ನಿಟ್ಟೆ ನೆಲ್ಲಿಮಾರು ಮನೆಯಲ್ಲಿ ಇತ್ತೀಚೆಗೆ ವಿದುರಾತಿಥ್ಯ-ಕರ್ಣಭೇದನ ತಾಳಮದ್ಧಳೆ ಜರುಗಿತು. ವಿದುರನ ಪಾತ್ರ ಬಹಳ ಭಾವನಾತ್ಮಕವಾದುದು. ಈ ಪಾತ್ರದ ಪೋಷಣೆ ಕೂಡಾ ಬಲು ವಿಶಿಷ್ಟ. ದಾಯಾದಿಗಳ ಕಲಹ ವಿಚಾರವಾಗಿ ವಿದುರ ದುಃಖದಲ್ಲಿದ್ದಾಗ ಸಂಧಾನಕ್ಕಾಗಿ ಕೃಷ್ಣ ಹಸ್ತಿನೆಗೆ ಬರುತ್ತಾನಂತೆ, ನನಗೂ ಒಮ್ಮೆ ನೋಡಬೇಕಿತ್ತು, ಆತನ ಅತ್ತೆ ಕುಂತಿ ಹೇಗೂ ನನ್ನಲ್ಲಿಯೇ ಇದ್ದಾಳೆ ಎಂದು ವಿದುರ ಕೃಷ್ಣ ಧ್ಯಾನದಲ್ಲಿರಬೇಕಾದರೆ , ಕುದುರೆ ಸಪ್ಪಳ ಕೇಳಿ ಕಣ್ತೆರೆದಾಗ ಕೃಷ್ಣನ ರಥ ವಿದುರನ ಮನೆಯಂಗಳದಲ್ಲಿ ನಿಂತಿತ್ತು.
ಕೃಷ್ಣನಿಗಾಗಿ ಅರಮನೆ, ಭೀಷ್ಮ, ದ್ರೋಣರ ಮನೆ ಸಹಿತ ಹಸ್ತಿನೆಯ ಎಲ್ಲಾ ಪ್ರಮುಖ ಮನೆಗಳಲ್ಲೂ ಆರೋಗಣೆ ಸಿದ್ಧಪಡಿಸಿಡಲಾಗಿತ್ತು.ಆದರೆ ಏನನ್ನೂ ಸಿದ್ಧಪಡಿಸದ ವಿದುರನ ಮನೆಗೇ ಕೃಷ್ಣ ಹಸಿವು ಹಸಿವು ಎಂದಾಗ ದೇವರೇ ಬಂದ ಖುಶಿಯಲ್ಲಿ ಭಾವನಾತ್ಮಕ ವಾಗಿ ವಿಚಾರಿಸಿ ಒಂದು ಕುಡುತೆ ಹಾಲು ಕೊಡುತ್ತಾನೆ. ಕುಡಿಯುವಾಗ ಒಂದು ಬಿಂದು ಹಾಲು ಕೆಳಗೆ ಬಿದ್ದು ನದಿಯಾಗಿ ಹರಿಯುತ್ತಿರಬೇಕಾದರೆ ಊರ ಜನರೆಲ್ಲಾ ತುಂಬಿ ತಾ, ತುಂಬಿ ತಾ, ಎಂದು ಕೊಡಪಾನಗಳಲ್ಲಿ ತುಂಬುತ್ತಿರಬೇಕಾದರೆ ಇತ್ತ ವಿದುರ ಕೃಷ್ಣನಲ್ಲಿ ಹೊಟ್ಟೆ ತುಂಬಿತಾ ಎನ್ನುತ್ತಿದ್ದ.
ಇತ್ತ ಕೃಷ್ಣ ಕರ್ಣನಿಗೆ ನಿನ್ನನ್ನು ಕ್ಷತ್ರಿಯರಂತೆಯೇ , ಕೌರವ ಪಾಂಡವರಂತೆಯೇ ನಿನ್ನನ್ನೂ ಗುರುತಿಸುವಂತಾಗಲಿ ನೀನು ಸೂತನ ಮಗ ಅಲ್ಲ ಎಂದಾಗ, ಕರ್ಣ ಅದು ಹೇಗೆ ಸಾಧ್ಯ ? ನನ್ನನ್ನು ಕಂಡೊಡನೆಯೇ ಮಾರುದೂರ ಓಡುವವರಿದ್ದಾರೆ, ಪಂಕ್ತಿಯ ಕೊನೆಯಲ್ಲಿ ನಾನು ಊಟಕ್ಕೆ ಕುಳಿತರೆ ಅಲ್ಲಿಂದಲೇ ಓಡುವ ಜನರೇ ಹಸ್ತಿನಾವತಿಯ ಅರಮನೆಯಲ್ಲಿರಬೇಕಾದರೆ ನಾನು ಹೇಗೆ ಅವರಂತೆ ಕ್ಷತ್ರಿಯನಾಗಲು ಸಾಧ್ಯ ಎಂದಾಗ ಕೃಷ್ಣ ಆತನ ಜನ್ಮ ರಹಸ್ಯ ತಿಳಿಸುತ್ತಾನೆ.
ಕೃಷ್ಣನ ಕುಂತಿ ಸೂಚನೆಯಂತೆ ಕರ್ಣನಲ್ಲಿ ತೆರಳುತ್ತಾಳೆ. ಮಗನೇ ನನ್ನಿಂದಪರಾಧವಾಯಿತು, ಕ್ಷಮಿಸು ಮಗನೇ ಎಂದು ಗೋಗರೆಯುತ್ತಾಳೆ. ಆವಾಗ ಕರ್ಣ ಜನನೀ ಎಂದು ಕರೆಯುತ್ತಾ ಯಾವ ತಾಯಿ ಮಗುವಿಗೆ ಜನ್ಮ ನೀಡುತ್ತಾಳ್ಳೋ ಅವಳೇ ಜನನಿ, ರಾಧೆ ನನ್ನ ಸಾಕು ತಾಯಿ, ನೀನು ನನ್ನ ಹೆತ್ತವ್ವೆ. ಲೋಕಾಪವಾದಕ್ಕೆ ಹೆದರಿ ಹೀಗೆ ಮಾಡಿದೆ ನಿನ್ನದೇನೂ ತಪ್ಪಿಲ್ಲ ಎಂದಾಗ , ಕುಂತಿ ಬಾ ಮಗನೆ ಒಮ್ಮೆ ನನ್ನನ್ನು ತಬ್ಬಿ ಅಮ್ಮಾ ಎಂದು ಕರೆ ಎಂದಾಗ , ಅಮ್ಮಾ ಜನನೀ ಎಂದು ಕರೆದಾಗ ಸೇರಿದ ಶ್ರೋತೃಗಢಣದ ಕಣ್ಣು ಮಂಜಾಗಿತು. ವಿದುರಾತಿಥ್ಯ-ಕರ್ಣಭೇದನದ ಕೃಷ್ಣನಾಗಿ ಹರೀಶ ಬಳಂತಿಮೊಗರು ಭಾವನಾತ್ಮಕವಾಗಿ ಸುಂದರ ಚಿತ್ರಣ ನೀಡಿದರು.
ವಿದುರನಾಗಿ ಪ್ರೊ| ಸದಾಶಿವ ಶೆಟ್ಟಿಗಾರ ಭಕ್ತಿರಸ ಪ್ರಧಾನ ಅರ್ಥಗಾರಿಕೆ ನೀಡಿದರು. ಉಜಿರೆ ಅಶೋಕರ ಕರ್ಣನಂತೂ ಕೃಷ್ಣನಲ್ಲೂ, ಕುಂತಿಯಲ್ಲೂ ಭಾವಪರವಶರಾಗಿ , ಸೂರ್ಯನಲ್ಲಿ ಸ್ವಲ್ಪ ರಂಜನೆಯಾಗಿ ರಂಜಿಸಿದರು. ಕುಂತಿಯಾಗಿ ವಿದ್ಯಾ ಕೊಳ್ಯೂರು ಪುತ್ರ ಪ್ರೇಮದ ಹೊಳೆ ಹರಿಸಿ,ಕರುಣಾ ರಸದಲ್ಲಿ ಸೇರಿದ ಜನರಲ್ಲೂ ಅಶ್ರುಧಾರೆ ಇಳಿಸಿದರು, ಸೂರ್ಯನಾಗಿ ಸದಾಶಿವ ನೆಲ್ಲಿಮಾರ್ ಮಿಂಚಿ ಮರೆಯಾದರು.
ಹಾಡುಗಾರಿಕೆಯಲ್ಲಿ ಬಲಿಪ ಶಿವಶಂಕರರು, ಚಂಡೆಯಲ್ಲಿ ದೇವಾನಂದರು, ಮದ್ದಳೆಯಲ್ಲಿ ಶಿತಿಕಂಠ ಭಟ್ಟರು, ಚಕ್ರತಾಳದಲ್ಲಿ ಮುರಾರಿ ವಿಟ್ಲ ರಂಜಿಸಿದರು.
ಸದಾಶಿವ ರಾವ್