Advertisement

ಬರ ನಿರ್ವಹಿಸದಿದ್ದರೆ ವಿಧಾನಸೌಧ ತೊಲಗಿ ಚಳವಳಿ

09:45 PM Jun 11, 2019 | Lakshmi GovindaRaj |

ಮೈಸೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಜನರ ಬವಣೆಗೆ ಸ್ಪಂದಿಸುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ವಿಫ‌ಲವಾಗಿರುವುದರಿಂದ ರಾಜ್ಯಪಾಲರನ್ನು ಭೇಟಿ ಮಾಡಿ ಬರ ಪರಿಹಾರ ಕಾರ್ಯವನ್ನು ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡುವುದಾಗಿ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ತಲೆಕೆಡಿಸಿಕೊಂಡಿದ್ದರೆ, ಶಾಸಕರುಗಳು ಮಂತ್ರಿಯಾಗಲು ಪ್ರಯತ್ನ ಪಡುತ್ತಿದ್ದಾರೆ.

ವಿರೋಧಪಕ್ಷದವರು ಕುರ್ಚಿ ಮೇಲಿನ ಆಸೆಯಿಂದ ಈ ಸರ್ಕಾರ ಯಾವಾಗ ಹೋಗುತ್ತೋ ಎಂದು ಕಾಯುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವ ಪಕ್ಷದವರು ಕುರ್ಚಿ ಉಳಿಸಿಕೊಳ್ಳಲು, ವಿರೋಧ ಪಕ್ಷದಲ್ಲಿರುವವರು ಕುರ್ಚಿ ಹಿಡಿಯಲು ಗಮನಹರಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಸರಿಯಾಗಿ ಆಡಳಿತ ನಡೆಸಿ ಇಲ್ಲವೇ ವಿಧಾನಸೌಧ ಖಾಲಿ ಮಾಡಿ ಎಂದು ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರದಿಂದ ಹಣ ತರಿಸಿ: ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಬರ ಪರಿಸ್ಥಿತಿ ಅಧ್ಯಯನ ನಡೆಸುತ್ತಿರುವುದನ್ನು ಸ್ವಾಗತಿಸಿದ ಅವರು, ವಿರೋಧ ಪಕ್ಷದ ನಾಯಕರು ಬರ ಅಧ್ಯಯನ ಮಾಡಿದರೆ ಸಾಲದು, ಸರ್ಕಾರದ ಮೇಲೆ ಛಾಟಿ ಬೀಸಬೇಕು. ಬರ ಪರಿಹಾರ ಸಂಬಂಧ ಹೆಚ್ಚಿನ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರಬೇಕು ಎಂದು ಆಗ್ರಹಿಸಿದರು.

ಪ್ರವಾಸ: ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ರೈತ ಸಂಘದ ರಾಜ್ಯ ಪದಾಧಿಕಾರಿಗಳ ಹತ್ತು ಜನರ ತಂಡ ಜೂನ್‌ 13ರಿಂದ ಹೈದ್ರಾಬಾದ್‌-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವುದಾಗಿ ತಿಳಿಸಿದರು.

Advertisement

ಪುನಶ್ಚೇತನಮಾಡಿ: ಮಂಡ್ಯ ಜಿಲ್ಲೆಯ ಮೈಷುಗರ್‌ ಮತ್ತು ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗಳ ಉಳಿವಿಗೆ ಒತ್ತಾಯಿಸಿ ಸದ್ಯದಲ್ಲೇ ಮಂಡ್ಯದಲ್ಲಿ ಸುಮಾರು ಹತ್ತು ಸಾವಿರ ರೈತರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಮೈಸೂರು ಜಿಲ್ಲೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಹೋರಾಟ ರೂಪಿಸಲಾಗುವುದು ಎಂದರು.

ಸಾಲಮನ್ನಾ ಗೊಂದಲ: ರೈತರ ಸಾಲಮನ್ನಾ ವಿಷಯದಲ್ಲಿ ಇನ್ನೂ ಗೊಂದಲವಿದೆ. ಸರ್ಕಾರ ಸಾಲಮನ್ನಾ ಮಾಡಿದ್ದೇವೆ ಎನ್ನುತ್ತಿದೆ. ಬ್ಯಾಂಕುಗಳು ರೈತರಿಗೆ ಸಾಲ ಪಾವತಿಸುವಂತೆ ನೋಟಿಸ್‌ ನೀಡುತ್ತಿವೆ. ಹೀಗಾಗಿ ಸರ್ಕಾರ ಸಾಲಮನ್ನಾ ಕುರಿತು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಜಿಂದಾಲ್‌ ಕಂಪನಿಗೆ ಕಡಿಮೆ ಬೆಲೆಗೆ ಸಾವಿರಾರು ಎಕರೆ ಭೂಮಿ ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿರುವುದು ಸ್ವಾಗತಾರ್ಹ ಎಂದರು. ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಭತ್ತ ಖರೀದಿ ಕೇಂದ್ರ ತೆರೆಯಿರಿ: ಅನೇಕ ಕಡೆಗಳಲ್ಲಿ ಭತ್ತದ ಕೊಯ್ಲು ನಡೆಯುತ್ತಿದ್ದು, 1410 ರಿಂದ 1420 ರೂ.ಗಳಿಗೆ ಭತ್ತ ಮಾರಾಟ ಆಗುತ್ತಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಭತ್ತಕ್ಕೆ 1750 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರ ಒಂದು ವಾರದೊಳಗೆ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next