Advertisement

ವಿಧಾನ ಕದ ನ 2023: ಶೆಟ್ಟರನ್ನು ಕಟ್ಟಿ ಹಾಕಬಲ್ಲ ಬಿಜೆಪಿ ಕಲಿ ಯಾರು?

02:18 PM Mar 18, 2023 | Team Udayavani |

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ಶಾಸಕರಾಗಿದ್ದಾರೆ. ಮೂರು ಅವಧಿಯಿಂದಲೂ ಸತತವಾಗಿ ಗೆಲ್ಲುತ್ತಾ ಹ್ಯಾಟ್ರಿಕ್‌ ಬಾರಿಸಿರುವ ಶೆಟ್ಟರನ್ನು ಕಟ್ಟಿಹಾಕಬಲ್ಲ ಬಿಜೆಪಿ ಅಭ್ಯರ್ಥಿ ಯಾರು ಎಂಬುದೇ ಆ ಪಕ್ಷದ ವಲಯದಲ್ಲಿ ಸವಾಲಾಗಿದೆ. ಸರಿಸುಮಾರು 8 ಮಂದಿ ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ಗಾಗಿ ಫೈಟ್‌ ನಡೆಸಿದ್ದಾರೆ.

Advertisement

ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಪುಟ್ಟರಂಗಶೆಟ್ಟರಿಗೆ ಟಿಕೆಟ್‌ ಖಚಿತ ವಾಗಿರುವುದರಿಂದ ಈ ಪಾಳಯದಲ್ಲಿ ಟಿಕೆಟ್‌ಗೆ ಯಾವುದೇ ಪೈಪೋಟಿ ಇಲ್ಲ. ಆದರೆ ಬಿಜೆಪಿ ಟಿಕೆಟ್‌ ಪಡೆಯಲು 8 ಮಂದಿ ಪೈಪೋಟಿ ನಡೆಸಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಪ್ರೊ| ಕೆ.ಆರ್‌. ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ನಿಜಗುಣರಾಜು, ರೈತ ಮುಖಂಡ ಮಲ್ಲೇಶ್‌, ಜಿ.ಪಂ. ಮಾಜಿ ಅಧ್ಯಕ್ಷರಾದ ನಾಗಶ್ರೀ ಪ್ರತಾಪ್‌, ಎಂ. ರಾಮಚಂದ್ರ, ಇಎನ್‌ಟಿ ತಜ್ಞ ಡಾ| ಎ.ಆರ್‌. ಬಾಬು, ಉದ್ಯಮಿ ಪಿ. ವೃಷಭೇಂದ್ರಪ್ಪ ಅವರು ಸ್ಥಳೀಯರಾಗಿದ್ದು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ನಗರದವರಾದ ಕೆಆರ್‌ಡಿಐಎಲ್‌ ಅಧ್ಯಕ್ಷ ಎಂ. ರುದ್ರೇಶ್‌ ಅವರು ಟಿಕೆಟ್‌ಗಾಗಿ ತೀವ್ರ ಹೋರಾಟ ನಡೆಸು­ತ್ತಿದ್ದಾರೆ. ಈ ಎಂಟು ಮಂದಿಯಲ್ಲಿ ಯಾರಿಗೆ ಟಿಕೆಟ್‌ ಸಿಗಬಹುದೆಂಬ ಅಂದಾಜು ಇನ್ನೂ ದೊರೆತಿಲ್ಲ.

ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಪ್ರೊ| ಮಲ್ಲಿಕಾರ್ಜುನಪ್ಪ ಈ ಬಾರಿ ಟಿಕೆಟ್‌ ನೀಡಿದರೆ ಗೆದ್ದೇ ಗೆಲ್ಲುತ್ತೇನೆ. ಸೋತು ನೊಂದಿರುವ ತಮಗೆ ಮತ್ತೂಂದು ಅವಕಾಶ ನೀಡಿ ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿ ಟಿಕೆಟ್‌ ಕೇಳುತ್ತಿದ್ದಾರೆ. ಬಿ.ಎಸ್‌. ಯಡಿಯೂರಪ್ಪನವರ ಕಟ್ಟಾ ಅನುಯಾಯಿಯಾದ ಕೆಆರ್‌ಎಂ ಇತ್ತೀಚಿಗೆ ತಮ್ಮ ಗುರುಗಳನ್ನು ಭೇಟಿಯಾಗಿದ್ದರು. ಅಚ್ಚರಿಯ ನಡೆಯಲ್ಲಿ ಇತ್ತೀಚೆಗೆ, ಮೈಸೂರಿನಲ್ಲಿ ನಡೆದ ಸಚಿವ ವಿ. ಸೋಮಣ್ಣ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿ, ಸೋಮಣ್ಣನವರು ಬಿಜೆಪಿಯನ್ನು ಬಿಡಬಾರದು, ಪಕ್ಷದಲ್ಲೇ ಇರಬೇಕು ಎಂದು ವೇದಿಕೆಯಲ್ಲಿ ಆಗ್ರಹಿಸಿದರು.

ಕ್ಷೇತ್ರದ ಇನ್ನುಳಿದ ಸ್ಥಳೀಯ ಅಭ್ಯರ್ಥಿಗಳ ನಿದ್ದೆ ಕೆಡಿಸಿರುವವರೆಂದರೆ, ಕೆಆರ್‌ಡಿಐಎಲ್‌ ಅಧ್ಯಕ್ಷ ಎಂ. ರುದ್ರೇಶ ಅವರು. ರಾಮನಗರದವರಾದ ರುದ್ರೇಶ ಕಳೆದ ಆರು ತಿಂಗಳ ಹಿಂದೆ ದಿಢೀರ್‌ ಎಂದು ಕ್ಷೇತ್ರ ಪ್ರವೇಶಿಸಿ ಧೂಳೆಬ್ಬಿಸಿದ್ದಾರೆ. ಕೆಆರ್‌ಡಿಐಎಲ್‌ನ ಸರಕಾರಿ ಅನುದಾನ ನೀಡುತ್ತಿದ್ದಾರೆ.
ಕಾಡಾ ಅಧ್ಯಕ್ಷ ನಿಜಗುಣರಾಜು ಅವರು ಕಳೆದ ಎರಡು ಚುನಾವಣೆಗಳಿಂದಲೂ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಆರ್‌ಎಸ್‌ಎಸ್‌ ನಾಯಕರ ಜತೆಗೆ ಸಂಪರ್ಕದಲ್ಲಿದ್ದು ಪಕ್ಷದ ವರಿಷ್ಠರು ತಮಗೆ ಟಿಕೆಟ್‌ ನೀಡಬಹುದೆಂಬ ಅದಮ್ಯ ವಿಶ್ವಾಸದಲ್ಲಿದ್ದಾರೆ. ಹಾಗಾಗಿಯೇ ತಮಗೆ ಪಕ್ಷ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದು, ಬಿಜೆಪಿ ಟಿಕೆಟ್‌ ಸಹ ತಮಗೇ ಎಂಬ ದೃಢವಿಶ್ವಾಸದಲ್ಲಿದ್ದಾರೆ.

ರೈತ ಮುಖಂಡ ಮಲ್ಲೇಶ್‌ ಅವರು ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಏನಾದರೊಂದು ಸದ್ದು ಮಾಡುತ್ತಾ ಟಿಕೆಟ್‌ಗಾಗಿ ತೀವ್ರ ಯತ್ನಗಳನ್ನು ನಡೆಸಿದ್ದಾರೆ. ಯಾವುದೇ ನಾಯಕರ ಜಯಂತಿ ಇರಲಿ, ಕಾರ್ಯಕ್ರಮಗಳಿರಲಿ ಅಲ್ಲಿ ಉಪಾಹಾರ ವಿತರಣೆ, ಸಿಹಿ ವಿತರಣೆ, ಅಪಘಾತದಲ್ಲಿ ಮೃತರಾದವರ ಕುಟುಂಬ­ಗಳ ಭೇಟಿ, ಪರಿಹಾರ ವಿತರಣೆ ಯಂಥ ಚಟುವಟಿಕೆಗಳ ಮೂಲಕ ವರಿಷ್ಠರ ಗಮನ ಸೆಳೆಯಲು ಪ್ರಯತ್ನ ಹಾಕಿದ್ದಾರೆ. ಪಕ್ಷದ ರಾಷ್ಟ್ರಮಟ್ಟದ ಜಿ.ಪಂ. ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಅವರು ಕ್ಷೇತ್ರದಲ್ಲಿ­ರುವ ನಾಯಕ ಸಮಾಜದ ಓಟುಗಳು ಹಾಗೂ ಹಿಂದುಳಿದ ಸಮಾಜಗಳು ಮಾತ್ರವಲ್ಲದೇ ಎಲ್ಲ ಸಮುದಾಯದ ಮತಗಳನ್ನು ಸೆಳೆಯುವ ಮೂಲಕ ಕಾಂಗ್ರೆಸ್‌ನ ಪುಟ್ಟರಂಗ­ಶೆಟ್ಟರಿಗೆ ಪೈಪೋಟಿ ನೀಡಬಲ್ಲ ಸಾಮರ್ಥ್ಯ ತಮಗಿದೆ. ಹಾಗಾಗಿ ತಮಗೆ ಟಿಕೆಟ್‌ ನೀಡಬೇಕೆಂದು ಪ್ರಯತ್ನ ನಡೆಸಿದ್ದಾರೆ. ಇನ್ನು ಇಎನ್‌ಟಿ ವೈದ್ಯರಾದ ಡಾ| ಎ.ಆರ್‌. ಬಾಬು ಅವರು ಬಿಜೆಪಿಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಪ್ರಸಿದ್ಧರನ್ನೂ ಪರಿಗಣಿಸಿ ಟಿಕೆಟ್‌ ನೀಡುವ ಪರಿಪಾಠ ಇರುವುದರಿಂದ ತಮಗೂ ಟಿಕೆಟ್‌ ಸಿಗಬಹುದೆಂಬ ಆಶಾಭಾವ ಹೊಂದಿದ್ದಾರೆ.

Advertisement

ಉದ್ಯಮಿ ಪಿ. ವೃಷಭೇಂದ್ರಪ್ಪ ಅವರು ತಮ್ಮ ತಂದೆ ಹೊನ್ನಹಳ್ಳಿ ಪಟೇಲರ ರಾಜಕೀಯ ಹಿನ್ನೆಲೆಯಿಂದ ಕ್ಷೇತ್ರದಲ್ಲಿ ಒಡನಾಟವಿದ್ದು, ಪಕ್ಷದಲ್ಲೂ ಪ್ರಮುಖ ಮುಖಂಡರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳು, ಶಾಲೆಗಳ ನವೀಕರಣದ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ಟಿಕೆಟ್‌ ಕೊಟ್ಟರೆ ಗೆಲ್ಲುವೆ:

ಮಾಜಿ ಶಾಸಕ ಸಿ. ಗುರುಸ್ವಾಮಿಯವರ ಪುತ್ರಿಯಾದ ಜಿ.ಪಂ. ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್‌ ಪಕ್ಷದ ಅಭ್ಯರ್ಥಿಯಾ ಗಲು ತೀವ್ರ ತರಹದ ಚಟುವಟಿಕೆ ನಡೆಸಿದ್ದಾರೆ. ದಿ| ಗುರುಸ್ವಾಮಿ ಯವರು 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಏಕೈಕ ಶಾಸಕ. ಈಗ ಅವರ ಪುತ್ರಿ ತಮ್ಮ ತಂದೆಯವರಿಗೆ ಕ್ಷೇತ್ರದಾದ್ಯಂತ ಇದ್ದ ಒಡನಾಟ, ಸಂಘಟನೆ, ಕಾರ್ಯಕರ್ತರ ಬೆಂಬಲ ಹಾಗೂ ಎಲ್ಲ ಸಮುದಾಯದವರ ಬೆಂಬಲ ತಮ ಗಿದ್ದು, ಟಿಕೆಟ್‌ ನೀಡಿದರೆ ಕಾಂಗ್ರೆಸ್‌ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿ ಗೆಲ್ಲಬಲ್ಲೆ ಎಂದು ವರಿಷ್ಠರಲ್ಲಿ ಕೇಳಿಕೊಂಡಿದ್ದಾರೆ.

~ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next