ್ಯವಿಲ್ಲ. ಅಂದರೆ ವಿದ್ಯಾರ್ಥಿಯ ವತಿಯಿಂದ ಯಾವುದೇ ದೇಣಿಗೆಯಿಲ್ಲದೆ ಸಂಪೂರ್ಣ ಮೊತ್ತವು ಸಾಲವಾಗಿ ಸಿಗುವುದು.

ರೂ. 4 ಲಕ್ಷ ಮೀರಿದ ಮೊತ್ತದ ಸಾಲಗಳಿಗೆ ಒಟ್ಟು ವೆಚ್ಚದ ಶೇ.95 ದವರೆಗೆ ಸಾಲ ಈ ಮಿತಿಯೊಳಗೆ ಲಭ್ಯ. ಐಬಿಎ ಮಾದರಿಯಡಿಯಲ್ಲಿ ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕುಗಳು ಶೇ.5 ಮಾರ್ಜಿನ್‌ ಮನಿಯ ಬೇಡಿಕೆಯನ್ನು ಇಟ್ಟಿರುತ್ತವೆ. ಒಟ್ಟು ಸಾಲದಲ್ಲಿ ಅಭ್ಯರ್ಥಿಯ ದೇಣಿಗೆಯೇ ಈ ಮಾರ್ಜಿನ್‌ ಮನಿ. ವಿದ್ಯಾಭ್ಯಾಸದ ಒಟ್ಟು ವೆಚ್ಚ 6 ಲಕ್ಷ ರೂ ಆಗಿದ್ದರೆ ಅದರ ಶೇ.5 ಅಂದರೆ ರೂ. 30,000 ಅಭ್ಯರ್ಥಿಯೇ ಭರಿಸಬೇಕು. ಬ್ಯಾಂಕುಗಳು ಉಳಿದ ರೂ 5.7 ಲಕ್ಷದವರೆಗೆ ಮಾತ್ರ ಸಾಲ ನೀಡಬಲ್ಲುದು.

ತಮಗೆ ಲಭಿಸುವ ಸ್ಕಾಲರ್‌ಶಿಪ್‌ ಮೊತ್ತವನ್ನು ಮಾರ್ಜಿನ್‌ ಮನಿಯ ಅಡಿಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬಹುದಾಗಿದೆ. ಹಾಗೆಯೇ ಇಡೀ ಕೋರ್ಸಿನ ವಿದ್ಯಾ ಸಾಲದ ಮಾರ್ಜಿನ್‌ ಮನಿಯನ್ನು ಪ್ರಥಮ ವರ್ಷವೇ ವಿದ್ಯಾರ್ಥಿಯು ಏಕಗಂಟಿನಲ್ಲಿ ಭರಿಸಬೇಕಾಗಿಲ್ಲ. ಪ್ರತೀ ವರ್ಷ ಸಾಲದ ಕಂತು ಬಿಡುಗಡೆಯಾದ ಹಾಗೆ ಆ ಕಂತಿನ ಶೇ.5 ಭರಿಸಿದರೆ ಸಾಕಾಗುತ್ತದೆ.

ವಿದೇಶಿ ವಿದ್ಯಾಭ್ಯಾಸದ ಸಾಲಕ್ಕೆ ಈ ಮಾರ್ಜಿನ್‌ ಮನಿ ಶೇ.15 ಆಗಿದೆ.

ಅರ್ಹ ವೆಚ್ಚ: ಅರ್ಹ ವೆಚ್ಚದಡಿಯಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಎಲ್ಲಾ ವೆಚ್ಚಗಳನ್ನೂ – ಹಾಸ್ಟೆಲ್ ವೆಚ್ಚ ಸಹಿತ ಸೇರಿಸಲಾಗಿದೆ. ಈ ಕೆಳಗಿನ ವೆಚ್ಚಗಳು ವಿದ್ಯಾ ಸಾಲಕ್ಕೆ ಅರ್ಹವಾಗಿವೆ:

•ಟ್ಯೂಷನ್‌/ಲೈಬ್ರರಿ/ಎಕ್ಸಾಮಿನೇಷನ್‌/ಲ್ಯಾಬ್‌ ಫೀಸ್‌

•ಹಾಸ್ಟೆಲ್ ವೆಚ್ಚ

•ಪುಸ್ತಕಗಳು, ಕಂಪ್ಯೂಟರ್‌, ಯುನಿಫಾರ್ಮ್ ಇತರ ಕಲಿಕಾ ಪರಿಕರಗಳು

•ಪ್ರಾಜೆಕ್ಟ್ ವರ್ಕ್‌/ಸ್ಟಡಿ ಟೂರ್‌ (ಒಂದು ಮಿತಿಯೊಳಗೆ)

•ವಿದೇಶಿ ವಿದ್ಯಾ ಸಂಸ್ಥೆಯಾದರೆ ಹೋಗಿ ಬರುವ ಪ್ರಯಾಣ ವೆಚ್ಚ

•ಭದ್ರತಾ ಠೇವಣಿ (ಒಂದು ಮಿತಿಯೊಳಗೆ)

•ವಿದ್ಯಾರ್ಥಿಯ ಅನುಕೂಲಕ್ಕಾಗಿ ಒಂದು ಟು ವೀಲರನ್ನು ಕೂಡಾ ಕೆಲವು ಬ್ಯಾಂಕುಗಳು ನೀಡುವುದನ್ನು ಕಾಣಬಹುದು.

ಭದ್ರತೆ: ವಿದ್ಯಾ ಸಾಲವನ್ನು ಸುಲಭವಾಗಿ ಜನಸಾಮಾನ್ಯರಿಗೆ ತಲುಪಿಸಲು ಸರಕಾರವು ವಿಶೇಷ ಶ್ರಮ ವಹಿಸುತ್ತಿದೆ. ಒಂದು ಮಿತಿಯ ಒಳಗೆ ಯಾವುದೇ ಜಾಮೀನು ಇಲ್ಲದೆ ವಿದ್ಯಾ ಸಾಲ ಸಿಗುತ್ತದೆ. ಈ ರೀತಿ ಯಾವುದೇ ಜಾಮೀನು ಇಲ್ಲದೆ ಅತಿ ಸುಲಭವಾಗಿ ಸುಲಭ ಬಡ್ಡಿದರದಲ್ಲಿ ಸಿಗುವ ಸಾಲ ಇದೊಂದೆ.

ರೂ. 4 ಲಕ್ಷದವರೆಗಿನ ವಿದ್ಯಾ ಸಾಲಕ್ಕೆ ಸ್ವಂತ ಶ್ಯೂರಿಟಿ ಮಾತ್ರ ಸಾಕು.

ರೂ. 4 ಲಕ್ಷದಿಂದ ರೂ. 7.5 ಲಕ್ಷದವರೆಗೆ ಒಬ್ಬ ಮೂರನೆಯ ವ್ಯಕ್ತಿಯ ಗ್ಯಾರಂಟಿಯ ಅಗತ್ಯವಿರುತ್ತದೆ. ಇಲ್ಲಿ ಒಬ್ಬ ಮೂರನೆಯ ವ್ಯಕ್ತಿ ಸಾಲ ಪಡೆದ ವ್ಯಕ್ತಿಗಳ ಪರವಾಗಿ ಗ್ಯಾರಂಟಿ ನಿಲ್ಲುತ್ತಾನೆ. ಇದರ ಅರ್ಥ ಏನೆಂದರೆ ಸಾಲಗಾರ ಮರುಪಾವತಿ ಮಾಡಲಿಲ್ಲ ಎಂದಾದರೆ ಗ್ಯಾರಂಟಿ ನೀಡಿದ ವ್ಯಕ್ತಿಗೆ ಸಾಲ ಕಟ್ಟುವಂತೆ ನೋಟೀಸು ಬರುತ್ತದೆ. ಈ ವಿಷಯವನ್ನು ಗ್ಯಾರಂಟಿ ನೀಡುವ ವ್ಯಕ್ತಿಯು ಚೆನ್ನಾಗಿ ಅರಿತಿರಬೇಕು. ಸಾಲ ಪಡೆಯುವವರೂ ಅನವಶ್ಯಕ ಯಾರ್ಯಾರನ್ನೋ ಗ್ಯಾರಂಟಿ ಕೇಳಿ ಆ ಮೇಲೆ ಸಾಲ ಮರು ಪಾವತಿ ಮಾಡದೆ ಅವರೊಡನೆ ಬಾಂಧವ್ಯ ಹಾಳು ಮಾಡಿಕೊಳ್ಳಬಾರದು.

ರೂ. 7.5 ಲಕ್ಷ ಮೀರಿದ ವಿದ್ಯಾ ಸಾಲಕ್ಕೆ ಮಾತ್ರ ಕೊಲ್ಲಾಟರಲ್ ಅಥವಾ ಜಾಮೀನು ಅಗತ್ಯ. ಮನೆ, ಎಫ್ಡಿ, ವಿಮಾ ಪಾಲಿಸಿ, ಎನ್‌ಎಸ್‌ಸಿ, ಶೇರು, ಡಿಬೆಂಚರು, ಮ್ಯೂಚುವಲ್ ಫ‌ಂಡ್‌, ಚಿನ್ನ ಇತ್ಯಾದಿ ಜಾಮೀನುಗಳನ್ನು ನೀಡಬಹುದು. ಇದರ ಜೊತೆಗೆ ಭವಿಷ್ಯದ ಆದಾಯವನ್ನು ಕೂಡಾ ಗ್ಯಾರಂಟಿಯೆಂದು ಬರೆದುಕೊಡುವಂತೆ ಬ್ಯಾಂಕು ಕೇಳಬಹುದು.

ವಿದ್ಯಾರ್ಥಿಯ ಹೆಸರಿನಲ್ಲಿ ಸಾಲ ಇದ್ದರೆ ಎಲ್ಲಾ ಸಂದರ್ಭಗಳಲ್ಲೂ ಹೆತ್ತವರು/ರಕ್ಷಕರು ಕೋ-ಎಪ್ಲಿಕಂಟ್ (ಸಹ-ಸಾಲಗಾರ) ಆಗಿ ಸಹಿ ಹಾಕಬೇಕಾಗುತ್ತದೆ. ಸಾಲ ಮರುಪಾವತಿಯ ಜವಾಬ್ದಾರಿ ಇಬ್ಬರ ಮೇಲೂ ಇರುತ್ತದೆ.

ದಾಖಲೆಗಳು: ವಿದ್ಯಾ ಸಾಲವನ್ನು ಪಡಕೊಳ್ಳುವ ಸಂದರ್ಭಗಳಲ್ಲಿ ಬ್ಯಾಂಕು ನಿಮ್ಮನ್ನು ಈ ಕೆಳಗಿನ ದಾಖಲೆಗಳನ್ನು/ಕಾಗದಪತ್ರಗಳನ್ನು ಕೇಳಬಹುದು:

1. ನಿಮ್ಮ ಐಡಿ/ವಿಳಾಸ ಪುರಾವೆ/ವಯಸ್ಸು ಪುರಾವೆ

2. ನಿಮ್ಮ/ಹೆತ್ತವರ ಆದಾಯದ ಪುರಾವೆ/ಇಂಕಮ್‌ ಟ್ಯಾಕ್ಸ್‌ ಪೇಪರ್ಸ್‌

3. ಪ್ಯಾನ್‌ ಕಾರ್ಡ್‌

4. ಬ್ಯಾಂಕ್‌ ಸ್ಟೇಟ್ಮೆಂಟ್

5. ಎಸ್‌ಎಸ್‌ಎಲ್ಸಿ/ಪಿಯುಸಿ ಮಾರ್ಕ್ಸ್ಶೀಟ್

6. ಫೀಸ್‌, ಖರ್ಚುವೆಚ್ಚಗಳ ವಿವರ, ವಿದ್ಯಾ ಸಂಸ್ಥೆಯಿಂದ

7. ಎಡ್ಮಿಶನ್‌ ಲೆಟರ್‌/ ಪ್ರವೇಶಾತಿ ಪತ್ರ, ವಿದ್ಯಾ ಸಂಸ್ಥೆಯಿಂದ

8. ಭಾವಚಿತ್ರಗಳು

9. ಶ್ಯೂರಿಟಿ ಅಥವಾ ಜಾಮೀನು ಸಂಬಂಧಿ ಕಾಗದ ಪತ್ರಗಳು, ಅಗತ್ಯ ಬಂದಂತೆ.

ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕು ನಿಮ್ಮನ್ನು ಒಂದು ಎಸ್‌ಬಿ ಖಾತೆ ತೆರೆಯುವಂತೆ ಕೇಳಿಕೊಂಡೀತು. ಆಡಳಿತಾತ್ಮಕವಾಗಿ ಸುಲಭ ವ್ಯವಹಾರಕ್ಕಾಗಿ ಇದರ ಅಗತ್ಯ ಬೀಳಬಹುದು. ಬ್ಯಾಂಕು ಅದೇ ಖಾತೆಗೆ ದುಡ್ಡನ್ನು ಸಮಯಾನುಸಾರ ಅಗತ್ಯ ಬಂದಂತೆ ಹಾಕುತ್ತದೆ ಹಾಗೂ ಮರುಪಾವತಿಯ ಸಮಯದಲ್ಲೂ ಅದೇ ಖಾತೆಯಿಂದ ಇಎಂಐ ಮೊತ್ತವನ್ನು ವಾಪಾಸು ಪಡಕೊಳ್ಳುತ್ತದೆ.

(ವಿ.ಸೂ: ಇದು ಸ್ಥೂಲವಾದ ಮಾರ್ಗದರ್ಶಿ ಮಾತ್ರ. ಖಚಿತವಾದ ಮಾಹಿತಿಗೆ ಬ್ಯಾಂಕಿನ ಶಾಖೆಗಳನ್ನು ಸಂಪರ್ಕಿಸಿರಿ)

Advertisement

Udayavani is now on Telegram. Click here to join our channel and stay updated with the latest news.

Next