ಬೆಂಗಳೂರು: ವರ್ಷದ ಮೊದಲ ಅಧಿವೇಶನವನ್ನು ಕೇವಲ ಐದು ದಿನಗಳಿಗೆ ಸೀಮಿತಗೊಳಿಸಿದ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಲಾಪದ ದಿನವನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.
ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇದರೊಂದಿಗೆ ಐದು ದಿನಗಳಿಗೆ ಸೀಮಿತವಾಗಿದ್ದ ಅಧಿವೇಶನ ಒಟ್ಟು ಏಳು ದಿನ ನಡೆಯುವಂತಾಗಿದೆ. ಹೀಗಾಗಿ ಶುಕ್ರವಾರದ (ಫೆ. 10) ಬದಲು ಮುಂದಿನ ಮಂಗಳವಾರ (ಫೆ. 14) ಕಲಾಪಕ್ಕೆ ತೆರೆ ಬೀಳಲಿದೆ.
ಕೇವಲ ಐದು ದಿನಗಳ ಕಾಲ ಅಧಿವೇಶನ ಕರೆದಿರುವ ಬಗ್ಗೆ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷರು ಸೋಮವಾರದ ಕಲಾಪ ಮುಗಿಯುತ್ತಿದ್ದಂತೆ ಕಲಾಪ ಸಲಹಾ ಸಮಿತಿ ಸಭೆ ಕರೆದಿದ್ದರು. ಸಭೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕನಿಷ್ಠ 10ರಿಂದ 15 ದಿನ ಕಲಾಪ ನಿಗದಿಪಡಿಸಬೇಕು. ಅದಕ್ಕಾಗಿ ಪ್ರಸಕ್ತ ಅಧಿವೇಶನ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸರ್ಕಾರದ ಕಡೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರತಿಕ್ರಿಯಿಸಿ, ಹಿಂದೇಯೂ 5-6 ದಿನ ಕಲಾಪ ನಡೆದ ಉದಾಹರಣೆ ಇದೆ. ಮೇಲಾಗಿ ಮುಂದಿನ ತಿಂಗಳು ಬಜೆಟ್ ಮಂಡಿಸಬೇಕಿದ್ದು, ಅದಕ್ಕೆ ಸಿದ್ಧತೆಗಳಾಗಬೇಕಿದೆ ಎಂದು ಹೇಳಿದರು.
ಆದರೆ, ಪಟ್ಟು ಬಿಡದ ಜಗದೀಶ್ ಶೆಟ್ಟರ್, ವರ್ಷಕ್ಕೆ 60 ದಿನ ಕಲಾಪ ನಡೆಸುವ ಬಗ್ಗೆ ನೀವೇ ನಿಯಮಾವಳಿ ರೂಪಿಸಿದ್ದೀರಿ. ಕಳೆದ ವರ್ಷ ಮೊದಲ ಅಧಿವೇಶನವನ್ನು 10 ದಿನ ನಡೆಸಿದ್ದೀರಿ. ಈ ಬಾರಿ ಬರ ಪರಿಸ್ಥಿತಿ ಸೇರಿದಂತೆ ಚರ್ಚಿಸಲು ಸಾಕಷ್ಟು ವಿಚಾರಗಳಿದ್ದು, ಅಧಿವೇಶನ ವಿಸ್ತರಿಸಲೇ ಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಮಣಿದ ಸರ್ಕಾರ ಕಲಾಪವನ್ನು ಫೆ. 14ರ ಮಂಗಳವಾರದವರೆಗೆ (ಒಟ್ಟು ಏಳು ದಿನ) ವಿಸ್ತರಿಸಲು ಒಪ್ಪಿಕೊಂಡಿತು ಎಂದು ಮೂಲಗಳು ತಿಳಿಸಿವೆ.