ಬಾಗಲಕೋಟೆ: ಶಿಕ್ಷಕರಿಗಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ. 7ನೇ ವೇತನ ಕೊಡಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದೇನೆ. ಶಿಕ್ಷಕನಾಗಿ ಜಿಲ್ಲೆ, ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಈಗ ಸದನದಲ್ಲಿ ಶಿಕ್ಷಕರ ಪರ ಧ್ವನಿ ಎತ್ತುವ ಆಶಯ ಹೊಂದಿದ್ದು, ಮತದಾರರು ಅವಕಾಶ ನೀಡಬೇಕು ಎಂದು ವಾಯವ್ಯ ಶಿಕ್ಷಕರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ ಬಸನಗೌಡ ಗೌಡರ ಮನವಿ ಮಾಡಿದರು.
ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶಿಕ್ಷಕರಿಗೆ ಮತ್ತು ಶೈಕ್ಷಣಿಕ ರಂಗದಲ್ಲಿ ಬಿಜೆಪಿ-ಕಾಂಗ್ರೆಸ್ ಕೊಡುಗೆ ಶೂನ್ಯ. ಆಯಾ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಶಿಕ್ಷಕರ ಸಮಸ್ಯೆ ಪರಿಹರಿಸುವ ಚಿಂತನೆ ಇಲ್ಲ. ತಮ್ಮ ತಮ್ಮ ರಾಜಕೀಯ ಸ್ಥಾನಮಾನಕ್ಕಾಗಿ ಚುನಾವಣೆಗೆ ಇಳಿದಿದ್ದಾರೆ. ಈವರೆಗೆ ಶಿಕ್ಷಕರಿಗೆ ಮತ್ತು ಶೈಕ್ಷಣಿಕ ರಂಗಕ್ಕೆ ಕಾಂಗ್ರೆಸ್-ಬಿಜೆಪಿ ಮೋಸ ಮಾಡುತ್ತಾ ಬಂದಿವೆ. ಕಳೆದ ಮೂರು ದಶಕಗಳಿಂದ ಶಿಕ್ಷಕರಿಗಾಗಿ ಹೋರಾಟ ಮಾಡಿದ್ದೇನೆ. ಶಿಕ್ಷಕರು, ಶೈಕ್ಷಣಿಕ ರಂಗದ ಬಗ್ಗೆ ನನಗೆ ಅರಿವು ಇದೆ. ಮತದಾರರು ಅವಕಾಶ ನೀಡಬೇಕು ಎಂದರು.
ವಿ.ಪ ಸದಸ್ಯ ಅರುಣ ಶಹಾಪುರ ಸರಿಯಾಗಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಕಾಲೇಜುಗಳಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹರಿಸುವ ಕೆಲಸ ಮಾಡಿಲ್ಲ. ಆದರೆ, ಚುನಾವಣೆಗೆ ಬಂದಾಗ ಅವರಿಗೆ ಶಿಕ್ಷಕರು ನೆನಪಾಗುತ್ತಾರೆ ಎಂದರು.
ಎಎಪಿ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ ಗೌಡರ ಅವರಿಗೆ ಶಿಕ್ಷಕರ ಬಗ್ಗೆ ಶೈಕ್ಷಣಿಕ ರಂಗದ ಬಗ್ಗೆ ಅಪಾರ ಕಾಳಜಿ ಇದೆ. ವಾಸ್ತವಿಕವಾಗಿ ಚಿಂತನೆ ಮಾಡುವ ವ್ಯಕ್ತಿ. ಅವರಿಗೆ ಬಾಹ್ಯ ಬೆಂಬಲ ನೀಡಲು ಎಎಪಿ ಪಕ್ಷ ನಿರ್ಧಾರ ಮಾಡಿದೆ. ಮತದಾರರು ಶ್ರಿನಿವಾಸ ಅವರಿಗೆ ಅವಕಾಶ ನೀಡಬೇಕು ಎಂದರು.
ಎನ್.ಬಿ. ಸಂಪಾಪುರ, ಪ್ರೊ. ಎಸ್.ಬಿ. ಯಳ್ಳೂರ, ಎಂ.ಕೆ. ರೊಟ್ಟಿ, ಬಿ.ಎ. ಬೆಳವಡಿಗಿ ಮುಂತಾದವರು ಉಪಸ್ಥಿತರಿದ್ದರು.