Advertisement

ಪರಿಷತ್‌ ಚುನಾವಣೆ: ಮುಖಂಡರ ಸಭೆ ನಡೆಸಿದ ಸಿದ್ದು, ಡಿಕೆಶಿ

07:41 PM Sep 04, 2021 | Team Udayavani |

ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಮುಂಬರುವ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಪರಿಷತ್‌ನ 25 ಸ್ಥಾನಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶನಿವಾರ ಇಡೀ ದಿನ ಮುಖಂಡರ ಜತೆ ಸಮಾಲೋಚನೆ ನಡೆಸಿದರು.

Advertisement

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರ ಗೆಲ್ಲಲು ನಾವು ಶ್ರಮ ಹಾಕಬೇಕು. ಈಗಿನಿಂದಲೇ ಕಾರ್ಯದತ್ತ ಗಮನಹರಿಸಿ. ಜಿಲ್ಲಾ ಮಟ್ಟದಲ್ಲಿ ನಾಯಕರು ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಗೆಲುವಿಗೆ ಕಾರ್ಯತಂತ್ರ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಸಭೆಯ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿ ಹತ್ತು ದಿನಗಳ ಕಾಲಾವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈಗಾಗಲೇ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಅರ್ಜಿ ಕರೆಯಲಾಗಿದೆ. ಬೇರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಅಭ್ಯರ್ಥಿಗಳ ಅರ್ಜಿಯನ್ನು ಸದ್ಯದಲ್ಲೇ ಕರೆಯಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ದಿಲ್ಲಿ ವಿಧಾನಸಭೆಯಲ್ಲಿ ರಹಸ್ಯ ಸುರಂಗ ಮಾರ್ಗ

ವಿಧಾನಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಜಿಲ್ಲಾ ಮಟ್ಟದ ನಾಯಕರ ಜತೆ ಚರ್ಚೆ ಮಾಡಿ ವಾಸ್ತವಾಂಶ ಹಾಗೂ ಅಭಿಪ್ರಾಯ ಪಡೆಯುತ್ತಿದ್ದೇನೆ. ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.

Advertisement

ಕಾಂಗ್ರೆಸ್‌ ಪಕ್ಷದ ಜಿಲ್ಲಾವಾರು ಅಧ್ಯಕ್ಷರುಗಳು, ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳನ್ನು ಕರೆದು ಪಕ್ಷದ ಸಂಘಟನೆ, ಮುಂಬರುವ ಜಿಲ್ಲಾ ಹಾಗೂ ತಾಲೂಕೂ ಪಂಚಾಯ್ತಿ, ವಿಧಾನ ಪರಿಷತ್‌ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಮುಂದೆ ಯಾವ ರೀತಿ ಸಜ್ಜಾಗಬೇಕು ಎಂಬುದರ ಬಗ್ಗೆ ಅವರ ಅಭಿಪ್ರಾಯ ಪಡೆದು, ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಪಂಚಾಯ್ತಿಯಲ್ಲೂ “ಗಾಂಧೀಜಿ ಗ್ರಾಮ ಸ್ವರಾಜ್ಯ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮೆಲ್ಲ ನಾಯಕರು ಅಕ್ಟೋಬರ್‌ ತಿಂಗಳಲ್ಲಿ ದಿನಕ್ಕೆ 2 ಗ್ರಾಮ ಪಂಚಾಯ್ತಿಯಲ್ಲಿ ಪಕ್ಷದ ಸಭೆ ನಡೆಸಬೇಕು. ಅಲ್ಲಿ ಪ್ರತಿಭಟನೆ ಅಥವಾ ಕಾರ್ಯಕರ್ತರ ಸಭೆ ಮಾಡಬಹುದು. ಕಡ್ಡಾಯವಾಗಿ ತಿಂಗಳಲ್ಲಿ ನಿತ್ಯ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಭೆಗಳನ್ನು ಮಾಡಬೇಕು ಎಂದು ತಿಳಿಸಿದರು.

ಪಕ್ಷದಲ್ಲಿ ಸಹಕಾರ, ಸಂಚಾರ, ಸಾಂಸ್ಕೃತಿಕ ಘಟಕಗಳ ನೇಮಕ ಮಾಡುತ್ತಿದ್ದು, ಎಲ್ಲ ಘಟಕಗಳಲ್ಲೂ ಬ್ಲಾಕ್‌ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಸಮಿತಿ ರಚಿಸುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಉಸ್ತುವಾರಿ ವಹಿಸಿರುವ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರು ವಿಭಾಗೀಯ ಮಟ್ಟದ ಸಭೆ ಮಾಡಿದ್ದರು. ಅಲ್ಲಿ ಎಲ್ಲರ ಅಭಿಪ್ರಾಯ ಪಡೆದು, ಪಕ್ಷದ ಸಂಘಟನೆ ವಿಚಾರವಾಗಿ ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಜಾರಿಗೊಳಿಸಲು ನಾವು ಕ್ರಮಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next