ಧಾರವಾಡ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಡಾ|ಬಿ.ಆರ್. ಅಂಬೇಡ್ಕರ್ ಅವರ 125 ನೇ ಜಯಂತಿ ವರ್ಷಾಚರಣೆ ಅಂಗವಾಗಿ ಏರ್ಪಡಿಸಿರುವ “ಭಾರತ ಭಾಗ್ಯ ವಿಧಾತ’ ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮ ಫೆ.17ರಂದು ಸಂಜೆ 6:30 ಗಂಟೆಗೆ ನಗರದ ಕನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ “ಭಾರತ ಭಾಗ್ಯ ವಿಧಾತ ಧ್ವನಿ ಬೆಳಕು ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳ ಬಿಡುಗಡೆ ಹಾಗೂ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನಾಗರಿಕರು, ಯುವ ಜನರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಮುಖಂಡರು, ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಭಾರತದ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಡಾ|ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಜಾತಿ-ವರ್ಗಕ್ಕೆ ಸೀಮಿತರಾದವರಲ್ಲ. ಇಡೀ ಜಗತ್ತಿಗೆ ಮಾದರಿಯಾದ ಜ್ಞಾನದ ಖಣಿಯಾಗಿದ್ದಾರೆ. ಅವರ ಜೀವನ ಸಾಧನೆಗಳನ್ನು ಅರಿಯುವುದರ ಜೊತೆಗೆ ಭಾರತದ ಆಧುನಿಕ ಇತಿಹಾಸ ಅರಿಯುವ ಸದವಕಾಶ ಧ್ವನಿ ಬೆಳಕು ಕಾರ್ಯಕ್ರಮದ ಮೂಲಕ ಒದಗಿ ಬಂದಿದೆ. ಜಿಲ್ಲೆಯ ಜನರು ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕ್ರಮ ವೀಕ್ಷಿಸಿ ಸದುಪಯೋಗ ಪಡೆಯಬೇಕು ಎಂದರು.
ಜಿಪಂ ಸಿಇಒ ಸ್ನೇಹಲ್ ಆರ್ ಮಾತನಾಡಿ, ವಿನೂತನವಾಗಿ ಮೂಡಿ ಬಂದಿರುವ ಭಾರತ ಭಾಗ್ಯ ವಿಧಾತ ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮ ನಗರದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಈ ಅವಕಾಶವನ್ನು ಸಾಂಸ್ಕೃತಿಕ ಹಾಗೂ ವಿದ್ಯಾನಗರಿಯ ಜನ ಬಳಸಿಕೊಳ್ಳಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಡಾ|ಬಿ.ಆರ್. ಅಂಬೇಡ್ಕರ್ ಅವರು ಆರ್ಥಿಕ, ಯೋಜನಾ ತಜ್ಞರಾಗಿ, ಸಾಮಾಜಿಕ ಸುಧಾರಕರಾಗಿ ಮಾಡಿದ ಬಹುಮುಖೀ ಕೆಲಸಗಳನ್ನು ಈ ಧ್ವನಿ ಬೆಳಕು ಕಾರ್ಯಕ್ರಮ ಸುಂದರವಾಗಿ ಅನಾವರಣಗೊಳಿಸಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕ ಸದಶಿವ ಮರ್ಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಾರದಾ ಕೋಲಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಸ್. ದೊಡ್ಡಮನಿ ಇದ್ದರು.