Advertisement

ವಿದುಷಿ ಸರೋಜಾ ಶ್ರೀನಾಥ್‌, ಗೀತಾ ಮಂಜುನಾಥ್‌ರ ಕೃತಿಗಳ ಬಿಡುಗಡೆ

12:03 PM Aug 07, 2018 | |

ಮುಂಬಯಿ: ಕಲೆ  ಹುಟ್ಟುವುದು ಭಾವನೆಯಿಂದ. ಹಾಡು-ಸಂಗೀತ-ಕುಣಿತ  ಇವುಗಳ ಮೂಲ ನಮ್ಮ ಒಳಗಡೆ ಇದೆ. ನಮ್ಮ ಎದೆ ಬಡಿತವೇ ನಮ್ಮನ್ನು ಕುಣಿಯೋ ಹಾಗೆ ಮಾಡುತ್ತದೆ. ಹಾಡು ಎಂದಾಗ ಸುಖ, ದುಖ ಎಲ್ಲವೂ ಇರಬಹುದು. ಹೀಗಾಗಿ ಭಾವ ಎನ್ನುವುದು ಎದೆಯಾಳದಿಂದ ಬರಬೇಕು ಎಂದು ರಂಗಕರ್ಮಿ, ನೇಸರು ಪತ್ರಿಕೆಯ ಸಂಪಾದಕ ಮಂಡಳಿಯ ಡಾ| ಬಿ. ಆರ್‌. ಮಂಜುನಾಥ್‌ ನುಡಿದರು.

Advertisement

ಕನ್ನಡ ವಿಭಾಗ ಮುಂಬಯಿ ವಿವಿ ಮತ್ತು ಕನಕ ಸಭಾ ಪರ್‌ಫಾರ್ಮಿಂಗ್‌ ಆರ್ಟ್ಸ್ ಸೆಂಟರ್‌ ಚೆಂಬೂರ್‌ ಇವರ ಸಂಯುಕ್ತ ಆಶ್ರಯದಲ್ಲಿ ಜು. 14 ರಂದು ಮಧ್ಯಾಹ್ನ ಚೆಂಬೂರ್‌ನ ಆರ್‌.ಸಿ.ಎಫ್‌. ಅಕಾಡೆಮಿ ಹಾಲ್‌ನಲ್ಲಿ  ನಡೆದ ಮೂರು ಕೃತಿಗಳ ಬಿಡುಗಡೆ ಮತ್ತು ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮುಂಬಯಿ ವಿವಿ  ಕನ್ನಡ ವಿಭಾಗ ಪ್ರಕಟಿಸಿದ ಗೀತಾ ಮಂಜುನಾಥ್‌ ರಚನೆಯ “ಕಲಾ ಸೌರಭ ಸರೋಜಾ ಶ್ರೀನಾಥ್‌’ ಕೃತಿಯನ್ನು ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ, ರಂಗ ನಿರ್ದೇಶಕ ಡಾ| ಭರತ್‌ಕುಮಾರ್‌ ಪೊಲಿಪು ಬಿಡುಗಡೆಗೊಳಿಸಿ ಮಾತನಾಡಿ,  ಸರೋಜಾ ಶ್ರೀನಾಥ್‌ ಅವರು ತಮ್ಮ ಬರಹಗಳಿಂದ ಖ್ಯಾತರಾದವರು. ಅವರ ಗ್ರಹಿಕೆಯ ವ್ಯಾಪ್ತಿ ಬಹಳ ವಿಶಾಲವಾದುದು. ಈ ಕೃತಿಯಲ್ಲಿ ಅವರ ಸಾಧನೆಗಳನ್ನು ಸಮರ್ಪಕವಾಗಿ ತಿಳಿಸಲಾಗಿದೆ ಎಂದರು.

ಸರೋಜಾ ಶ್ರೀನಾಥ್‌ ಅವರ “ಜಗದಗಲ ಕುತೂಹಲ’ ಮತ್ತು “ಸಂಗೀತ ಸಾಹಿತ್ಯ ಅನುಸಂಧಾನ’ ಕೃತಿಗಳನ್ನು ಪರಿಚಯಿಸಿದ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು,  ಇಲ್ಲಿನ ಲೇಖನಗಳೆಲ್ಲ  ಹೃದಯದಿಂದ ಬಂದಿರುವ ಮಾತುಗಳೇ ಆಗಿವೆ. ಹಲವು ಲೇಖನಗಳ ನಡುವೆ ಉಪಕತೆಗಳ ಮೂಲಕ ಶಿಕ್ಷಣ ನೀಡುವ ಕ್ರಮವನ್ನು ಅನುಸರಿಸಿದ್ದಾರೆ. ಇಲ್ಲಿ ಹೊಸ  ವಿಷಯಗಳ ಜ್ಞಾನವೂ ಸಿಗುತ್ತದೆ  ಎಂದರು.

ಅತಿಥಿಗಳಾಗಿದ್ದ ಕತೆಗಾರ, ಸಂಘಟಕ, “ಅಕ್ಷಯ’ ಸಂಪಾದಕ ಡಾ| ಈಶ್ವರ ಅಲೆವೂರು, ರಂಗಕರ್ಮಿ ಮಂಜುನಾಥಯ್ಯ ಅವರು ಮಾತನಾಡಿದರು. 

Advertisement

“ಕಲಾ ಸೌರಭ ಸರೋಜಾ ಶ್ರೀನಾಥ್‌’ ಕೃತಿಯನ್ನು ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್‌ ಶೆಟ್ಟಿ ಪರಿಚಯಿಸಿದರು. 
ಕೃತಿಕಾರರಾದ ವಿದುಷಿ ಸರೋಜಾ ಶ್ರೀನಾಥ್‌ ಮಾತನಾಡಿದರು. ಇನ್ನೋರ್ವ ಕೃತಿಕಾರರಾದ ಗೀತಾ ಮಂಜುನಾಥ್‌ ಕೃತಜ್ಞತೆ ಸಲ್ಲಿಸಿದರು.
“ಜಗದಗಲ ಕುತೂಹಲ’ ಮತ್ತು “ಸಂಗೀತ-ಸಾಹಿತ್ಯ-ಅನುಸಂಧಾನ’ ಕೃತಿಗಳನ್ನು ಅಭಿಜಿತ್‌ ಪ್ರಕಾಶನ ಪ್ರಕಟಿಸಿದರೆ, “ಕಲಾಸೌರಭ ಸರೋಜಾ ಶ್ರೀನಾಥ್‌’  ಕೃತಿಯನ್ನು ಮುಂಬಯಿ ಕನ್ನಡ ವಿಭಾಗ ಪ್ರಕಟಿಸಿದೆ. 

ಮುಂಬಯಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವಿಭಾಗ ನಲ್ವತ್ತರ ಸಂಭ್ರಮದ ಲ್ಲಿದೆ. ವಿಭಾಗ ತನ್ನ ಚಲನಶೀಲತೆಯನ್ನು ಕಾಯ್ದುಕೊಂಡಿದೆ. ಇಂದಿನ ಕೃತಿಗಳ ಬಿಡುಗಡೆ, ನೃತ್ಯ ಸಂಭ್ರಮ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. 
 ಡಾ|  ಸಿರಿರಾಮ ಮತ್ತು ಡಾ| ಜಿ. ಎನ್‌. ಉಪಾಧ್ಯ ಅವರು ಗಣ್ಯರನ್ನು ಗೌರವಿಸಿದರು. 

ಶ್ಯಾಮಲಾ ರಾಧೇಶ್‌ ಪ್ರಾರ್ಥನೆಗೈ ದರು. ನಳಿನಾ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಶೆಟ್ಟಿ ವಂದಿಸಿದರು. ಆರಂಭದಲ್ಲಿ ಕನಕ ಸಭಾ ಪರ್‌ಫಾರ್ಮಿಂಗ್‌ ಆರ್ಟ್ಸ್, ಚೆಂಬೂರ್‌ ಇದರ ವಿದ್ಯಾರ್ಥಿಗಳಿಂದ ಡಾ| ಸಿರಿ ರಾಮ ನಿರ್ದೇಶನದಲ್ಲಿ  ವಿವಿಧ ನೃತ್ಯ ಕಾರ್ಯಕ್ರಮಗಳು ಜರಗಿದವು.  

ಕಾರ್ಯಕ್ರಮದ ಯಶಸ್ಸಿಗೆ ಕನ್ನಡ ವಿಭಾಗದ ಸಂಶೋಧನ ಸಹಾಯಕರಾದ ಸುರೇಖಾ ದೇವಾಡಿಗ, ಕುಮುದಾ ಆಳ್ವ, ಅನಿತಾ ಶೆಟ್ಟಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next